ರೋಮ್(ಎಪಿ): ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಬುಧವಾರ ಇಲ್ಲಿನ ಗೆಮೆಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕರುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಉದರ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಎರಡು ವರ್ಷಗಳ ಹಿಂದೆಯೂ ಉದರ ಶಸ್ತ್ರ ಚಿಕಿತ್ಸೆಗೆ ಪೋಪ್ ಒಳಪಟ್ಟಿದ್ದರು. ದೊಡ್ಡ ಕರುಳಿನ ಉರಿಯೂತದ ಸಮಸ್ಯೆ ಇದ್ದಿದ್ದರಿಂದ 2021ರ ಜುಲೈ 4ರಂದು ಅವರಿಗೆ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ 33 ಸೆಂಟಿ ಮೀಟರ್‌ನಷ್ಟು (13 ಇಂಚು) ದೊಡ್ಡ ಕರುಳನ್ನು ತೆಗೆದುಹಾಕಿದ್ದರು. ಹತ್ತು ದಿನಗಳ ಕಾಲ ಪೋಪ್ ಆಸ್ಪತ್ರೆಯಲ್ಲಿದ್ದು ಚೇತರಿಸಿಕೊಂಡಿದ್ದರು.
86ರ ಹರೆಯದ ಪೋಪ್ ಅವರಿಗೆ ಹಳೆಯ ಗಾಯದ ಮೇಲೆ ಹರ್ನಿಯಾ ಸಮಸ್ಯೆ ಕಾಣಿಸಿಕೊಂಡಿತ್ತು. ಅದಕ್ಕಾಗಿ ಮತ್ತೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಬುಧವಾರ ಮಧ್ಯಾಹ್ನದಿಂದ ಅವರನ್ನು ಸಾಮಾನ್ಯ ಅರಿವಳಿಕೆ ನೀಡಲಾಗಿತ್ತು. ಪೂರ್ಣ ಚೇತರಿಸಿಕೊಳ್ಳುವವರೆಗೆ ಗೆಮೆಲ್ಲಿ ಆಸ್ಪತ್ರೆಯಲ್ಲಿ ಇರಲಿದ್ದಾರೆ ಎಂದು ವ್ಯಾಟಿಕನ್ ಚರ್ಚ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.