ADVERTISEMENT

ಮಾಸ್ಕೊ ಮಾರಣಹೋಮ: ಉಕ್ರೇನ್‌ಗೆ ಪಲಾಯನ ಮಾಡುವಾಗ ದಾಳಿಕೋರರ ಬಂಧನ– ರಷ್ಯಾ

ಮಾಸ್ಕೊ ಹೊರವಲಯದಲ್ಲಿ ಗುಂಡಿನ ದಾಳಿ

ಎಪಿ
Published 24 ಮಾರ್ಚ್ 2024, 13:18 IST
Last Updated 24 ಮಾರ್ಚ್ 2024, 13:18 IST
ವ್ಲಾಡಿಮಿರ್‌ ಪುಟಿನ್‌
ವ್ಲಾಡಿಮಿರ್‌ ಪುಟಿನ್‌   

ಮಾಸ್ಕೊ: ಮಾಸ್ಕೊ ಹೊರವಲಯದ ಕ್ರಾಕಸ್ ಸಿಟಿ ಹಾಲ್‌ನಲ್ಲಿ ಗುಂಡಿನ ದಾಳಿ ನಡೆಸಿದ ನಾಲ್ವರು ಬಂದೂಕುಧಾರಿಗಳು ಉಕ್ರೇನ್‌ಗೆ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ಅವರನ್ನು ಸೆರೆ ಹಿಡಿಯಲಾಯಿತು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದ್ದಾರೆ.

ಪುಟಿನ್‌ ಅವರ ಈ ಹೇಳಿಕೆಯನ್ನು ತಳ್ಳಿ ಹಾಕಿರುವ ಉಕ್ರೇನ್‌, ‘ಕ್ರಾಕಸ್ ಸಿಟಿ ಹಾಲ್‌ನಲ್ಲಿ ನಡೆದ ದಾಳಿಯಲ್ಲಿ ತನ್ನ ಪಾತ್ರ ಇಲ್ಲ’ ಎಂದು ಹೇಳಿದೆ. ಈ ದಾಳಿಯೊಂದಿಗೆ ತಪ್ಪಾಗಿ ತಳುಕು ಹಾಕಲಾಗುತ್ತಿದೆ ಎಂದು ಪುಟಿನ್‌ ಸೇರಿದಂತೆ ರಷ್ಯಾದ ರಾಜಕೀಯ ನಾಯಕರ ವಿರುದ್ಧವೂ ಉಕ್ರೇನ್‌ ಆರೋಪ ಮಾಡಿದೆ.

‘ಈ ದಾಳಿಯನ್ನು ತಾನೇ ನಡೆಸಿದ್ದಾಗಿ ಐಎಸ್‌ ಹೊಣೆ ಹೊತ್ತಿಕೊಂಡಿದೆ. ಈ ದಾಳಿಯಲ್ಲಿ ಉಕ್ರೇನ್‌ನ ಯಾವುದೇ ಪಾತ್ರವಿಲ್ಲ’ ಎಂದು ಉಕ್ರೇನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರೆ ಆ್ಯಡ್ರಿಯೆನ್ ವಾಟ್ಸನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಮಾಸ್ಕೊದಲ್ಲಿ ಯೋಜಿತ ಭಯೋತ್ಪಾದಕ ದಾಳಿ ನಡೆಯುವ ಕುರಿತು ಮಾರ್ಚ್‌ ಆರಂಭದಲ್ಲಿಯೇ ರಷ್ಯಾಕ್ಕೆ ಮಾಹಿತಿ ನೀಡಿದ್ದ ಅಮೆರಿಕ, ರಷ್ಯಾದಲ್ಲಿರುವ ತನ್ನ ಪ್ರಜೆಗಳಿಗೂ ಈ ಬಗ್ಗೆ ಎಚ್ಚರಿಕೆ ನೀಡಿತ್ತು’ ಎಂದು ವಾಟ್ಸನ್ ಹೇಳಿದ್ದಾರೆ.

