ಲಾಹೋರ್: ಮುಂಬೈ ದಾಳಿಯ ಸಂಚುಕೋರ ಹಾಗೂ ಜಮಾತ್ ಉದ್ ದವಾ (ಜೆಯುಡಿ) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಆತನ 12 ಜನ ಸಹಚರರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಭಯೋತ್ಪಾದನಾ ಚಟುವಟಿಕೆಗೆ ನಿಧಿ ಸಂಗ್ರಹ ಹಾಗೂ ಹಣ ಅಕ್ರಮ ವರ್ಗಾವಣೆಯ ಆರೋಪದ ಮೇಲೆ ಪಾಕಿಸ್ತಾನದ ಅಧಿಕಾರಿಗಳು ಹಲವು ಪ್ರಕರಣಗಳನ್ನು ದಾಖಲಿಸಿದ ಮರುದಿನವೇ ಸಯೀದ್ ಹಾಗೂ ಸಹಚರರ ವಿರುದ್ಧ ಪಂಜಾಬ್ ಪೊಲೀಸ್ ಇಲಾಖೆಯ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) 23 ಎಫ್‌ಐಆರ್ ದಾಖಲಿಸಿದೆ.
‘ಸಯೀದ್ ಸೇರಿ ಜೆಯುಡಿ ಸಂಘಟನೆಯ 13 ಉಗ್ರರ ವಿರುದ್ಧ ಸಿಟಿಡಿ ಪ್ರಕರಣ ದಾಖಲಿಸಿದೆ. ಶೀಘ್ರದಲ್ಲೇ ಇವರನ್ನು ಬಂಧಿಸಲಾಗುವುದು’ ಎಂದು ಪಂಜಾಬ್ ಪ್ರಾಂತ್ಯದ ಪೊಲೀಸ್ ವಕ್ತಾರ ನಿಯಾಬ್ ಹೈದರ್ ನಕ್ವಿ ಹೇಳಿದ್ದಾರೆ.
ನಿಷೇಧಿತ ಸಂಘಟನೆಗಳ ಹಲವು ಸದಸ್ಯರನ್ನು ಈಗಾಗಲೇ ಬಂಧಿಸಿ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಸದ್ಯ ಪ್ರಕರಣ ದಾಖಲಾಗಿರುವ ಈ ಶಂಕಿತರನ್ನು ಸಹ ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಯೀದ್‌ನನ್ನು ಬಂಧಿಸಲು ಪಂಜಾಬ್ ಪೊಲೀಸರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರಧಾನಿ ಇಮ್ರಾನ್ ಖಾನ್ ಸರ್ಕಾರ ಹಸಿರು ನಿಶಾನೆ ನೀಡಿದರೆ ಶೀಘ್ರವೇ ಆತನ ಮನೆಯ ಮೇಲೆ ದಾಳಿ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್‌ಎಟಿಎಫ್) ಸೂಚನೆಯಂತೆ ಭಯೋತ್ಪಾದಕ ಚಟುವಟಿಕೆಗೆ ಹಣಕಾಸು ನೆರವು ನೀಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಖಾನ್ ನೇತೃತ್ವದ ಸರ್ಕಾರವು ಬದ್ಧವಾಗಿರುವುದರಿಂದ ಸಯೀದ್‌ನನ್ನು ಇದೇ ವಾರ ಬಂಧಿಸುವ ಸಾಧ್ಯತೆ ಇದೆ. ದಾಖಲಾಗಿರುವ 23 ಪ್ರಕರಣಗಳಲ್ಲಿ ಸಯೀದ್ ಮತ್ತು ಆತನ 12 ಸಹಚರರ ವಿರುದ್ಧ ಪ್ರಬಲ ಸಾಕ್ಷ್ಯಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.