ADVERTISEMENT

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ: ಶಿಕ್ಷಣ ತಜ್ಞರ ಖಂಡನೆ

ಪಿಟಿಐ
Published 20 ಅಕ್ಟೋಬರ್ 2021, 14:00 IST
Last Updated 20 ಅಕ್ಟೋಬರ್ 2021, 14:00 IST
ನೇಪಾಳದ ಕಠ್ಮಂಡುವಿನಲ್ಲಿ ಬಾಂಗ್ಲಾದೇಶದ ರಾಯಭಾರ ಕಚೇರಿ ಎದುರು ಇಸ್ಕಾನ್ (ಕೃಷ್ಣ ಪ್ರಜ್ಞೆಯ ಅಂತರರಾಷ್ಟ್ರೀಯ ಸೊಸೈಟಿ) ಸದಸ್ಯರು ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿ ಬುಧವಾರ ಶಾಂತಿಯುತ ಪ್ರತಿಭಟನೆ ನಡೆಸಿದರು (ಎಪಿ/ಪಿಟಿಐ). 
ನೇಪಾಳದ ಕಠ್ಮಂಡುವಿನಲ್ಲಿ ಬಾಂಗ್ಲಾದೇಶದ ರಾಯಭಾರ ಕಚೇರಿ ಎದುರು ಇಸ್ಕಾನ್ (ಕೃಷ್ಣ ಪ್ರಜ್ಞೆಯ ಅಂತರರಾಷ್ಟ್ರೀಯ ಸೊಸೈಟಿ) ಸದಸ್ಯರು ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿ ಬುಧವಾರ ಶಾಂತಿಯುತ ಪ್ರತಿಭಟನೆ ನಡೆಸಿದರು (ಎಪಿ/ಪಿಟಿಐ).    

ಢಾಕಾ: ಹಿಂದೂ ಸಮುದಾಯದ ಮೇಲೆ ಗುಂಪು ಹಲ್ಲೆ ನಡೆಸಿರುವುದು ಮತ್ತು ದುರ್ಗಾ ಪೂಜೆ ಹಬ್ಬದ ಸಮಯದಲ್ಲಿ ದೇವಸ್ಥಾನಗಳು ಹಾಗೂ ವಿಗ್ರಹಗಳನ್ನು ಧ್ವಂಸಗೊಳಿಸುವುದನ್ನು ದೇಶದಾದ್ಯಂತಪ್ರತಿಭಟನಾಕಾರರು ಮತ್ತು ಶಿಕ್ಷಣ ತಜ್ಞರು ಖಂಡಿಸಿದ್ದಾರೆ.

ಬಾಂಗ್ಲಾದೇಶ ಸರ್ಕಾರವು ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯ ಖಾತ್ರಿಪಡಿಸಲು ಹೊಸ ಕಾನೂನು ಜಾರಿಗೊಳಿಸಬೇಕು ಎಂದು ಇದೇ ವೇಳೆ ಒತ್ತಾಯಿಸಿದ್ದಾರೆ.

ಹಿಂದೂ ಸಮುದಾಯದ ಮೇಲಿನ ದಾಳಿ ಖಂಡಿಸಿ, ದೇಶದಾದ್ಯಂತ ಮಂಗಳವಾರ ಆರನೇ ದಿನ ಪ್ರತಿಭಟನೆಗಳನ್ನು ನಡೆಸಲಾಗಿದೆ ಎಂದು ಢಾಕಾ ಟ್ರಿಬ್ಯೂನ್ ಪತ್ರಿಕೆ ಬುಧವಾರ ವರದಿ ಮಾಡಿದೆ.

ADVERTISEMENT

ಢಾಕಾ ವಿಶ್ವವಿದ್ಯಾಲಯದ ಶಿಕ್ಷಕರ ಸಂಘವು (ಡಿಯುಟಿಎ) ದೇಶದಾದ್ಯಂತ ಹಿಂದೂ ದೇವಸ್ಥಾನಗಳು ಮತ್ತು ದುರ್ಗಾ ಪೂಜಾ ಸ್ಥಳಗಳ ಮೇಲೆ ದಾಳಿ ನಡೆಸಿದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದೆ.

ವಿವಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದಾಳಿಗಳನ್ನು ಖಂಡಿಸಿ ‘ದೇಖ್ತೆ ಕಿ ಪಾವೋ, ಪರ್ಚೆ ಬಾಂಗ್ಲಾ’ (ಬಾಂಗ್ಲಾ ಉರಿಯುತ್ತಿರುವುದನ್ನು ನೀವು ನೋಡುತ್ತೀರಾ?) ಎಂಬ ಬೀದಿ ನಾಟಕ ಪ್ರದರ್ಶಿಸಿದರು.

ಕವಿಗಳು, ಸಾಹಿತಿಗಳು, ಕಲಾವಿದರು ಮತ್ತು ಪತ್ರಕರ್ತರು ಕೋಮು ಭಯೋತ್ಪಾದನೆ ಖಂಡಿಸಿ ಶಹಬಾಗ್‌ನ ರಾಷ್ಟ್ರೀಯ ವಸ್ತುಸಂಗ್ರಹಾಲಯದ ಮುಂದೆ ರ‍್ಯಾಲಿ ನಡೆಸಿದರು.

ದುರ್ಗಾ ಪೂಜೆ ಆಚರಣೆಯ ಸಮಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಧಾರ್ಮಿಕ ನಿಂದನೆಯ ಆರೋಪ ಕೇಳಿ ಬಂದ ನಂತರ, ಬಾಂಗ್ಲಾದೇಶದಲ್ಲಿ ಕಳೆದ ಬುಧವಾರದಿಂದ ಹಿಂದೂಗಳು ಮತ್ತು ಹಿಂದೂ ದೇವಾಲಯಗಳ ಮೇಲೆ ದಾಳಿಗಳು ತೀವ್ರಗೊಂಡಿವೆ.

ಭಾನುವಾರ ತಡರಾತ್ರಿ ಬಾಂಗ್ಲಾದೇಶದಲ್ಲಿ ಒಂದು ಗುಂಪು 66 ಮನೆಗಳಿಗೆ ಹಾನಿ ಮಾಡಿ, ಕನಿಷ್ಠ 20 ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.