ಇಸ್ಲಾಮಿಕ್‌ ಸ್ಟೇಟ್‌ನ (ಐಎಸ್‌) ಅಫ್ಗಾನಿಸ್ತಾನ ಘಟಕವು ಈ ದಾಳಿಯನ್ನು ತಾನೇ ನಡೆಸಿದ್ದಾಗಿ ಹೇಳಿಕೊಂಡಿದೆ. ಆದರೆ, ಕ್ರಾಕಸ್‌ ಸಿಟಿ ಹಾಲ್‌ ಮೇಲೆ ದಾಳಿ ನಡೆದ ನಂತರ ದೇಶವನ್ನು ಉದ್ಧೇಶಿಸಿ ಮಾತನಾಡಿರುವ ಪುಟಿನ್‌ ಅವರು, ತಮ್ಮ ಭಾಷಣದಲ್ಲಿ ಎಲ್ಲಿಯೂ ಐಎಸ್‌ನ ಪ್ರಸ್ತಾಪ ಮಾಡಿಲ್ಲ.  

‘ಇದು ಬರ್ಬರವಾದ ಉಗ್ರರ ಕೃತ್ಯ’ ಎಂದು ಹೇಳಿದ್ದ ಪುಟಿನ್‌, ‘ನಾಲ್ವರು ಶಂಕಿತರು ಉಕ್ರೇನ್‌ ಗಡಿಗೆ ಹೊಂದಿಕೊಂಡಂತೆ ನಿರ್ಮಿಸಲಾಗಿದ್ದ ಕಿರುಮಾರ್ಗದ ಮೂಲಕ ಪರಾರಿಯಾಗಲು ಯತ್ನಿಸುತ್ತಿದ್ದಾಗ ರಷ್ಯಾ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ’ ಎಂದು ಹೇಳಿದ್ದಾರೆ.

ಶಂಕಿತರನ್ನು ಬಂಧಿಸಿ, ಅವರನ್ನು ವಿಚಾರಣೆಗೆ ಒಳಪಡಿಸುತ್ತಿದ್ದ ದೃಶ್ಯಗಳಿರುವ ವಿಡಿಯೊಗಳನ್ನು ರಷ್ಯಾ ಮಾಧ್ಯಮಗಳು ಪ್ರಸಾರ ಮಾಡಿವೆ.

‘ಇಸ್ಲಾಮಿಕ್‌ ಬೋಧಕನ ಸಹಾಯಕನೊಬ್ಬ ತನ್ನನ್ನು ಸಂಪರ್ಕಿಸಿದ್ದ. ಈ ದಾಳಿಯಲ್ಲಿ ಪಾಲ್ಗೊಂಡಲ್ಲಿ ಹಣ ನೀಡುವುದಾಗಿ ತಿಳಿಸಿದ್ದ’ ಎಂಬುದಾಗಿ ಬಂಧಿತರ ಪೈಕಿ ಒಬ್ಬಾತ ಹೇಳಿಕೆ ನೀಡುತ್ತಿರುವುದು ವಿಡಿಯೊದಲ್ಲಿದೆ.

ದಾಳಿಕೋರರ ಪೈಕಿ ಒಬ್ಬಾತ ತಜಕಿಸ್ತಾನ ಪ್ರಜೆ ಎಂದು ರಷ್ಯಾ ಮಾಧ್ಯಮಗಳು ಗುರುತಿಸಿವೆ.

ಅಫ್ಗಾನಿಸ್ತಾನ ಗಡಿಗೆ ಹೊಂದಿಕೊಂಡಿರುವ ತಜಕಿಸ್ತಾನ ಮುಸ್ಲಿಂ ಬಾಹುಳ್ಯದ ದೇಶ. 15 ಲಕ್ಷದಷ್ಟು ತಜಕಿಸ್ತಾನ ಪ್ರಜೆಗಳು ರಷ್ಯಾದಲ್ಲಿ ಉದ್ಯೋಗದಲ್ಲಿದ್ದು, ಬಹುತೇಕರು ರಷ್ಯಾ ಪೌರತ್ವ ಹೊಂದಿದ್ದಾರೆ.

ಶೋಕ ದಿನ ಘೋಷಣೆ: ದಾಳಿಯಲ್ಲಿ ಮೃತಪಟ್ಟವರ ಗೌರವಾರ್ಥ ಭಾನುವಾರ ಶೋಕ ದಿನವನ್ನಾಗಿ ಘೋಷಿಸಿರುವ ಪುಟಿನ್, ದೇಶದಾದ್ಯಂತ ಭದ್ರತೆಯನ್ನು ಸಹ ಹೆಚ್ಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.