ADVERTISEMENT

ನರಮೇಧ ಆರೋಪ: ಹಸೀನಾ, ಇತರ 9 ಮಂದಿ ವಿರುದ್ಧ ತನಿಖೆ ಆರಂಭ

ಪಿಟಿಐ
Published 15 ಆಗಸ್ಟ್ 2024, 11:26 IST
Last Updated 15 ಆಗಸ್ಟ್ 2024, 11:26 IST
<div class="paragraphs"><p>&nbsp;ಶೇಖ್ ಹಸೀನಾ</p></div>

 ಶೇಖ್ ಹಸೀನಾ

   

(ಚಿತ್ರ ಕೃಪೆ– ರಾಯಿಟರ್ಸ್ )

ಢಾಕಾ: ಈಚೆಗೆ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಸಂದರ್ಭದಲ್ಲಿ ನಡೆದ ನರಮೇಧ ಮತ್ತು ಮನುಕುಲದ ವಿರುದ್ಧದ ಅಪರಾಧ ಆರೋಪಗಳಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಇಂಟರ್‌ನ್ಯಾಷನಲ್‌ ಕ್ರೈಮ್ಸ್ ಟ್ರಿಬ್ಯುನಲ್, ಮಾಜಿ ಪ್ರಧಾನಿ ಶೇಖ್‌ ಹಸೀನಾ ಮತ್ತು ಇತರ 9 ಮಂದಿ ವಿರುದ್ಧ ತನಿಖೆ ಆರಂಭಿಸಿದೆ.

ADVERTISEMENT

ಹಸೀನಾ, ಅವಾಮಿ ಲೀಗ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಒಬೈದುಲ್ ಕ್ವಾಡರ್, ಮಾಜಿ ಗೃಹ ಸಚಿವ ಅಸಾದುಝಮಾನ್ ಖಾನ್ ಕಮಾಲ್ ಮತ್ತು ಪಕ್ಷದ ಹಲವಾರು ಪ್ರಮುಖ ವ್ಯಕ್ತಿಗಳ ವಿರುದ್ಧ ಬುಧವಾರ ಟ್ರಿಬ್ಯುನಲ್‌ಗೆ ದೂರು ದಾಖಲಾಗಿದೆ.

ಸಂಸ್ಥೆಯು ತನಿಖೆಯನ್ನು ಪ್ರಾರಂಭಿಸಿದೆ ಎಂದು ದೂರುದಾರರ ಪರ ವಕೀಲ ಗಾಜಿ ಎಂ.ಎಚ್ ತಮೀಮ್ ಗುರುವಾರ ದೃಢಪಡಿಸಿದ್ದಾರೆ ಎಂದು ದಿ ಢಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ. ತನಿಖಾ ಸಂಸ್ಥೆ ಬುಧವಾರ ರಾತ್ರಿಯೇ ತನಿಖೆ ಆರಂಭಿಸಿದೆ ಎಂದು ಅವರು ಹೇಳಿದ್ದಾರೆ.

ಹಸೀನಾ ನೇತೃತ್ವದ ಅವಾಮಿ ಲೀಗ್ ಮತ್ತು ಅದರ ಅಂಗಸಂಸ್ಥೆಯ ಸಂಘಟನೆಗಳನ್ನು ಸಹ ದೂರಿನಲ್ಲಿ ಹೆಸರಿಸಲಾಗಿದೆ. ವಿವಾದಾತ್ಮಕ ಉದ್ಯೋಗ ಮೀಸಲಾತಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಹತ್ಯೆಗೀಡಾದ 9ನೇ ತರಗತಿ ವಿದ್ಯಾರ್ಥಿ ಆರಿಫ್ ಅಹ್ಮದ್ ಸಿಯಾಮ್ ಅವರ ತಂದೆ ಬುಲ್ಬುಲ್ ಕಬೀರ್ ಅವರು ದೂರು ನೀಡಿದ್ದಾರೆ.

