ADVERTISEMENT

ಅಫ್ಗಾನಿಸ್ತಾನದಲ್ಲಿ ಶೀಘ್ರ ಪೋಲಿಯೊ ಲಸಿಕೆ ಆರಂಭ; ವಿಶ್ವ ಆರೋಗ್ಯ ಸಂಸ್ಥೆ

ರಾಯಿಟರ್ಸ್
Published 18 ಅಕ್ಟೋಬರ್ 2021, 11:57 IST
Last Updated 18 ಅಕ್ಟೋಬರ್ 2021, 11:57 IST
 ವಿಶ್ವ ಆರೋಗ್ಯ ಸಂಸ್ಥೆ
ವಿಶ್ವ ಆರೋಗ್ಯ ಸಂಸ್ಥೆ   

ಕಾಬೂಲ್‌: ಪೋಲಿಯೊ ಅಭಿಯಾನವನ್ನು ಬೆಂಬಲಿಸಲುತಾಲಿಬಾನ್‌ ಒಪ್ಪಿಗೆ ನೀಡಿದ ನಂತರ ಅಫ್ಗಾನಿಸ್ತಾನದಲ್ಲಿ ಮುಂದಿನ ತಿಂಗಳು ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪೋಲಿಯೊ ಲಸಿಕೆ ಹಾಕುವುದನ್ನು ಆರಂಭಿಸಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್‌ ಸೋಮವಾರ ಹೇಳಿವೆ.

ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಈಗಲೂ ಪೋಲಿಯೊ ಇದೆ. ಇಲ್ಲಿ ಕೊಳಚೆ ನೀರಿನ ಮೂಲಕ ಗುಣಪಡಿಸಲಾಗದ ಪೋಲಿಯೊ ಹರಡುತ್ತದೆ. ಇದು ಸಾಂಕ್ರಾಮಿಕ ರೋಗವಾಗಿದ್ದು ಚಿಕ್ಕ ಮಕ್ಕಳಲ್ಲಿ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ.

ದಶಕಗಳ ಕಾಲ ಪೋಲಿಯೊ ಲಸಿಕಾ ಆಂದೋಲನದ ಮೂಲಕ ಜಾಗತಿಕವಾಗಿ ಪೋಲಿಯೊ ನಿರ್ಮೂಲನೆ ಮಾಡಲಾಗಿದೆ. ಆದರೆ, ಅಸುರಕ್ಷತೆ, ಸಾಮೂಹಿಕ ವಲಸೆ ಮತ್ತು ಹೊರಗಿನ ಹಸ್ತಕ್ಷೇಪದಿಂದ ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನದ ಕೆಲವು ಪ್ರದೇಶಗಳಲ್ಲಿ ಸಾಮೂಹಿಕ ಪೋಲಿಯೊ ಲಸಿಕೆಯನ್ನು ತಡೆಯಲಾಯಿತು.

ADVERTISEMENT

ನವೆಂಬರ್‌ 8 ರಿಂದ ಪೋಲಿಯೊ ಲಸಿಕಾ ಅಭಿಯಾನ ಆರಂಭವಾಗಲಿದೆ. ಅಫ್ಗಾನಿಸ್ತಾನದ ದೂರದ ಮತ್ತು ಹಿಂದೆ ಪ್ರವೇಶಿಸಲಾಗದ ಪ್ರದೇಶಗಳಿಗೆ ತೆರಳಿ 30 ಲಕ್ಷಕ್ಕಿಂತ ಹೆಚ್ಚಿನ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.

‘ಅಫ್ಗಾನಿಸ್ತಾನದಲ್ಲಿ ಲಸಿಕೆ ನೀಡುವ ನಿರ್ಧಾರವು ಪೋಲಿಯೊವನ್ನು ನಿರ್ಮೂಲನೆ ಮಾಡುವ ಪ್ರಯತ್ನಗಳಲ್ಲಿ ಒಂದು ದೊಡ್ಡ ಹೆಜ್ಜೆಯನ್ನಿಡಲು ನಮಗೆ ಅನುವು ಮಾಡಿಕೊಡುತ್ತದೆ’ ಎಂದು ಯುನಿಸೆಫ್‌ನ ಪ್ರತಿನಿಧಿ ಹರ್ವೆ ಲುಡೋವಿಕ್‌ ಡಿ ಲೈಸ್‌ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘ಪೋಲಿಯೊವನ್ನು ಸಂಪೂರ್ಣವಾಗಿ ತೊಡೆದುಹಾಕಲು ಅಫ್ಗಾನಿಸ್ತಾನದ ಪ್ರತಿ ಮನೆಯ ಪ್ರತಿ ಮಗುವಿಗೂ ಲಸಿಕೆ ಹಾಕಬೇಕು. ನಮ್ಮ ಪಾಲುದಾರರೊಂದಿಗೆ ನಾವು ಇದನ್ನು ಮಾಡಲು ಹೊರಟಿದ್ದೇವೆ’ ಎಂದೂ ಅವರು ಹೇಳಿದರು.

ಡಿಸೆಂಬರ್‌ನಲ್ಲಿ ಪಾಕಿಸ್ತಾನದಲ್ಲಿ ಪೋಲಿಯೊ ಲಸಿಕೆಯ ಎರಡನೇ ಅಭಿಯಾನ ಆರಂಭಿಸಲು ಒಪ್ಪಿಗೆ ನೀಡಲಾಗಿದೆ.

2021ರ ಆಗಸ್ಟ್‌ನಲ್ಲಿ ಅಫ್ಗಾನಿಸ್ತಾನ ತಾಲಿಬಾನ್‌ ವಶವಾದ ನಂತರ ದೇಶದಲ್ಲಿ ಒಂದು ಪೋಲಿಯೊ ಪ್ರಕರಣ ವರದಿಯಾಗಿದೆ. 2020ರಲ್ಲಿ 56 ಪೋಲಿಯೊ ಪ್ರಕರಣ ವರದಿಯಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.