ADVERTISEMENT

ಬಂಡಾಯಗಾರರು ರಷ್ಯಾದ ಶತ್ರುಗಳ ಕೈಗೊಂಬೆ: ಪುಟಿನ್‌

ಎಪಿ
Published 27 ಜೂನ್ 2023, 12:27 IST
Last Updated 27 ಜೂನ್ 2023, 12:27 IST
ವ್ಲಾಡಿಮಿರ್‌ ಪುಟಿನ್‌
ವ್ಲಾಡಿಮಿರ್‌ ಪುಟಿನ್‌   

ಮಾಸ್ಕೊ: ತಮ್ಮ ದೇಶದ ವಿರುದ್ಧ ಬಂಡಾಯವೆದ್ದಿದ್ದ ಖಾಸಗಿ ಸೇನಾ ಗುಂಪು ‘ವ್ಯಾಗ್ನರ್‌’ ವಿರುದ್ಧ ಹರಿಹಾಯ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ‘ದೇಶದ್ರೋಹಿಗಳು ಉಕ್ರೇನ್‌ ಸರ್ಕಾರ ಮತ್ತು ಅದರ ಮಿತ್ರ ರಾಷ್ಟ್ರಗಳ ಕೈಗೊಂಬೆಯಾಗಿ ವರ್ತಿಸಿದ್ದಾರೆ’ ಎಂದು ಹೇಳಿದ್ದಾರೆ.

ಟಿ.ವಿ. ವಾಹಿನಿಯಲ್ಲಿ ಸೋಮವಾರ ಮಧ್ಯರಾತ್ರಿ ಮಾತನಾಡಿದ ಅವರು, ಬಂಡಾಯಕ್ಕೆ ಕರೆ ನೀಡಿದ್ದವರು ರಷ್ಯಾ ಸೈನಿಕರ ಮೇಲೆ ಗುಂಡು ಹಾರಿಸಲು ಖಾಸಗಿ ಯೋಧರನ್ನು ಒತ್ತಾಯಿಸಿದ್ದರು ಎಂದು ವ್ಯಾಗ್ನರ್‌ ಗುಂಪಿನ ಮುಖ್ಯಸ್ಥ ಯೆವ್ಗೆನಿ ಪ್ರಿಗೋಷಿನ್‌ ಅವರ ಹೆಸರು ಉಲ್ಲೇಖಿಸದೆ ಆರೋಪಿಸಿದ್ದಾರೆ.

ಬಂಡಾಯದ ಬಳಿಕ ರಷ್ಯಾವು ವಿಭಜನೆಯಾಗಲಿದೆ ಮತ್ತು ದುರ್ಬಲವಾಗಲಿದೆ ಎಂದು ನಮ್ಮ ಶತ್ರುಗಳು ನಂಬಿದ್ದರು. ಅವರ ಲೆಕ್ಕಾಚಾರ ತಲೆಕೆಳಗಾಗಿದೆ. ಸಂಕಷ್ಟದ ವೇಳೆ ಇಡೀ ರಾಷ್ಟ್ರವು ಒಗ್ಗಟ್ಟಾಗಿ ನಿಂತಿತ್ತು ಎಂದೂ ಪುಟಿನ್‌ ಪ್ರತಿಪಾದಿಸಿದ್ದಾರೆ.

ADVERTISEMENT

ಐದು ನಿಮಿಷ ವಾಹಿನಿಯಲ್ಲಿ ಮಾತನಾಡಿದ ಪುಟಿನ್‌ ಅವರು ರಷ್ಯಾದಲ್ಲಿ ಎಲ್ಲವೂ ಸ್ಥಿರವಾಗಿದೆ ಎಂಬುದನ್ನು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಂಡಾಯಗಾರರನ್ನು ಟೀಕಿಸುವ ವೇಳೆಯೂ ಮತ್ತೊಂದು ಬಿಕ್ಕಟ್ಟು ಸೃಷ್ಟಿಯಾಗದಂತೆ ಸಮತೋಲನ ಸಾಧಿಸಲು  ಅವರು ಪ್ರಯತ್ನಿಸಿದ್ದರು ಎಂದಿವೆ.