ಶೇಖ್‌ ಹಸೀನಾ ಹಾಗೂ ಇತರರು ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹತ್ತಿಕ್ಕಲು ಹಿಂಸಾತ್ಮಕ ಮಾರ್ಗವನ್ನು ತೆಗೆದುಕೊಂಡಿದ್ದರು. ಇದರಿಂದಾಗಿ ವ್ಯಾಪಕ ಸಾವು ನೋವು ಸಂಭವಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಶೇಖ್ ಹಸೀನಾ ನೇತೃತ್ವದ ಸರ್ಕಾರದ ವಿರುದ್ಧ ಇತ್ತೀಚೆಗೆ ನಡೆದ ವಿದ್ಯಾರ್ಥಿಗಳ ಸಾಮೂಹಿಕ ಚಳವಳಿಯ ವೇಳೆ (ಜುಲೈ 1 ರಿಂದ ಆಗಸ್ಟ್ 5) ನಡೆದ ಹತ್ಯೆಗಳಲ್ಲಿ ಭಾಗಿಯಾದವರನ್ನು ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯಲ್ಲಿ ವಿಚಾರಣೆಗೆ ಒಳಪಡಿಸಲು ಪ್ರಯತ್ನಿಸುವುದಾಗಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಬುಧವಾರ ಹೇಳಿತ್ತು. ಆ ದಿನದಂದೇ ದೂರು ದಾಖಲಾಗಿದೆ.

ಇದಲ್ಲದೇ 2015 ರಲ್ಲಿ ವಕೀಲರನ್ನು ಅಪಹರಿಸಿದ ಆರೋಪದ ಮೇಲೆ ಹಸೀನಾ ಮತ್ತು ಅವರ ಸಂಪುಟದ ಮಾಜಿ ಸಚಿವರು ಸೇರಿದಂತೆ ಹಲವರ ವಿರುದ್ಧ ಬುಧವಾರ ನಾಪತ್ತೆ ಪ್ರಕರಣವನ್ನು ದಾಖಲಿಸಲಾಗಿದೆ.

ಜುಲೈ 19 ರಂದು ಪ್ರತಿಭಟನೆಯ ವೇಳೆ ರಾಜಧಾನಿಯ ಮೊಹಮ್ಮದ್‌ಪುರ ಪ್ರದೇಶದಲ್ಲಿ ಪೊಲೀಸರು ನಡೆಸಿದ್ದ ಗುಂಡಿನ ದಾಳಿಯಲ್ಲಿ ಕಿರಾಣಿ ಅಂಗಡಿ ಮಾಲೀಕ ಅಬು ಸಯೀದ್ ಎಂಬುವವರು ಮೃತಪಟ್ಟಿದ್ದರು. ಈ ಸಂಬಂಧ ಮಂಗಳವಾರ ಹಸೀನಾ ಮತ್ತು ಇತರ ಆರು ಮಂದಿಯ ವಿರುದ್ಧ ಕೊಲೆ ಪ್ರಕರಣವನ್ನೂ ದಾಖಲಿಸಲಾಗಿದೆ.

ಪ್ರಕರಣದ ತನಿಖಾ ವರದಿಯನ್ನು ಸೆಪ್ಟೆಂಬರ್ 15 ರೊಳಗೆ ಸಲ್ಲಿಸುವಂತೆ ಢಾಕಾ ನ್ಯಾಯಾಲಯ ಗುರುವಾರ ಪೊಲೀಸರಿಗೆ ಸೂಚಿಸಿದೆ.

ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಈವರೆಗೆ ಸುಮಾರು 560 ಮಂದಿ ಮೃತಪಟ್ಟಿದ್ದಾರೆ. ಆಗಸ್ಟ್ 5 ರಂದು ಹಸೀನಾ ನೇತೃತ್ವದ ಸರ್ಕಾರ ಪತನದ ಬಳಿಕ ದೇಶದಾದ್ಯಂತ ಭುಗಿಲೆದ್ದ ಹಿಂಸಾಚಾರದಲ್ಲಿ 232 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಹಸೀನಾ ನೇತೃತ್ವದ ಸರ್ಕಾರದ ಪತನದ ನಂತರ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿದೆ. ಯೂನಸ್‌ ಅವರು ಗುರುವಾರ ಮುಖ್ಯ ಸಲಹೆಗಾರರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದು ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ಸಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.