ಸ್ಯಾನ್ ಫ್ರಾನ್ಸಿಸ್ಕೋ: ಅಸಹ ಹೃದಯ ಬಡಿತದ ಎಚ್ಚರಿಕೆಯೊಂದಿಗೆ ತನ್ನನ್ನು ಮತ್ತು ಹುಟ್ಟಲಿರುವ ಮಗುವಿನ ಜೀವವನ್ನು ಉಳಿಸಿದ್ದಕ್ಕಾಗಿ ಅಮೆರಿಕ ಮೂಲದ ಗರ್ಭಿಣಿ ಮಹಿಳೆಯೊಬ್ಬರು ಆ್ಯಪಲ್ ವಾಚ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಹೆರಿಗೆ ನಿಗದಿತ ದಿನಾಂಕಕ್ಕೆ ಕೆಲವು ವಾರಗಳ ಮೊದಲಿನಿಂದ ಜೆಸ್ಸಿ ಕೆಲ್ಲಿ ಅವರು ತಮ್ಮ ಹೃದಯ ಬಡಿತವನ್ನು ನಿಮಿಷಕ್ಕೆ 120 ಬೀಟ್ಸ್‌ಗೆ ಹೆಚ್ಚಿಸುವಂತಹ ಯಾವುದೇ ಕೆಲಸ ಮಾಡಿರಲಿಲ್ಲ. ಆದರೆ ಅವರ ಆ್ಯಪಲ್ ವಾಚ್ ಹೃದಯ ಬಡಿತ ಹೆಚ್ಚಿದೆ ಎಂಬ ಎಚ್ಚರಿಕೆ ನೀಡುತ್ತಿತ್ತು ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
‘ವಾಚ್ ಮೊದಲ ಸಲ ಎಚ್ಚರಿಕೆ ನೀಡಿದಾಗ ವಿಚಿತ್ರವಾಗಿದೆ ಎಂದು ಭಾವಿಸಿದೆ. ಬಹುಶಃ 10 ನಿಮಿಷಗಳ ನಂತರ ಎರಡನೆ ಸಲ ಮುನ್ನೆಚ್ಚರಿಕೆ ನೀಡಿತು. ಅರ್ಧ ಗಂಟೆ ಅಥವಾ ನಂತರದಲ್ಲಿ ಮೂರನೆ ಸಲ ಎಚ್ಚರಿಕೆ ಲಭಿಸಿತು. ಏನೋ ಆಗುತ್ತಿದೆ ಎಂದು ತಕ್ಷಣ ಆಸ್ಪತ್ರೆಗೆ ಧಾವಿಸಿದೆ’ ಎಂದು ಕೆಲ್ಲಿ ಹೇಳಿದ್ದಾರೆ.
ಕೆಲ್ಲಿ ಆಸ್ಪತ್ರೆಗೆ ಬಂದಾಗ, ಅವರ ರಕ್ತದೊತ್ತಡ ಕುಸಿಯುತ್ತಿತ್ತು. ಗರ್ಭಧಾರಣೆಯ ತೊಡಕಿನಿಂದ ರಕ್ತ ಕಳೆದುಕೊಳ್ಳುತ್ತಿರುವುದನ್ನು ಗಮನಿಸಿದ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಮೂರು ಗಂಟೆಗಳ ನಂತರ, ಅವರಿಗೆ ಶೆಲ್ಬಿ ಮೇರಿ ಎಂಬ ಆರೋಗ್ಯಕರ ಹೆಣ್ಣು ಮಗು ಜನಿಸಿದೆ.
ಆ್ಯಪಲ್ ನೀಡುವ ಈ ಎಚ್ಚರಿಕೆಯನ್ನು ಪ್ರತಿಯೊಬ್ಬರೂ ಗಮನಿಸುವಂತೆ ಕೆಲ್ಲಿ ಸಲಹೆ ನೀಡಿದ್ದಾರೆ. ಇದು ಕೇವಲ ಪಠ್ಯ ಸಂದೇಶವಲ್ಲ, ಅದರತ್ತ ಗಮನ ಹರಿಸಿ ಮತ್ತು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಅವರು ತಿಳಿಸಿದ್ದಾರೆ.
ಆ್ಯಪಲ್ ವಾಚ್ ತಮ್ಮಿಂದ ಗುರುತಿಸಲಾಗದ ಹೃದಯದ ಅಡಚಣೆಯನ್ನು ಪತ್ತೆಹಚ್ಚಿ ತಮ್ಮ ಮತ್ತು ಮಗುವಿನ ಜೀವ ಉಳಿಸಿದೆ ಎಂದು ಅವರು ಸಂತಸ ಹಂಚಿಕೊಂಡರು.
ಎಲೈನ್ ಥಾಂಪ್ಸನ್ ಎಂಬ ಮಹಿಳೆಯೊಬ್ಬರಿಗೂ ಆ್ಯಪಲ್ ವಾಚ್ ಇದೇ ರೀತಿ ಅನುಭವ ನೀಡಿತ್ತು. ಕಾಯಿಲೆಯಿಂದ ಬಳಲುತ್ತಿದ್ದ ಅವರು 2018 ರಲ್ಲಿ ತಮ್ಮ ಮಗಳ ಸೂಚನೆ ಮೇರೆಗೆ ಆರೋಗ್ಯ ಮೇಲ್ವಿಚಾರಣೆಗಾಗಿ ಆ್ಯಪಲ್ ವಾಚ್ ಧರಿಸಲು ಪ್ರಾರಂಭಿಸಿದ್ದರು. ಅವರ ಹೃದಯದ ಸಮಸ್ಯೆ ಪತ್ತೆಗೂ ಈ ವಾಚ್ ಸಹಾಯ ಮಾಡಿತ್ತು ಎಂದು ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.