ADVERTISEMENT

₹204 ಕೋಟಿ ಬೆಲೆಯ ಡೈಮಂಡ್‌ ನೆಕ್ಲೆಸ್‌ ಧರಿಸಿದ ಪ್ರಿಯಾಂಕ ಚೋಪ್ರಾ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮೇ 2023, 14:21 IST
Last Updated 2 ಮೇ 2023, 14:21 IST
ಪ್ರಿಯಾಂಕಾ ಚೋಪ್ರಾ (ಚಿತ್ರ: ಇನ್‌ಸ್ಟಾಗ್ರಾಮ್‌)
ಪ್ರಿಯಾಂಕಾ ಚೋಪ್ರಾ (ಚಿತ್ರ: ಇನ್‌ಸ್ಟಾಗ್ರಾಮ್‌)   

ನ್ಯೂಯಾರ್ಕ್‌ : ಬಾಲಿವುಡ್‌ ಮತ್ತು ಹಾಲಿವುಡ್ ಚಿತ್ರರಂಗದಲ್ಲಿ ತನ್ನದೇ ಚಾಪು ಮೂಡಿಸಿ ಜನಮನ ಗೆದ್ದಿರುವ ದೇಸಿ ಹುಡುಗಿ ಪ್ರಿಯಾಂಕಾ ಚೋಪ್ರಾ ತಮ್ಮ ವಿಭಿನ್ನ ವ್ಯಕ್ತಿತ್ವದಿಂದಲೇ ಸುದ್ದಿಯಲ್ಲಿದ್ದಾರೆ. ಇದೀಗ ಜಗತ್ತಿನ ಅತ್ಯಂತ ಪ್ರತಿಷ್ಠಿತ ಫ್ಯಾಷನ್‌ ಇವೆಂಟ್‌ ಆದ ‘ಮೆಟ್‌ ಗಾಲಾ‘ದಲ್ಲಿ (MET GALA) ಭಾಗವಹಿಸಿರುವ ಪ್ರಿಯಾಂಕಾ ಚೋಪ್ರಾ 11.6 ಕ್ಯಾರೆಟ್‌ನ ಡೈಮಂಡ್‌ ನೆಕ್ಲೆಸ್‌ ಧರಿಸಿದ್ದು, ಇದರ ಬೆಲೆ ₹204 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಮೆಟ್‌ ಗಾಲಾ ಇವೆಂಟ್‌ ಆಯೋಜನೆಯಾಗಿದ್ದು, ಇಂದು ನ್ಯೂಯಾರ್ಕ್‌ನಲ್ಲಿ ಚಾಲನೆಗೊಂಡಿದೆ. ಈ ಬಾರಿಯ ಫ್ಯಾಷನ್‌ ಇವೆಂಟ್‌ನ ಥೀಮ್‌ 'ಕಾರ್ಲ್ ಲಾಗರ್ಫೆಲ್ಡ್: ಎ ಲೈನ್ ಆಫ್ ಬ್ಯೂಟಿ' ಆಗಿದೆ. 2019ರಲ್ಲಿ ನಿಧನರಾದ ಪ್ರಸಿದ್ಧ ವಸ್ತ್ರ ವಿನ್ಯಾಸಗಾರ ಕಾರ್ಲ್‌ ಲಾಗರ್ಫೆಲ್ಡ್‌ ಅವರು ಫ್ಯಾಷನ್‌ ಲೋಕಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಈ ಥೀಮ್‌ ಇಡಲಾಗಿದೆ ಎಂದು ಫ್ಯಾಷನ್‌ ಇವೆಂಟ್‌ನ ಆಯೋಜಕಿ ಅನ್ನಾ ವಿಂಟರ್ ತಿಳಿಸಿದ್ದಾರೆ.

