ಬ್ರಿಟನ್ ರಾಜಕುಮಾರ ಪ್ರಿನ್ಸ್ ಹ್ಯಾರಿ ಅವರು ಆತ್ಮಚರಿತ್ರೆ ‘ಸ್ಪೇರ್‘ ಬಿಡುಗಡೆಗೂ ಮುನ್ನ ಭಾರೀ ಸದ್ದು ಮಾಡುತ್ತಿದೆ. ಪುಸ್ತಕದಲ್ಲಿರುವ ಹಲವು ಅಂಶಗಳು ಸೋರಿಕೆಯಾಗಿದ್ದು, ಬ್ರಿಟನ್ ರಾಜಪರಿವಾರದ ಒಳ ಬೇಗುದಿ ಜಗಜ್ಜಾಹೀರಾಗಿದೆ. ಹೊರ ಜಗತ್ತಿಗೆ ‘ಎಲ್ಲವೂ ಸರಿ ಇದೆ‘ ಎಂದು ತೋರುವ ರಾಜ ಮನೆತನದ ಒಳಜಗಳ, ಅಸಮಾಧಾನ, ಯಾಂತ್ರಿಕ ಬದುಕು, ಅರಮನೆಯೊಳಗಿನ ಸೆರೆಮನೆಯಂಥ ಜೀವನ ಎಲ್ಲವೂ ಬಯಲಾಗಿದೆ.
ತನ್ನ 12ನೇ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡ ಪ್ರಿನ್ಸ್ ಹ್ಯಾರಿಯ ‘ಅಮ್ಮನ ಸ್ಮರಣೆ‘, ಕಾಡುವ ಹಳೇಯ ನೆನಪುಗಳ ಪುಸ್ತಕದಲ್ಲಿ ಉಲ್ಲೇಖವಾಗಿದೆ. ಅಮ್ಮನ ಸಾವಿನ ಸುದ್ದಿ ಕೇಳಿದ ಕ್ಷಣ, ತಾಯಿ ಅಪಘಾತಕ್ಕೀಡಾಗಿ ಮೃತಪಟ್ಟ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಪುಸ್ತಕದಲ್ಲಿ ಅಡಕವಾಗಿದೆ. ಎಲ್ಲವೂ ಇದ್ದು, ಸಣ್ಣ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ರಾಜಪರಿವಾರದ ಮಗುವೊಂದು ಅನಾಥವಾಗಿ ಬೆಳೆಯುವ ಚಿತ್ರಣ ಪುಸ್ತಕದಲ್ಲಿದೆ. ಅಷ್ಟಕ್ಕೂ ಪ್ರಿನ್ಸ್ ಹ್ಯಾರಿ ಅಮ್ಮನ ಬಗ್ಗೆ ಹೇಳಿದ್ದೇನು? ಸಂಕ್ಷಿಪ್ತವಾಗಿ ಇಲ್ಲಿ ಓದಿ.
ಅಮ್ಮನ ಸಾವು
ತಾಯಿ ಡಯನಾ ಮೃತಪಟ್ಟ ಸುದ್ದಿ ತಿಳಿಸಿದಾಗ ತಾನು ಅಳಲಿಲ್ಲ ಎಂದು ಹೇಳಿರುವ ಪ್ರಿನ್ಸ್ ಹ್ಯಾರಿ, ಆ ವಿಷಯ ಹೇಳುವಾಗ ತಂದೆ ನನ್ನನ್ನು ಅಪ್ಪಿಕೊಳ್ಳಲಿಲ್ಲ ಎಂದು ಬೇಸರಿಸುತ್ತಾರೆ. ತಾಯಿ ಇದ್ದ ಕಾರು ಅಪಘಾತ ನಡೆದಾಗ ನಾನು, ಅಣ್ಣ ವಿಲಿಯಂ ಜತೆ ಸ್ಕಾಟ್‌ಲ್ಯಾಂಡ್‌ನ ಬಲ್ಮೋರಲ್‌ನಲ್ಲಿದ್ದೆ. ಅಪಘಾತ ನಡೆದಿದ್ದಾಗಿಯೂ, ತಾಯಿ ಬದುಕುಳಿಯುವುದು ಕಷ್ಟವೆಂದೂ ತಂದೆ ಹೇಳಿದ್ದರು. ‘ನನ್ನ ಪ್ರೀತಿಯ ಮಗನೇ‘ ಎಂದು ಅವರು ಆ ವೇಳೆ ನನ್ನನ್ನು ಕರೆದೂ ಕೂಡ ಅವರ ಮಾತಿನ ಭಾವ ಹಾಗೆಯೇ ಇತ್ತು ಎಂದು ಹ್ಯಾರಿ ಬರೆದುಕೊಂಡಿದ್ದಾರೆ.
