ADVERTISEMENT

ಕ್ಯೂಬಾ | ವಿದ್ಯುತ್ ಎಮರ್ಜೆನ್ಸಿ: ಶಾಲೆಗಳಿಗೆ ರಜೆ, ರಸ್ತೆಯಲ್ಲೇ ನಿಂತ ‌ವಾಹನಗಳು

ಏಜೆನ್ಸೀಸ್
Published 19 ಅಕ್ಟೋಬರ್ 2024, 3:21 IST
Last Updated 19 ಅಕ್ಟೋಬರ್ 2024, 3:21 IST
<div class="paragraphs"><p>ವಿದ್ಯುತ್ ಇಲ್ಲದೆ ಕ್ಯೂಬಾದ ಬೀದಿಗಳಲ್ಲಿ ಕತ್ತಲೆ ಆವರಿಸಿರುವುದು</p></div>

ವಿದ್ಯುತ್ ಇಲ್ಲದೆ ಕ್ಯೂಬಾದ ಬೀದಿಗಳಲ್ಲಿ ಕತ್ತಲೆ ಆವರಿಸಿರುವುದು

   

–ರಾಯಿಟರ್ಸ್ ಚಿತ್ರ

ಹವಾನ: ದೇಶದ ಅತಿ ದೊಡ್ಡ ವಿದ್ಯುತ್‌ ಸ್ಥಾವರ ಸ್ಥಗಿತಗೊಂಡಿದ್ದು, ಕ್ಯೂಬಾದಾದ್ಯಂತ ಕತ್ತಲೆ ಆವರಿಸಿದೆ. ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸುತ್ತಿರುವ ದ್ವೀಪ ರಾಷ್ಟ್ರ ‘ವಿದ್ಯುತ್ ತುರ್ತುಪರಿಸ್ಥಿತಿ’ ಘೋಷಣೆ ಮಾಡಿದೆ.

ADVERTISEMENT

ರಾಜಧಾನಿ ಹವಾನದಲ್ಲಿ ಶಾಲೆಗಳು ಮುಚ್ಚಲಾಗಿದ್ದು, ಸಂಚಾರ ದೀಪಗಳು ಕಾರ್ಯಾಚರಿಸದೆ ವಾಹನಗಳು ರಸ್ತೆಯಲ್ಲಿಯೇ ನಿಂತಿವೆ. ವಿದ್ಯುತ್ ಮರುಸ್ಥಾಪಿಸುವ ಕೆಲಸ ನಡೆಯುತ್ತಿದೆ ಎಂದು ಇಂಧನ ಇಲಾಖೆಯ ಮುಖ್ಯಸ್ಥ ಲಾಝರಾ ಗುರೆ ಹೇಳಿದ್ದಾರೆ.

‘ಸದ್ಯ ನಮಲ್ಲಿ ಅಲ್ಪ ಪ್ರಮಾಣದ ವಿದ್ಯುತ್ ಉತ್ಪಾದನೆ ನಡೆಯುತ್ತಿದೆ. ಅದನ್ನು ದೇಶದಾದ್ಯಂತ ಇರುವ ವಿದ್ಯುತ್ ಸ್ಥಾವರ ಪುನರಾರಂಭಿಸಲು ಬಳಸುತ್ತೇವೆ’ ಎಂದು ಅವರು ಹೇಳಿದ್ದಾರೆ.

ದೇಶದ ಎಂಟು ಕಲ್ಲಿದ್ದಲು ವಿದ್ಯುತ್ ಸ್ಥಾವರಗಳ ಪೈಕಿ ಅತಿ ದೊಡ್ಡ ಸ್ಥಾವರವಾದ ‘ಆ್ಯಂಟನಿಯೊ ಗುಟೆರಸ್ ವಿದ್ಯುತ್ ಸ್ಥಾವರ’ ಏಕಾಏಕಿ ಸ್ಥಗಿತಗೊಂಡಿದ್ದರಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ಅವರು ಹೇಳಿದ್ದಾರೆ.

ಕಳೆದೊಂದು ವಾರದಿಂದ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಕೆಲವೊಂದು ಪ್ರಾಂತ್ಯಗಳಲ್ಲಿ 20 ಗಂಟೆಗೂ ಅಧಿಕ ಕಾಲ ವಿದ್ಯುತ್ ಇಲ್ಲದೆ ಜನ ಪರದಾಡಿದ್ದರು. ಇದರ ಬೆನ್ನಲ್ಲೇ ಇಡೀ ದೇಶದಾದ್ಯಂತ ಈ ಸಮಸ್ಯೆ ಹಬ್ಬಿದ್ದು, 1.10 ಕೋಟಿ ನಾಗರಿಕರು ಕತ್ತಲೆಯಲ್ಲಿ ಕಾಲ ಕಳೆಯುವಂತೆ ಆಗಿದೆ.

