ವಾಷಿಂಗ್ಟನ್: ರಕ್ಷಣಾ ಸಾಮಗ್ರಿ ತಯಾರಿಸುವ ಅಮೆರಿಕ ಕಂಪನಿ ಜನರಲ್ ಆಟೊಮಿಕ್ಸ್‌ನಿಂದ ಭಾರತವು 31 ‘ಎಂಕ್ಯೂ–9ಬಿ’ ಡ್ರೋನ್‌ಗಳ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿ ಆಗಿರುವ ಪ್ರಗತಿಯನ್ನು ಅಧ್ಯಕ್ಷ ಜೋ ಬೈಡನ್ ಸ್ವಾಗತಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ವಿಲ್ಮಿಂಗ್ಟನ್‌ನ ತಮ್ಮ ನಿವಾಸದಲ್ಲಿ ಶನಿವಾರ ಆಯೋಜಿಸಿದ್ದ ಔತಣಕೂಟದ ವೇಳೆ, ಬೈಡನ್ ಅವರು ಈ ಮಾತು ಹೇಳಿದ್ದಾರೆ.
ಅಲ್ಲದೇ, ಪರಸ್ಪರರ ನಡುವೆ ಮಿಲಿಟರಿ ಹಾರ್ಡ್‌ವೇರ್‌ಗಳ ಪೂರೈಕೆಗೆ ಉತ್ತೇಜನ ನೀಡುವುದಕ್ಕೆ ಉಭಯ ನಾಯಕರು ಸಮ್ಮತಿಸಿದರು ಎಂದು ಸಭೆ ಕುರಿತು ಬಿಡುಗಡೆಯಾಗಿರುವ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಕ್ಷಣಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಂಬಂಧ ವೃದ್ಧಿಸುವುದು ಸೇರಿದಂತೆ ವಿವಿಧ ಮಹತ್ವದ ವಿಷಯಗಳು ಕುರಿತು ಬೈಡನ್ ಹಾಗೂ ಮೋದಿ ಚರ್ಚಿಸಿದರು ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ಎಂಕ್ಯೂ–9ಬಿ’ ಡ್ರೋನ್‌ಗಳು ಶಸ್ತ್ರಸಜ್ಜಿತವಾಗಿದ್ದು, ಬಹು ದೂರದ ಗುರಿಯನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿವೆ. ಕಣ್ಗಾವಲು ವ್ಯವಸ್ಥೆಯನ್ನು ಮತ್ತಷ್ಟು ದೃಢಪಡಿಸುವ ಜೊತೆಗೆ, ಭಾರತದ ಸಶಸ್ತ್ರಗಳ ಪಡೆಗಳ ದಾಳಿ ಸಾಮರ್ಥ್ಯವನ್ನು ಇವು ಹೆಚ್ಚಿಸಲಿವೆ’ ಎಂದು ಪ್ರಕಟಣೆ ತಿಳಿಸಿದೆ.
₹25 ಸಾವಿರ ಕೋಟಿ ವೆಚ್ಚದಲ್ಲಿ ಭಾರತ ಈ ಅತ್ಯಾಧುನಿಕ ಡ್ರೋನ್‌ಗಳನ್ನು ಖರೀದಿಸುತ್ತಿದೆ. ವಾಯುಪ್ರದೇಶದ ಮೇಲೆ ಕಣ್ಗಾವಲು ಇಡಲು 16 (ಸ್ಕೈ ಗಾರ್ಡಿಯನ್) ಹಾಗೂ ಕಡಲಗಡಿ ಮೇಲೆ ನಿಗಾ ಇಡಲು 15 (ಸೀ ಗಾರ್ಡಿಯನ್) ಡ್ರೋನ್‌ಗಳನ್ನು ಖರೀದಿಸಲಾಗುತ್ತಿದೆ.
ಚೀನಾಕ್ಕೆ ಹೊಂದಿಕೊಂಡಿರುವ ಗಡಿ ಹಾಗೂ ಹಿಂದೂ ಮಹಾಸಾಗರದಲ್ಲಿ ನಿಗಾ ಹೆಚ್ಚಿಸುವುದು ಇವುಗಳ ಖರೀದಿ ಉದ್ದೇಶವಾಗಿದೆ.
ಜೆಟ್ ಎಂಜಿನ್‌ಗಳು, ಶಸ್ತ್ರಾಸ್ತ್ರಗಳು ಸೇರಿದಂತೆ ಸೇನೆಯ ಪ್ರಮುಖ ವ್ಯವವಸ್ಥೆಗಳನ್ನು ಜಂಟಿಯಾಗಿ ತಯಾರಿಸುವ ನಿಟ್ಟಿನಲ್ಲಿ ಆಗಿರುವ ಪ್ರಗತಿ ಕುರಿತು ಉಭಯ ನಾಯಕರು ಚರ್ಚಿಸಿದರು ಎಂದೂ ಪ್ರಕಟಣೆ ತಿಳಿಸಿದೆ.
