ನವದೆಹಲಿ: ಅಕ್ಟೋಬರ್‌ನಲ್ಲಿ ಕಝಾನ್‌ನಲ್ಲಿ ಆಯೋಜನೆಗೊಂಡಿರುವ ಬ್ರಿಕ್ಸ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಪ್ರಸ್ತಾವವನ್ನು ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಬಳಿ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಆಯೋಜನೆಗೊಂಡಿರುವ ಬ್ರಿಕ್ಸ್ ರಾಷ್ಟ್ರಗಳ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಮಾವೇಶದಲ್ಲಿ ಪಾಲ್ಗೊಂಡಿರುವ ಅಜಿತ್ ಡೊಭಾಲ್ ಅವರು ಪುಟಿನ್ ಅವರನ್ನು ಭೇಟಿ ಮಾಡಿದ್ದಾರೆ.
ಉಕ್ರೇನ್‌ಗೆ ಪ್ರಧಾನಿ ಮೋದಿ ಅವರು ಭೇಟಿ ನೀಡಿದ ಮೂರು ವಾರಗಳ ಬಳಿಕ ದೋವಲ್ ಅವರು ಪುಟಿನ್ ಅವರನ್ನು ಭೇಟಿ ಮಾಡಿ, ಉಕ್ರೇನ್ ಕುರಿತ ಭಾರತದ ನಿಲುವಿನ ಕುರಿತು ವಿವರಿಸಿದ್ದಾರೆ.
ಅಕ್ಟೋಬರ್ 22ರಿಂದ 24ರವರೆಗೆ ರಷ್ಯಾದ ಕಝಾನ್ ನಗರದಲ್ಲಿ ಬ್ರಿಕ್ಸ್ ಸಮಾವೇಶ ಆಯೋಜನೆಗೊಂಡಿದೆ. ಅ. 22ರಂದು ಮೋದಿ ಹಾಗೂ ಪುಟಿನ್ ಮಾತುಕತೆಗೆ ವೇದಿಕೆ ಸಿದ್ಧವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸದ್ಯ ನಡೆಯುತ್ತಿರುವ ಉಕ್ರೇನ್–ರಷ್ಯಾ ಸಂಘರ್ಷವನ್ನು ಅಂತ್ಯಗೊಳಿಸುವಲ್ಲಿ ಭಾರತ ಮತ್ತು ಚೀನಾ ಪ್ರಮುಖ ಪಾತ್ರ ವಹಿಸಬಹುದು ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಕಳೆದ ವಾರ ಹೇಳಿದ್ದರು.
ಪೂರ್ವ ಆರ್ಥಿಕ ಒಕ್ಕೂಟದ ಸಭೆಯಲ್ಲಿ ಮಾತನಾಡಿದ್ದ ಪುಟಿನ್, ‘ಭಾರತ, ಬ್ರೆಜಿಲ್ ಹಾಗೂ ಚೀನಾ ರಾಷ್ಟ್ರಗಳು ಸದ್ಯದ ಸಂದಿಗ್ಧ ಪರಿಸ್ಥಿತಿಯಲ್ಲಿ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವ ರಾಷ್ಟ್ರಗಳಾಗಿವೆ’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.