ADVERTISEMENT

Morocco Earthquake | ಭೂಕಂಪಕ್ಕೆ ನಲುಗಿದ ಮೊರೊಕ್ಕೊ

ರಸ್ತೆಯಲ್ಲೇ ಕಾಲ ಕಳೆಯುತ್ತಿರುವ ಜನತೆ, ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗೆ ಅವಿರತ ಶ್ರಮ

ಎಪಿ
Published 9 ಸೆಪ್ಟೆಂಬರ್ 2023, 15:50 IST
Last Updated 9 ಸೆಪ್ಟೆಂಬರ್ 2023, 15:50 IST
<div class="paragraphs"><p>(ರಾಯಿಟರ್ಸ್ ಚಿತ್ರ)</p></div>

(ರಾಯಿಟರ್ಸ್ ಚಿತ್ರ)

   

ಮಾರುಕೇಶ್‌: ಪ್ರಬಲ ಭೂಕಂಪನದಿಂದಾಗಿ ಮೊರೊಕ್ಕೊ ಅಕ್ಷರಶಃ ನಲುಗಿದೆ. ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ತಮ್ಮವರನ್ನು ಕಳೆದುಕೊಂಡ ಜನರ ನೋವು, ಆಕ್ರಂದನ ಮುಗಿಲು ಮುಟ್ಟಿದೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಜನರ ರಕ್ಷಣೆಗೆ ಮೊರೊಕ್ಕೊ ಸೇನೆ ಮತ್ತು ತುರ್ತು ಸೇವಾ ಪಡೆ ಅವಿರತ ಶ್ರಮಪಡುತ್ತಿವೆ.

ಶುಕ್ರವಾರ ರಾತ್ರಿ 11.11ಕ್ಕೆ ಭೂಕಂಪ ಸಂಭವಿಸಿದೆ. ಭೂಕಂಪನ ಕೇಂದ್ರ ಬಿಂದು ಭೂಮಿಯ ಮೇಲ್ಮೈನಿಂದ 18 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆ ಹೇಳಿದರೆ, 11 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ ಎಂದು ಮೊರೊಕ್ಕೊ ಭೂಕಂಪನ ಅಧ್ಯಯನ ಸಂಸ್ಥೆ ತಿಳಿಸಿದೆ.

ADVERTISEMENT

‘ಭೂಕಂಪಪೀಡಿತ ಪ್ರದೇಶದಲ್ಲಿ ಹಲವು ಮನೆಗಳು ಧರೆಗುರುಳಿವೆ, ಕಟ್ಟಡಗಳು ನೆಲಸಮವಾಗಿವೆ. ಕೆಲವು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ವಿದ್ಯುತ್‌ ಮತ್ತು ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ’ ಎಂದು ಭೂಕಂಪನ ಕೇಂದ್ರ ಬಿಂದು ಇರುವ ಸ್ಥಳಕ್ಕೆ ಸಮೀಪವಿರುವ ನಗರದ ಮುಖ್ಯಸ್ಥರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ರಸ್ತೆಗಳ ಮೇಲೆ ದೊಡ್ಡ ಬಂಡೆಗಳು ಬಿದ್ದಿರುವುದು ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ. ಭೂಕಂಪಪೀಡಿತ ಪ್ರದೇಶಗಳಿಗೆ ಹೊದಿಕೆ ಮತ್ತಿತರ ವಸ್ತುಗಳನ್ನು ರವಾನಿಸಲಾಗುತ್ತಿದೆ ಎಂದು ವರದಿಯಾಗಿದೆ. 

12ನೇ ಶತಮಾನದಲ್ಲಿ ನಿರ್ಮಿಸಲಾದ ಜನಪ್ರಿಯ ಕೌತೌಬಿಯಾ ಮಸೀದಿ ಹಾನಿಗೊಳಗಾಗಿದೆ.

‘ಉಟ್ಟ ಬಟ್ಟೆಯಲ್ಲೇ ಹೊರಗೆ ಓಡಿದೆ’: 

ಭೂಮಿ ಕಂಪಿಸುತ್ತಿದ್ದಂತೆಯೇ ನಿದ್ರೆಯಲ್ಲಿದ್ದ ಜನರು ಎಚ್ಚರಗೊಂಡು ಭಯಭೀತರಾಗಿ ಮನೆಯಿಂದ ಹೊರಗೆ  ಓಡಿ ಬಂದಿದ್ದಾರೆ. ಗೋಡೆಗಳು ಕುಸಿಯುವ ಭೀತಿಯಲ್ಲಿ ಮತ್ತೆ ಮನೆಯೊಳಗೆ ಹೋಗದೆ ರಸ್ತೆಯಲ್ಲೇ ರಾತ್ರಿಯಿಡೀ ಕಾಲ ಕಳೆದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

‘ಮೂರು ಭಾರಿ ಭೂಮಿ ಕಂಪಿಸಿದ ಅನುಭವವಾಯಿತು. ಮತ್ತೆ ಭೂಮಿ ಕಂಪಿಸುವ ಭಯದಲ್ಲಿ ಅನೇಕ ಕುಟುಂಬಗಳು ಮನೆಗೆ ತೆರಳದೆ ಹೊರಗೆ ಇವೆ. ಜನರ ಆಕ್ರಂದನ, ಚೀರಾಟ ತಾಳಲಸಾಧ್ಯವಾಗಿದೆ’ ಎಂದು ಎಂಜಿನಿಯರ್‌ ಫೈಸಲ್‌ ಬದೌರ್‌ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದರು.

