ಮಾಸ್ಕೋ: ರಾಷ್ಟ್ರದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಉಕ್ರೇನ್ ಮೇಲೆ ಆಕ್ರಮಣ ಮಾಡುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ತಿಳಿಸಿದ್ದಾರೆ. ತಮ್ಮ ಸೈನ್ಯವು ಉಕ್ರೇನ್ ಮೇಲೆ ದಾಳಿ ಮಾಡಿದ ಗಂಟೆಗಳ ನಂತರ ಅವರು ಮಾತನಾಡಿದರು.
'ಈಗ ಏನಾಗುತ್ತಿದೆಯೋ ಅದನ್ನ ಬಿಟ್ಟು ನಮಗೆ ಬೇರೆ ಯಾವುದೇ ಆಯ್ಕೆಯಿಲ್ಲ. ನಮಗೆ ಮುಂದುವರಿಯಲು ಬೇರೆ ಮಾರ್ಗವಿಲ್ಲ' ಎಂದು ರಷ್ಯಾದ ನಾಯಕ, ವ್ಯಾಪಾರ ಪ್ರತಿನಿಧಿಗಳೊಂದಿಗೆ ನಡೆದ ದೂರದರ್ಶನದ ಸಭೆಯಲ್ಲಿ ಹೇಳಿದ್ದಾರೆ.
'ತಮ್ಮ ದೇಶವು ವಿಶ್ವ ಆರ್ಥಿಕತೆಯ ಭಾಗವಾಗಿ ಉಳಿಯಲು ಬಯಸಿದೆ ಮತ್ತು ಅದಕ್ಕೆ ಹಾನಿ ಮಾಡುವ ಯಾವುದೇ ಯೋಜನೆ ನಮ್ಮ ಮುಂದಿಲ್ಲ. ರಷ್ಯಾ ವಿಶ್ವ ಆರ್ಥಿಕತೆಯ ಭಾಗವಾಗಿಯೇ ಉಳಿದಿದೆ' ಎಂದು ಪುಟಿನ್ ಅವರು ಉಕ್ರೇನ್ ಮೇಲೆ ದಾಳಿ ನಡೆಸಲು ಸೇನೆಗೆ ಆದೇಶಿಸಿದ ನಂತರ ಸಭೆಯಲ್ಲಿ ತಿಳಿಸಿದ್ದಾರೆ.
'ನಾವು ಭಾಗವಾಗಿರುವ ವಿಶ್ವ ಆರ್ಥಿಕ ವ್ಯವಸ್ಥೆಯನ್ನು ನಾವು ಹಾನಿಗೊಳಿಸುವುದಿಲ್ಲ. ಅಲ್ಲದೆ, ರಷ್ಯಾವನ್ನು ಅಂತರರಾಷ್ಟ್ರೀಯ ಆರ್ಥಿಕ ಸಮುದಾಯದಿಂದ ಹೊರಗಿಡಲು ನಾವು ಬಯಸುವುದಿಲ್ಲ' ಎಂದು ಹೇಳಿದ್ದಾರೆ.
'ನಮ್ಮ ಪಾಲುದಾರರು ಇದನ್ನು ಅರ್ಥಮಾಡಿಕೊಳ್ಳಬೇಕು ಮತ್ತು ನಮ್ಮನ್ನು ಈ ವ್ಯವಸ್ಥೆಯಿಂದ ಹೊರಗೆ ತಳ್ಳುವ ಕೆಲಸವನ್ನು ಮಾಡಬಾರದು ಎಂದು ನನಗನಿಸುತ್ತದೆ' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.