ವಾಷಿಂಗ್ಟನ್: ಎಂಜಿನಿಯರಿಂಗ್, ಭೌತಿಕ ವಿಜ್ಞಾನ ಮತ್ತು ಜೀವ ವಿಜ್ಞಾನಗಳಲ್ಲಿನ ಸಂಶೋಧನೆಗಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಪ್ರತಿಷ್ಠಿತ ರಾಷ್ಟ್ರೀಯ ವಿಜ್ಞಾನ ಪದಕವನ್ನು ಭಾರತೀಯ-ಅಮೆರಿಕನ್ ವಿಜ್ಞಾನಿ ಡಾ. ಸುಬ್ರ ಸುರೇಶ್ ಅವರಿಗೆ ಪ್ರದಾನ ಮಾಡಿದರು.
ಸುರೇಶ್ ಅವರು ಅಮೆರಿಕದ ನ್ಯಾಷನಲ್ ಸೈನ್ಸ್ ಫೌಂಡೇಶನ್‌ನ ಮಾಜಿ ನಿರ್ದೇಶಕರಾಗಿದ್ದಾರೆ.
ಒಟ್ಟು ಒಂಬತ್ತು ಜನರಿಗೆ ಪ್ರತಿಷ್ಠಿತ ವಿಜ್ಞಾನ ಪದಕವನ್ನು ಬೈಡನ್ ಪ್ರದಾನ ಮಾಡಿದರು.
ಎಂಜಿನಿಯರಿಂಗ್, ಭೌತಿಕ ವಿಜ್ಞಾನ ಮತ್ತು ಜೀವ ವಿಜ್ಞಾನಗಳಾದ್ಯಂತ ಸಂಶೋಧನೆಗಾಗಿ ಮತ್ತು ವಿಶೇಷವಾಗಿ ಮೆಟೀರಿಯಲ್ ಸೈನ್ಸ್ ಅಧ್ಯಯನ ಹಾಗೂ ಇತರ ವಿಭಾಗಗಳಿಗೆ ಅದರ ಅನ್ವಯವನ್ನು ಮುಂದುವರಿಸಿದ್ದಕ್ಕಾಗಿ ಸುರೇಶ್ ಅವರಿಗೆ ಪದಕವನ್ನು ನೀಡಲಾಯಿತು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆ ಮತ್ತು ಸಹಯೋಗದಲ್ಲಿ ಸುರೇಶ್ ಅವರ ಬದ್ಧತೆಯನ್ನು ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಪದಕಗಳ ಪ್ರತಿಷ್ಠಾನ ಗಮನಿಸಿದೆ. ವಿಜ್ಞಾನವು ಜನರು ಮತ್ತು ರಾಷ್ಟ್ರಗಳ ನಡುವೆ ಹೇಗೆ ತಿಳುವಳಿಕೆ ಮತ್ತು ಸಹಕಾರವನ್ನು ರೂಪಿಸುತ್ತದೆ ಎಂಬುದನ್ನು ಈ ಸಂಶೋಧನೆ ಪ್ರದರ್ಶಿಸಿದೆ ಎಂದು ಅದು ಹೇಳಿದೆ.
ಬ್ರೌನ್ ವಿಶ್ವವಿದ್ಯಾನಿಲಯದ ಹೇಳಿಕೆಯ ಪ್ರಕಾರ, ಈ ಗೌರವ ಅತ್ಯಂತ ತೃಪ್ತಿ ತಂದಿದೆ ಎಂದು ಸುರೇಶ್ ಹೇಳಿದ್ದಾರೆ.
1956ರಲ್ಲಿ ಭಾರತದಲ್ಲಿ ಜನಿಸಿದ ಸುರೇಶ್ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ, ಮೆಸಚೂಸೆಟ್ಸ್‌ನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪಿಎಚ್‌ಡಿ ಮುಗಿಸಿದರು.
1983ರಲ್ಲಿ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಅಧ್ಯಾಪಕರಾಗಿ ಸೇರಿದ ಅವರು, ಅತ್ಯಂತ ಕಿರಿಯ ವಯಸ್ಸಿನ ಅಧ್ಯಾಪಕರೆನಿಸಿದ್ದರು.
ಬ್ರೌನ್‌ನಲ್ಲಿ 10 ವರ್ಷಗಳ ಸೇವೆಯ ನಂತರ, ನ್ಯಾಶನಲ್ ಸೈನ್ಸ್ ಫೌಂಡೇಶನ್ (NSF) ನಿರ್ದೇಶಕರಾದರು. ಈ ಸಂಸ್ಥೆ ಮುನ್ನಡೆಸಿದ ಮೊದಲ ಏಷ್ಯಾ ಸಂಜಾತ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಸುರೇಶ್ ಪಾತ್ರರಾಗಿದ್ದರು. ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಸುರೇಶ್ ಅವರನ್ನು 13ನೇ ನಿರ್ದೇಶಕರಾಗಿ ನಾಮ ನಿರ್ದೇಶನ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.