ರಷ್ಯಾದಲ್ಲಿ ನಡೆದಿದ್ದ ಬಂಡಾಯ ಯತ್ನದ ಬಗ್ಗೆ ಪಾಶ್ಚಾತ್ಯ ದೇಶಗಳ ನಾಯಕರು ಮೌನ ವಹಿಸಿದ್ದಾರೆ.

‘ಬಂಡಾಯದ ಹಿಂದೆ ಅಮೆರಿಕ ಮತ್ತು ನ್ಯಾಟೊದ ಕೈವಾಡವಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಸೋಮವಾರ ಸ್ಪಷ್ಟಪಡಿಸಿದ್ದರು.

‘ವ್ಯಾಗ್ನರ್‌ ಪಡೆ ನಿರ್ನಾಮವಾಗುವುದನ್ನು ತಪ್ಪಿಸಲು ಮತ್ತು ಅನ್ಯಾಯದ ವಿರುದ್ಧ ನಾವು ಬಂಡಾಯವೆದ್ದಿದ್ದೆವು’ ಎಂದು ಯೆವ್ಗೆನಿ ಪ್ರಿಗೋಷಿನ್‌ ಹೇಳಿದ್ದರು.

ಬಂಡಾಯವನ್ನು ಶಮನಗೊಳಿಸಲು ಸಹಕರಿಸಿದ ಯೋಧರನ್ನು ಉದ್ದೇಶಿಸಿ ಪುಟಿನ್‌ ಅವರು ಮಂಗಳವಾರ ಮಾತನಾಡಿದ್ದಾರೆ ಎಂದು ರಷ್ಯಾದ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ.

ಪ್ರಿಗೋಷಿನ್‌ ವಿರುದ್ಧದ ತನಿಖೆ ಕೈಬಿಟ್ಟ ಎಫ್‌ಎಸ್‌ಬಿ
ಪ್ರಿಗೋಷಿನ್‌ ವಿರುದ್ಧದ ತನಿಖೆಯನ್ನು ನಿಲ್ಲಿಸಿದ್ದೇವೆ ಎಂದು ರಷ್ಯಾದ ಫೆಡರಲ್‌ ಭದ್ರತಾ ಸೇವೆ (ಎಫ್‌ಎಸ್‌ಬಿ) ಮಂಗಳವಾರ ಘೋಷಿಸಿದೆ. ಬಂಡಾಯದಲ್ಲಿ ಭಾಗಿಯಾಗಿದ್ದ ಇತರರ ವಿರುದ್ಧವೂ ಯಾವುದೇ ಪ್ರಕರಣಗಳನ್ನು ದಾಖಲಿಸಿಕೊಳ್ಳುವುದಿಲ್ಲ ಎಂದೂ ಹೇಳಿದೆ. ಬಂಡಾಯಗಾರರ ವಿರುದ್ಧ ಯಾವುದೇ ವಿಚಾರಣೆ ನಡೆಸುವುದಿಲ್ಲ ಎಂದು ರಷ್ಯಾವು ಶನಿವಾರ  ಭರವಸೆ ನೀಡಿತ್ತು. ರಷ್ಯಾದಲ್ಲಿ ಸರ್ಕಾರದ ವಿರುದ್ಧ ಬಂಡಾಯವೆದ್ದರೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಈ ಹಿಂದೆ ಹಲವು ವಿರೋಧಪಕ್ಷಗಳ ನಾಯಕರು ಇಂತಹ ಶಿಕ್ಷೆಗೆ ಗುರಿಯಾಗಿದ್ದರು ಎಂದಿವೆ. ಪ್ರಿಗೋಷಿನ್‌ ಎಲ್ಲಿದ್ದಾರೆ ಎಂಬುದು ನಿಗೂಢವಾಗಿರುವ ನಡುವೆಯೇ ಅವರು ಬಳಸಿದ್ದ ವಿಮಾನವು ಬೆಲರೂಸ್‌ನ ರಾಜಧಾನಿ ಮಿನ್ಸ್ಕ್‌ ಬಳಿ ಮಂಗಳವಾರ ಬೆಳಿಗ್ಗೆ ಇಳಿದಿದೆ ಎಂದು ಅಲ್ಲಿನ ಸೇನೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.