1997 ಆಗಸ್ಟ್ 31 ರಂದು ಪ್ಯಾರೀಸ್‌ನಲ್ಲಿ ನಡೆದ ಅಪಘಾತದಲ್ಲಿ ಡಯಾನಾ ಅವರು ದುರ್ಮಣರಕ್ಕೀಡಾಗಿದ್ದರು. ಅಪಘಾತದಲ್ಲಿ ಡಯನಾ ಅವರ ಪ್ರಿಯಕರ ದೊಡಿ ಫಾಯೆಡ್ ಹಾಗೂ ಕಾರು ಚಾಲಕ ಮೃತಪಟ್ಟಿದ್ದರು. ಅವರ ಸಾವಿನ ಕುರಿತು ಈಗಲೂ ನೂರಾರು ಊಹಾಪೋಹಗಳಿದ್ದು, ಯಾವುದಕ್ಕೂ ಉತ್ತರ ಸಿಕ್ಕಿಲ್ಲ.
ಅಮ್ಮನ ಕಾರು ಅಪಘಾತಕ್ಕೀಡಾದ ಸ್ಥಳದಲ್ಲಿ ಹ್ಯಾರಿ
2007ರಲ್ಲಿ ಪ್ಯಾರೀಸ್‌ನಲ್ಲಿ ನಡೆದ ರಗ್ಬಿ ಫುಟ್‌ಬಾಲ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯ ವೀಕ್ಷಣೆ ಮಾಡಿದ ಬಳಿಕ, ತಾಯಿ ಮೃತಪಟ್ಟ ಅದೇ ಸುರಂಗಕ್ಕೆ ಭೇಟಿ ನೀಡಿದ್ದಾಗಿ, ಹ್ಯಾರಿ ಸ್ಪೇರ್‌ನಲ್ಲಿ ಬರೆದುಕೊಂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ತಾನು ಭಾರೀ ನೋವುಂಡಿದ್ದಾಗಿ ಹ್ಯಾರಿ ಹೇಳಿದ್ದಾರೆ.
ಅಪಘಾತವಾಗುವ ವೇಳೆ ಅಮ್ಮನ ಕಾರು ಚಲಿಸಿದ್ದ 65 ಮೈಲಿ ವೇಗದಲ್ಲೇ ಕಾರು ಚಲಾಯಿಸು ಎಂದು ಚಾಲಕನಲ್ಲಿ ಹೇಳಿದ್ದೆ. ತಾಯಿ ಹೋಗಿದ್ದು ಒಳ್ಳೆಯದೇ ಆಯಿತು ಎಂದು ನನಗೆ ಆವೇಳೆ ಅನ್ನಿಸಿತು ಎಂದು ಹ್ಯಾರಿ ಬರೆದುಕೊಂಡಿದ್ದಾರೆ.
2007ರಲ್ಲಿ ಡಯನಾ ಅವರು ಸಾವಿಗೀಡಾದ ‘ಪೋಂಟದದ ಡೆ ಆಲ್ಮಾ‘ ಸುರಂಗಕ್ಕೆ ಭೇಟಿ ನೀಡುವಾಗ ಹ್ಯಾರಿ ಅವರಿಗೆ 23 ವರ್ಷ ವಯಸ್ಸಾಗಿತ್ತು. ಅಲ್ಲಿಗೆ ಹ್ಯಾರಿ ಭೇಟಿ ನೀಡುವ 10 ವರ್ಷ ಮೊದಲೇ ಘಟನೆ ನಡೆದಿತ್ತು. ಅಪಘಾತದಲ್ಲಿ ತಾಯಿ ಮೃತರಾದಾಗ ಹ್ಯಾರಿ 12 ವರ್ಷದ ಬಾಲಕ.
