ಕೊಲಂಬೊ: ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿರುವ ಶ್ರಿಲಂಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರಕ್ಕೆ ತಿರುಗಿದೆ. ಇದರಿಂದಾಗಿ ಎಂಟು ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ.
ಈ ಎಲ್ಲ ಬೆಳವಣಿಗೆಗಳಿಗೆ ಸರ್ಕಾರವೇ ಹೊಣೆ ಎಂದು ಕ್ರಿಕೆಟ್ ದಿಗ್ಗಜರಾದ ಕುಮಾರ ಸಂಗಕ್ಕಾರ ಮತ್ತು ಮಹೇಲ ಜಯವರ್ಧನೆ ಸೇರಿದಂತೆ ಅನೇಕರು ಆಕ್ರೋಶ ಹೊರಹಾಕಿದ್ದಾರೆ.
‘ತಮ್ಮ ಮೂಲಭೂತ ಅಗತ್ಯಗಳು ಮತ್ತು ಹಕ್ಕುಗಳಿಗಾಗಿ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಸರ್ಕಾರದಲ್ಲಿರುವ ಕೊಲೆಗಡುಕರು ಗೂಂಡಾಗಳ ಬೆಂಬಲದೊಂದಿಗೆ ಸಾರ್ವಜನಿಕರ ಮೇಲೆ ದಾಳಿ ಮಾಡಿರುವುದು ಅಸಹ್ಯಕರ’ ಎಂದು ಸಂಗಕ್ಕಾರ ಟ್ವೀಟ್ ಮಾಡಿದ್ದಾರೆ.
ಇದು ಸರ್ಕಾರದ ಉದ್ದೇಶಪೂರ್ವಕ, ಬೆಂಬಲಿತ ಹಿಂಸಾಚಾರವಾಗಿದೆ ಎಂದು ಸಂಗಕ್ಕಾರ ಕಿಡಿಕಾರಿದ್ದಾರೆ.
ಮಹಿಳೆಯೊಬ್ಬರನ್ನು ಥಳಿಸುತ್ತಿರುವ ವಿಡಿಯೊವನ್ನು ಲಗತ್ತಿಸಿ ಟ್ವೀಟ್ ಮಾಡಿರುವ ಮಹೇಲ ಜಯವರ್ಧನೆ, ‘ಪೊಲೀಸ್ ಅಧಿಕಾರಿಗಳ ಮುಂದೆಯೇ ಸರ್ಕಾರದ ಬೆಂಬಲಿಗರು ಪ್ರತಿಭಟನಾನಿರತ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವಿದು. ಶ್ರೀಲಂಕಾ ಸರ್ಕಾರಕ್ಕೆ ನಾಚಿಕೆಯಾಗಬೇಕು’ ಎಂದು ಬರೆದುಕೊಂಡಿದ್ದಾರೆ.
ಆರ್‌ಸಿಬಿ ತಂಡದ ಲೆಗ್ ಸ್ಪಿನ್ನರ್ ವಾಣಿಂದು ಹಸರಂಗ ಕೂಡ ಟ್ವೀಟ್ ಮಾಡಿದ್ದು, ‘ಮುಗ್ಧ ಮತ್ತು ಶಾಂತಿಯುತ ಪ್ರತಿಭಟನಾಕಾರರ ಮೇಲಿನ ಇಂದಿನ ದಾಳಿಯನ್ನು ಒಟ್ಟುಗೂಡಿಸುವ ಎರಡು ಪದಗಳೆಂದರೇ ಅದು ‘ಹೇಡಿತನ ಮತ್ತು ಅನಾಗರಿಕತೆ’ ಎಂದು ಬರೆದುಕೊಂಡಿದ್ದಾರೆ.
ಶ್ರೀಲಂಕಾದ ಪ್ರವಾಸಿ ತಂಡದೊಂದಿಗೆ ಬಾಂಗ್ಲಾದೇಶದಲ್ಲಿರುವ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ನಿರೋಷನ್ ಡಿಕ್ವೆಲ್ಲಾ ಅವರು ‘ಶಾಂತಿಯುತ ಮತ್ತು ಮುಗ್ಧ ಪ್ರತಿಭಟನಾಕಾರರ ಮೇಲೆ ಸುಸಂಘಟಿತವಾಗಿ ದಾಳಿ ನಡೆಸಿರುವ ಸರ್ಕಾರದ ಬಗ್ಗೆ ನಿರಾಶೆ ಮೂಡಿದೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಹಲವು ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಆಡಳಿತಾರೂಢ ರಾಜಪಕ್ಸ ಕುಟುಂಬದ ಬೆಂಬಲಿಗರು ಸೋಮವಾರ ದಾಳಿ ನಡೆಸಿರುವುದು ಹಿಂಸಾಚಾರಕ್ಕೆ ಕಾರಣವಾಗಿದೆ.
ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರು ರಾಷ್ಟ್ರ ರಾಜಧಾನಿಯಲ್ಲಿರುವ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಸೇರಿದಂತೆ ಹಲವು ರಾಜಕಾರಣಿಗಳ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ರಾಜಪಕ್ಸ ಅವರ ಅಧಿಕೃತ ನಿವಾಸವನ್ನು ಸೋಮವಾರ ರಾತ್ರಿ ಸುತ್ತುವರಿದು, ಒಳಗೆ ನುಗ್ಗಲು ಪ್ರಯತ್ನಿಸಿದ್ದರು. ಬಳಿಕ ನಿವಾಸದ ಹೊರಗೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದರು.
ಮಹೇಲ ಜಯವರ್ಧನೆ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿದ್ದಾರೆ. ಇತ್ತ ಕುಮಾರ ಸಂಗಕ್ಕಾರ ರಾಜಸ್ಥಾನ ರಾಯಲ್ಸ್‌ನ ಮುಖ್ಯ ಕೋಚ್ ಆಗಿದ್ದು, ಸದ್ಯ ಭಾರತದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.