‘ನನ್ನ ಹಾಸಿಗೆ ಹಾರಿ ಹೋಗುತ್ತಿದೆ ಅನಿಸಿತು. ಭಯಭೀತನಾಗಿ ಅರ್ಧಂಬರ್ಧ ಬಟ್ಟೆಯಲ್ಲೇ ಮನೆಯಿಂದ ಹೊರಗೆ ಓಡಿದೆ’ ಎಂದು ಮಾರುಕೇಶ್‌ ನಗರದ ನಿವಾಸಿ ಮೈಕೆಲ್‌ ಬಿಜೆಟ್‌ ಭೂಕಂಪದ ತೀವ್ರತೆಯನ್ನು ತೆರೆದಿಟ್ಟರು.

‘ಕುಟುಂಬದ ಕನಿಷ್ಠ 10 ಮಂದಿಯನ್ನು ಕಳೆದುಕೊಂಡು ಆಘಾತಗೊಂಡಿದ್ದೇನೆ’ ಎಂದು ಸ್ಥಳೀಯ ನಿವಾಸಿ ಹೌದಾ ಔಟಾಸ್ಸಫ್‌ ಅಳಲು ತೋಡಿಕೊಂಡರು.

‘ಆಗಷ್ಟೇ ನಿದ್ದೆ ಹೋಗಿದ್ದೆ. ಬಾಗಿಲು, ಕಿಟಕಿಗಳು ಜೋರಾಗಿ ಬಡಿದುಕೊಳ್ಳುವ ಶಬ್ದ ಕೇಳಿಸಿತು. ಆತಂಕದಿಂದ ಹೊರಗೆ ಬಂದೆ. ನಾನು ಬದುಕುಳಿಯುವುದಿಲ್ಲ ‌ಅಂದುಕೊಂಡೆ’ ಎಂದು 80ರ ವರ್ಷದ ವೃದ್ಧೆ ಘನ್ನೌ ನಜೆಮ್‌  ಹೇಳಿದರು. 

ಹಿಂದಿನ ಭೂಕಂಪಗಳು

*1960ರಲ್ಲಿ ಮೊರೊಕ್ಕೊದ ಅಗದೀರ್‌ ನಗರದಲ್ಲಿ ರಿಕ್ಟರ್‌ ಮಾಪಕದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆಗ ಸಾವಿರಾರು ಜನರು ಮೃತಪಟ್ಟಿದ್ದರು. ಘಟನೆ ಬಳಿಕ ಕಟ್ಟಡ ನಿರ್ಮಾಣದ ನಿಯಮಗಳಲ್ಲಿ  ಬದಲಾವಣೆ ತರಲಾಗಿತ್ತು.

*2004ರಲ್ಲಿ ಮೆಡಿಟರೇನಿಯನ್‌ ಸಮುದ್ರ ತೀರದಲ್ಲಿರುವ ಅಲ್‌ ಹೊಸೈಮಾ ನಗರದಲ್ಲಿ ಭೂಕಂಪ ಸಂಭವಿಸಿ, 600ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು.

ಹಲವು ದೇಶಗಳ ನೆರವು

ಜಿ–20 ಯುರೋಪ್‌ ಮಧ್ಯಪ್ರಾಚ್ಯ ಸೇರಿದಂತೆ ಹಲವು ದೇಶಗಳು ಮೊರೊ‌ಕ್ಕೊಗೆ ನೆರವಿನ ಭರವಸೆ ನೀಡಿವೆ. ಟರ್ಕಿ ಫ್ರಾನ್ಸ್‌ ಜರ್ಮಿನಿ ದೇಶಗಳೂ ಸಹಾಯಹಸ್ತ ಚಾಚುವ ಆಶ್ವಾಸನೆ ನೀಡಿವೆ. ಮೊರೊಕ್ಕೊಗೆ ಮಾನವೀಯ ಮತ್ತು ವೈದ್ಯಕೀಯ ನೆರವು ನೀಡುವ ಉದ್ದೇಶದಿಂದ ತೆರಳುವ ವಿಮಾನಗಳಿಗೆ ಅನುಮತಿ ನೀಡುವುದಾಗಿ ಅಲ್ಗೇರಿಯಾ ಘೋಷಿಸಿದೆ. ಅವಘಡದಲ್ಲಿ ಬದುಕುಳಿದವರ ರಕ್ಷಣೆಯೇ ಮೊದಲ ಆದ್ಯತೆ. ಅಗತ್ಯವಿದ್ದಲ್ಲಿ ಮೊರೊಕ್ಕೊಗೆ ರಕ್ಷಣಾ ಪಡೆಗಳನ್ನು ಕಳುಹಿಸುವುದಾಗಿ ಸ್ಪೇನ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.