ತಾಯಿಯ ಸಾವಿನ ಬಳಿಕ ಭೇಟಿಯಾದ 'ಶಕ್ತಿಶಾಲಿ ಮಹಿಳೆ‘
ತಾಯಿಯ ಬಗ್ಗೆ ‘ಶಕ್ತಿಶಾಲಿ ಮಹಿಳೆ‘ ಹೇಳಿದ್ದ ಹಲವು ಮಾತುಗಳನ್ನು ಹ್ಯಾರಿ ಸ್ಪೇರ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ತನ್ನ ಸ್ನೇಹಿತರ ಸಲಹೆ ಮೇರೆಗೆ ಆ ಮಹಿಳೆಯನ್ನು ಭೇಟಿ ಮಾಡಿದ್ದಾಗಿಯೂ ಹಲವು ಪ್ರಶ್ನೆಗೆ ಉತ್ತರ ಕಂಡುಕೊಂಡಿದ್ದಾಗಿಯೂ ಬರೆದುಕೊಂಡಿದ್ದಾರೆ.
‘ ಆ ಮಹಿಳೆ ಬಳಿ ಕುಳಿತಾಗ ವಿಶೇಷ ಶಕ್ತಿಯೊಂದು ನನ್ನನ್ನು ಆವರಿಸಿದಂತಹ ಅನುಭವವಾಯ್ತು. ನಿನ್ನ ತಾಯಿ ನಿನ್ನ ಜತೆಗೇ ಇದ್ದಾರೆ ಎಂದು ಆ ಮಹಿಳೆ ಹೇಳುವಾಗ, ಹೌದು ನನಗೆ ಆ ಅನುಭವ ತುಂಬಾ ಸರಿ ಆಗಿದೆ ಎಂದು ನಾನು ಉತ್ತರಿಸಿದೆ. ನಿನ್ನ ತಾಯಿ ಈ ಕ್ಷಣಕ್ಕೆ ನಿನ್ನ ಜತೆ ಇದ್ದಾರೆ ಎಂದು ಆಕೆ ನನ್ನಲ್ಲಿ ಹೇಳಿದಾಗ ನನಗೆ ಆಶ್ಚರ್ಯ ಉಂಟಾಯಿತು‘ ಎಂದು ಹ್ಯಾರಿ ‘ಸ್ಪೇರ್‘ನಲ್ಲಿ ಹೇಳಿದ್ದಾರೆ.
‘ಬಯಸಿದಂತೆ ಬದುಕಲು ನಿಮ್ಮ ತಾಯಿಗೆ ಸಾಧ್ಯವಾಗಿರಲಿಲ್ಲ. ಆದರೆ ಅವರು ಬಯಸಿದಂತೆ ನೀವು ಜೀವನ ನಡೆಸುತ್ತಿದ್ದೀರಿ, ನೀವು ಹೇಗೆ ಬದುಕಬೇಕು ಎಂದು ತಾಯಿ ಅಂದುಕೊಂಡಿದ್ದರೋ ಹಾಗೇ ಬದುಕುತ್ತಿದ್ದೀರಿ‘ ಎಂದು ಆ ಮಹಿಳೆ ಹೇಳಿದ್ದಾಗಿ ಹ್ಯಾರಿ ಬರೆದುಕೊಂಡಿದ್ದಾರೆ.
ಆದರೆ ಆ ಶಕ್ತಿಶಾಲಿ ಮಹಿಳೆ ಯಾರು? ಹ್ಯಾರಿ ಅವರನ್ನು ಯಾವಾಗ, ಎಲ್ಲಿ ಭೇಟಿ ನಡೆಯಿತು ಎನ್ನುವುದಕ್ಕೆ ಪುಸ್ತಕದಲ್ಲಿ ಉತ್ತರ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.