ಮನೆಗಳಿಗೆ ವಿದ್ಯುತ್ ಪೂರೈಸಲು ಅನಗತ್ಯ ಸಾರ್ವಜನಿಕ ಸೇವೆಗಳನ್ನು ರದ್ದು ಮಾಡಿ ಸರ್ಕಾರ ಆದೇಶಿಸಿದೆ. ದೇಶದಾದ್ಯಂತ ಸೋಮವಾರದವರೆಗೆ ಶಾಲೆಗಳನ್ನು ಬಂದ್ ಮಾಡಲಾಗಿದೆ. ಆಸ್ಪತ್ರೆ ಸೇರಿ ಅಗತ್ಯ ಸೇವೆಗಳಿಗೆ ಜನರೇಟರ್ ಮೂಲಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.

ಕಳೆದ ಮೂರು ತಿಂಗಳಿನಿಂದ ಕ್ಯೂಬಾದ ನಾಗರಿಕರು ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದಾರೆ. ದೇಶದ ವಿದ್ಯುತ್ ಕೊರತೆ ಶೇ 30ರಷ್ಟಿತ್ತು. ಗುರುವಾರ ಅದು ಶೇ 50ಕ್ಕೆ ಏರಿಕೆಯಾಗಿದೆ. ಕತ್ತಲೆಯಲ್ಲಿ ಮುಳುಗಿರುವ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಇದು ನಮ್ಮ ವಿದ್ಯುತ್ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಅವರು (ಸರ್ಕಾರ) ಎಲ್ಲವನ್ನೂ ಕಲಸುಮೇಲೋಗರ ಮಾಡಿ ಬಿಟ್ಟಿದ್ದಾರೆ. ನಮ್ಮ ಮೊಬೈಲ್‌ಗಳಲ್ಲಿ ಚಾರ್ಜ್ ಇಲ್ಲ. ನೆಟ್‌ವರ್ಕ್ ಕೂಡ ಸಿಗುತ್ತಿಲ್ಲ’ ಎಂದು 47 ವರ್ಷದ ಬಾರ್ಬನಾ ಲೋಪೆಜ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇದು ಹುಚ್ಚು. ನಮ್ಮ ವಿದ್ಯುತ್ ವ್ಯವಸ್ಥೆಯ ದೌರ್ಬಲ್ಯ ಇದು. ಯಾವುದೇ ಮೀಸಲು ಉತ್ಪಾದನೆ ಇಲ್ಲ. ದೇಶವನ್ನು ಉಳಿಸಿಕೊಳ್ಳಲು ಏನೂ ಇಲ್ಲ. ನಾವು ದಿನದಿಂದ ದಿನಕ್ಕೆ ಬದುಕುತ್ತಿದ್ದೇವೆ’ ಎಂದು ಕೇಂದ್ರ ಹವಾನದ ನಿವಾಸಿ 80 ವರ್ಷದ ಎಲೋಯ್ ಫೋನ್, ಎಎಫ್‌ಪಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ವಿದ್ಯುತ್ ಸಮಸ್ಯೆ ಬಗೆಹರಿಸದೆ ವಿರಮಿಸುವುದಿಲ್ಲ’ ಎಂದು ಕ್ಯೂಬಾ ಅಧ್ಯಕ್ಷ ಮಿಗುಲ್ ಡಯಾಝ್ ಕಾನೆಲ್ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರ ಆಡಳಿತದಲ್ಲಿ ಅಮೆರಿಕವು ಆರು ದಶಕಗಳ ವ್ಯಾಪಾರ ನಿರ್ಬಂಧವನ್ನು ಬಿಗಿಗೊಳಿಸಿದ ಪರಿಣಾಮ ಕ್ಯೂಬಾದ ವಿದ್ಯುತ್ ಸ್ಥಾವರಗಳಿಗೆ ಇಂಧನ ಪಡೆಯುವಲ್ಲಿ ಉಂಟಾಗಿರುವ ಸಮಸ್ಯೆಯೇ ಪ್ರಸ್ತುತ ಪರಿಸ್ಥಿತಿಗೆ ಕಾರಣ ಎಂದು ಅವರು ಹೇಳಿದ್ದಾರೆ.

(ವಿವಿಧ ಏಜೆನ್ಸಿಗಳ ವರದಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.