ಜಗತ್ತಿನ ಹಲವಾರು ತಾರೆಗಳು ತಮ್ಮ ನೆಚ್ಚಿನ ಡಿಸೈಸರ್‌ಗಳ ಡ್ರೆಸ್‌ಗಳನ್ನು ತೊಟ್ಟು ಮಿಂಚಿದ್ದಾರೆ. ಭಾರತದಿಂದ ಅಲಿಯಾ ಭಟ್‌, ಪ್ರಿಯಾಂಕಾ ಚೋಪ್ರಾ, ಇಶಾ ಅಂಬಾನಿ ಮತ್ತು ನಟಾಶಾ ಪೂನ್‌ವಾಲಾ ಭಾಗವಹಿಸಿದ್ದರು.

ADVERTISEMENT

ಪ್ರಿಯಾಂಕಾ ಚೋಪ್ರಾ ಪತಿ ನಿಕ್‌ ಜೋನಾಸ್‌ ಜೊತೆ ಫ್ಯಾಷನ್‌ ಇವೆಂಟ್‌ನಲ್ಲಿ ಕಾಣಿಸಿಕೊಂಡಿದ್ದು, ಇಬ್ಬರು ಕಪ್ಪು ಮತ್ತು ಬಿಳಿ ದಿರಿಸಿನಲ್ಲಿ ಮಿಂಚಿದ್ದಾರೆ. ಪ್ರಿಯಾಂಕಾ ಚೋಪ್ರಾ ಪ್ರಸಿದ್ಧ ಇಟಾಲಿಯನ್‌ ಫ್ಯಾಷನ್‌ ಹೌಸ್‌ ಕಂಪೆನಿ ‘Bulgari‘ ಯಾದ ಬ್ಯ್ರಾಂಡ್‌ ಅಂಬಾಸಿಡರ್‌ ಆಗಿದ್ದು, ಇದೇ ಬ್ಯ್ರಾಂಡ್‌ನ ನೆಕ್ಲೆಸ್‌(ಬಲ್ಗರಿ ಲಗುನಾ ಬ್ಲೂ ಹೈ ನೆಕ್ಲೆಸ್‌) ಧರಿಸಿದ್ದಾರೆ. ಈ ನೆಕ್ಲೆಸ್‌ನ ಬೆಲೆ ಸುಮಾರು ₹204 ಕೋಟಿ ರೂಪಾಯಿ!

‘ಪ್ರಿಯಾಂಕಾ ಧರಿಸಿರುವ ನೆಕ್ಲೆಸ್‌ನಲ್ಲಿರುವ ವಜ್ರವು(ಬ್ಲೂ ಲಗುನಾ) ಕಂಪೆನಿ ತಯಾರಿಸಿದ ವಜ್ರದಲ್ಲಿಯೇ ಅತಿ ದೊಡ್ಡ ವಜ್ರವಾಗಿದೆ. ಇದುವರೆಗೆ ಕಂಪೆನಿಯಿಂದ ಮಾರಾಟವಾದ ಅತ್ಯಮೂಲ್ಯ ಆಭರಣ ಇದಾಗಿದೆ‘ ಎಂದು ಇಂಟರ್‌ನ್ಯಾಶನಲ್ ಜೆಮಲಾಜಿಕಲ್ ಇನ್‌ಸ್ಟಿಟ್ಯೂಟ್ ವರದಿ ಮಾಡಿದೆ. ಮೇ 12ಕ್ಕೆ ಈ ಡೈಮಂಡ್‌ ನೆಕ್ಲೆಸ್‌ ಹರಾಜು ಆಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.‌

ಈ ನೆಕ್ಲೆಸ್‌ ಧರಿಸಿ ಪೋಟೋ ಶೂಟ್‌ ಮಾಡಿರುವ ಪ್ರಿಯಾಂಕಾ ತಮ್ಮ ಸಂತೋಷದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ನೆಕ್ಲೆಸ್ ಬೆಲೆ ಕೇಳಿ ನೆಟ್ಟಿಗರು ಹೌಹಾರಿದ್ದಾರೆ. ತಮ್ಮ ನೆಚ್ಚಿನ ನಾಯಕಿ ನೆಕ್ಲೆಸ್‌ ನೋಡಿ ಪ್ರಿಯಾಂಕಾ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.