ADVERTISEMENT

ಶ್ರೀಲಂಕಾದಲ್ಲಿ ಪ್ರತಿಭಟನಾಕಾರರ ಮೇಲಿನ ದಾಳಿಗೆ ಕೈದಿಗಳ ಬಳಕೆ ಆರೋಪ: ತನಿಖೆ

ಪಿಟಿಐ
Published 12 ಮೇ 2022, 6:39 IST
Last Updated 12 ಮೇ 2022, 6:39 IST
ಶ್ರೀಲಂಕಾ ಹಿಂಸಾಚಾರದ ದೃಶ್ಯ
ಶ್ರೀಲಂಕಾ ಹಿಂಸಾಚಾರದ ದೃಶ್ಯ    

ಕೊಲಂಬೊ: ರಾಜಧಾನಿ ಕೊಲಂಬೊದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ದಾಳಿ ನಡೆಸಲು ಕೈದಿಗಳನ್ನು ಬಳಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ತೀವ್ರ ಆರ್ಥಿಕ ಬಿಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಿ ಮಹಿಂದಾ ರಾಜಪಕ್ಸ ಅವರ ರಾಜೀನಾಮೆಗೆ ಆಗ್ರಹಿಸಿ, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಸೋಮವಾರ ದಾಳಿ ನಡೆದಿತ್ತು. ರಾಜಪಕ್ಸ ಬೆಂಬಲಿಗರು ನಡೆಸಿದ ದಾಳಿಯಲ್ಲಿ 8 ಮಂದಿ ಮೃತಪಟ್ಟಿದ್ದರೆ, 200ಕ್ಕೂ ಅಧಿಕಮಂದಿ ಗಾಯಗೊಂಡಿದ್ದರು.

ಕೊಲಂಬೊದಲ್ಲಿ ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಲು ವಟರೇಕಾ ಜೈಲು ಶಿಬಿರದ ಕೈದಿಗಳನ್ನು ಬಳಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ತನಿಖೆ ಪ್ರಾರಂಭಿಸಲಾಗಿದೆ ಎಂದು ಕಾರಾಗೃಹಗಳ ಕಮಿಷನರ್ ಜನರಲ್ ತುಷಾರ ಉಪುಲ್ಡೆನಿಯಾ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಪ್ರತಿಭಟನಾಕಾರರ ಮೇಲೆ ನಡೆದ ದಾಳಿಯ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ದಾಳಿ ಮಾಡುತ್ತಿರುವವರು ವಟರೇಕಾ ಜೈಲಿನ ಕೈದಿಗಳು ಎಂದು ವರದಿ ಮಾಡಲಾಗಿತ್ತು.

ಕೊಲಂಬೊದಲ್ಲಿ ಸೋಮವಾರ ದಾಳಿ ನಡೆಸಿದ ಪುರುಷರ ಗುಂಪು ಮತ್ತು ಜೈಲಿನಲ್ಲಿರುವ ಕೈದಿಗಳ ಗುಂಪು ಧರಿಸಿದ್ದ ಬಟ್ಟೆಗಳು ಪರಸ್ಪರ ಹೋಲುತ್ತಿವೆ ಎಂದು ಮಾಧ್ಯಮಗಳು ವರದಿ ಪ್ರಕಟಿಸಿದ್ದವು.

ದಾಳಿಯಲ್ಲಿ ಭಾಗಿಯಾಗಿದ್ದ ಪುರುಷರು ಧರಿಸಿದ್ದ ಉಡುಪುಗಳು ಜೈಲು ಕೈದಿಗಳ ಉಡುಪಲ್ಲ. ಅವರು ಕಾರ್ಯ ನಿರ್ವಹಿಸುವ ಸಂಸ್ಥೆಗಳು ನೀಡಿರುವ ಸಮವಸ್ತ್ರಗಳಾಗಿರಬಹುದು ಎಂದು ಕಾರಾಗೃಹ ಇಲಾಖೆಯ ಆಯುಕ್ತರು ಅಭಿಪ್ರಾಯಪಟ್ಟಿದ್ದಾರೆ.

ಆರೋಪದ ಹಿನ್ನೆಲೆಯಲ್ಲಿ ಶ್ರೀಲಂಕಾದ ಮಾನವ ಹಕ್ಕು ಆಯೋಗವು ಗುರುವಾರ ವಿಚಾರಣೆ ನಡೆಸಲಿದ್ದು, ಕಾರಾಗೃಹ ಇಲಾಖೆ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.