ಮುಂದಿನ ವರ್ಷ ನಡೆಯುವ ‘ಕ್ವಾಡ್’ ಶೃಂಗಸಭೆ ಆತಿಥ್ಯವನ್ನು ಭಾರತ ವಹಿಸಲಿದೆ- ನರೇಂದ್ರ ಮೋದಿ ಪ್ರಧಾನಿ
‘ಸಂಘರ್ಷ ತಗ್ಗಿ ಶಾಂತಿ ನೆಲಸಲಿ’
ವಾಷಿಂಗ್ಟನ್(ಪಿಟಿಐ): ‘ದೇಶಗಳ ನಡುವಿನ ಸಂಘರ್ಷ ತಗ್ಗಿ ವಿಶ್ವದೆಲ್ಲೆಡೆ ಶಾಂತಿ ನೆಲಸಬೇಕು. ಪ್ರಜಾತಾಂತ್ರಿಕ ಮೌಲ್ಯಗಳನ್ನು ಯಾವಾಗಲೂ ಎತ್ತಿ ಹಿಡಿಯಬೇಕು ಎಂಬುದು ಭಾರತದ ದೃಢ ನಿಲುವು’ ಎಂದು ಕ್ವಾಡ್ ನಾಯಕರೊಂದಿಗೆ ನಡೆದ ಮಾತುಕತೆ ವೇಳೆ ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ‘ಪ್ರಸಕ್ತ ಸನ್ನಿವೇಶದಲ್ಲಿ ತಂತ್ರಜ್ಞಾನ ಹಾಗೂ ಡಿಜಿಟಲ್ ಕ್ರಾಂತಿಯು ಉತ್ತಮ ಆಡಳಿತ ವ್ಯವಸ್ಥೆ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ತಂತ್ರಜ್ಞಾನವನ್ನು ವಿನಾಶಕ್ಕೆ ಬಳಸದೇ ಉತ್ತಮ ಕಾರ್ಯಕ್ಕೆ ಬಳಸುವುದು ಅಗತ್ಯ ಎಂಬುದಾಗಿ ಮೋದಿ ವಿವರಿಸಿದರು’ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಭಾನುವಾರ ತಿಳಿಸಿದ್ದಾರೆ. ‘ಕ್ವಾಡ್’ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಡೆಲವೇರ್ ರಾಜ್ಯದ ವಿಲ್ಮಿಂಗ್ಟನ್‌ನಲ್ಲಿರುವ ಮೋದಿ ಸಂಘಟನೆಯ ನಾಯಕರೊಂದಿಗೆ ಶನಿವಾರ ನಡೆಸಿದ ಪ್ರತ್ಯೇಕ ದ್ವಿಪಕ್ಷೀಯ ಸಭೆಯಲ್ಲಿ ಈ ವಿಚಾರಗಳಿಗೆ ಸಂಬಂಧಿಸಿ ಭಾರತದ ನಿಲುವುಗಳನ್ನು ವಿವರಿಸಿದರು’ ಎಂದು ನ್ಯೂಯಾರ್ಕ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಿಸ್ರಿ ತಿಳಿಸಿದರು. ‘ಅಭಿವೃದ್ಧಿ ಜಾಗತಿಕ ಶಾಂತಿ ಮತ್ತು ಭದ್ರತೆಗೆ ಸಂಬಂಧಿಸಿ ಭಾರತದ ಬದ್ಧತೆಯನ್ನು ಕೂಡ ಮೋದಿ ವಿವರಿಸಿದರು’ ಎಂದು ಹೇಳಿದರು.
ಮೋದಿ–ಬೈಡನ್ ಭೇಟಿಯ ಪ್ರಮುಖ ಅಂಶಗಳು
* 297 ಪ್ರಾಚೀನ ವಸ್ತುಗಳು/ಕಲಾಕೃತಿಗಳನ್ನು ಭಾರತಕ್ಕೆ ಹಿಂದಿರುಗಿಸಲು ಅಮೆರಿಕ ಒಪ್ಪಿಗೆ. ಅಧ್ಯಕ್ಷ ಜೋ ಬೈಡನ್ ನಿವಾಸದಲ್ಲಿರುವ ಕಲಾಕೃತಿಗಳು ಇದರಲ್ಲಿ ಸೇರಿವೆ
* ಬೆಳ್ಳಿಯಿಂದ ತಯಾರಿಸಿದ ರೈಲಿನ ಮಾದರಿಯನ್ನು ಬೈಡನ್‌ಗೆ ಮೋದಿ ಅವರು ಉಡುಗೊರೆಯಾಗಿ ನೀಡಿದರು
* ಮಹಾರಾಷ್ಟ್ರದ ಕರಕುಶಲ ಕರ್ಮಿಗಳಿಂದ ಮಾದರಿ ತಯಾರಿಕೆ
* ಒಂದು ಬದಿಯಲ್ಲಿ ‘ದೆಹಲಿ–ಡೆಲವೇರ್’ ಹಾಗೂ ಮತ್ತೊಂದು ಬದಿಯಲ್ಲಿ ‘ಇಂಡಿಯನ್ ರೈಲ್ವೇಸ್’ ಎಂದು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಕೆತ್ತಲಾಗಿದೆ
* ಜಮ್ಮು–ಕಾಶ್ಮೀರದ ಕುಶಲಕಲೆಯ ಶ್ರೀಮಂತಿಕೆ ಸಾರುವ ಪಶ್ಮಿನಾ ಶಾಲನ್ನು ಜಿಲ್ ಬೈಡನ್ ಅವರಿಗೆ ಉಡುಗೊರೆಯಾಗಿ ಮೋದಿ ನೀಡಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.