ಪೋರ್ಟ್ ಲೂಯಿಸ್: ಐತಿಹಾಸಿಕ ದಂಡಿ ಯಾತ್ರೆಯ ವಾರ್ಷಿಕೋತ್ಸವದ ಅಂಗವಾಗಿ ಮಾರಿಷಸ್‌ನಲ್ಲಿರುವ ಮಹಾತ್ಮ ಗಾಂಧಿ ಇನ್‌ಸ್ಟಿಟ್ಯೂಟ್‌ಗೆ ಮಂಗಳವಾರ ಭೇಟಿ ನೀಡಿದ ದ್ರೌಪದಿ ಮುರ್ಮು ಅವರು ರಾಷ್ಟ್ರಪಿತನಿಗೆ ನಮನ ಸಲ್ಲಿಸಿದರು.
ಭಾರತ-ಮಾರಿಷಸ್ ಬಾಂಧವ್ಯಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಮಾರ್ಚ್ 11ರಿಂದ 3 ದಿನಗಳ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ಮಂಗಳವಾರ (ಇಂದು) ಮಾರಿಷಸ್‌ನ ಮೋಕಾದಲ್ಲಿರುವ ಮಹಾತ್ಮ ಗಾಂಧಿ ಇನ್‌ಸ್ಟಿಟ್ಯೂಟ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ಗಾಂಧೀಜಿ ಅವರ ಆದರ್ಶಗಳನ್ನು ಸ್ಮರಿಸಿದರು ಎಂದು ವಿದೇಶಾಂಗ ಸಚಿವಾಲಯ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಅಲ್ಲದೇ ಇಂದು (ಮಾರ್ಚ್ 12) ದೇಶದ ರಾಷ್ಟ್ರೀಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮುರ್ಮು ಭಾಗವಹಿಸಿದ್ದರು. ಬಳಿಕ ದಂಡಿ ಯಾತ್ರೆ ಪ್ರಾರಂಭದ ಐತಿಹಾಸಿಕ ದಿನದಂದು ಮಾರಿಷಸ್‌ನ ಮಹಾತ್ಮ ಗಾಂಧಿ ಮೆಟ್ರೊ ನಿಲ್ದಾಣಕ್ಕೆ ಆಗಮಿಸಿದ ಅವರು ಕೆಲಕಾಲ ಮೆಟ್ರೊದಲ್ಲಿ ಸಂಚರಿಸಿದರು ಎಂದು ವಿದೇಶಾಂಗ ಸಚಿವಾಲಯ ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದೆ.
ಮಾರಿಷಸ್ ಮೆಟ್ರೊ ಭಾರತದ ನೆರವಿನ ಪ್ರಮುಖ ಯೋಜನೆಯಾಗಿದ್ದು, ಇದು ದೇಶದ ಜನರ ಜೀವನದ ಮೇಲೆ ಪ್ರಭಾವ ಬೀರುತ್ತದೆ. 2019ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಮಾರಿಷಸ್‌ನಲ್ಲಿ ಮೆಟ್ರೊ ಎಕ್ಸ್‌ಪ್ರೆಸ್ ಸೇವೆ ಮತ್ತು ಆಸ್ಪತ್ರೆಯನ್ನು ಅಲ್ಲಿನ ಪ್ರಧಾನ ಮಂತ್ರಿ ಪ್ರವಿಂದ್ ಜಗನ್ನಾಥ್ ಅವರೊಂದಿಗೆ ಜಂಟಿಯಾಗಿ ವರ್ಚುವಲ್ ಮೂಲಕ ಉದ್ಘಾಟಿಸಿದ್ದರು.
ಬಳಿಕ ಮಾತನಾಡಿದ್ದ ಮೋದಿ ಅವರು, ಈ ಯೋಜನೆಗಳನ್ನು ದ್ವೀಪ ರಾಷ್ಟ್ರದ ಅಭಿವೃದ್ಧಿಗೆ ಭಾರತದ ಬದ್ಧತೆಯ ಸಂಕೇತವೆಂದು ಬಣ್ಣಿಸಿದ್ದರು.
ದಂಡಿ ಯಾತ್ರೆ ಎಂದೂ ಕರೆಯಲ್ಪಡುವ ಉಪ್ಪಿನ ಸತ್ಯಾಗ್ರಹ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಒಂದು ಮಹತ್ವದ ಘಟನೆಯಾಗಿದೆ.
ಭಾರತದಲ್ಲಿ ಬ್ರಿಟಿಷರು ಉಪ್ಪಿನ ಮೇಲೆ ವಿಧಿಸಿದ ಕರವನ್ನು ವಿರೋಧಿಸಿ ಮಹಾತ್ಮ ಗಾಂಧಿ ಜತೆ ನೂರಾರು ಸತ್ಯಾಗ್ರಹಿಗಳು ಅಹಮದಾಬಾದ್‌ನ ಸಬರಮತಿ ಆಶ್ರಮದಿಂದ ದಂಡಿ ಎಂಬ ಕರಾವಳಿ ಗ್ರಾಮಕ್ಕೆ ಸತ್ಯಾಗ್ರಹವನ್ನು ಕೈಗೊಂಡಿದ್ದರು.
ಈ ಸತ್ಯಾಗ್ರಹ ಸುಮಾರು 24 ದಿನಗಳ ಕಾಲ ನಡೆಯಿತು. 1930ರ ಮಾರ್ಚ್ 12 ರಂದು 78 ಜನರಿಂದ ಪ್ರಾರಂಭಗೊಂಡ ಈ ಯಾತ್ರೆ ಏಪ್ರಿಲ್ 5, ರಂದು ಮುಕ್ತಾಯಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.