ADVERTISEMENT

ಕ್ವಾಡ್‌ ಕೂಟದ ನಾಯಕರ ಸಭೆ: ಚೀನಾ ವಿರುದ್ಧ ಪರೋಕ್ಷ ಹೇಳಿಕೆ

ಯಥಾಸ್ಥಿತಿ ಬದಲಿಗೆ ಬಲ ಪ್ರಯೋಗ: ಎಚ್ಚರ

ಏಜೆನ್ಸೀಸ್
Published 24 ಮೇ 2022, 19:31 IST
Last Updated 24 ಮೇ 2022, 19:31 IST
ಕ್ವಾಡ್‌ ಕೂಟದ ಸಭೆಯಲ್ಲಿ ಭಾಗವಹಿಸಲು ಬಂದ ಭಾರತದ ಪ್ರಧಾನಿ ನರೇಂದ್ರ ಮೋದಿ, ಜಪಾನ್‌ ಪ್ರಧಾನಿ ಫುಮಿಯೊ ಕಿಶಿಡಾ, ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್‌  ಪಿಟಿಐ ಚಿತ್ರ
ಕ್ವಾಡ್‌ ಕೂಟದ ಸಭೆಯಲ್ಲಿ ಭಾಗವಹಿಸಲು ಬಂದ ಭಾರತದ ಪ್ರಧಾನಿ ನರೇಂದ್ರ ಮೋದಿ, ಜಪಾನ್‌ ಪ್ರಧಾನಿ ಫುಮಿಯೊ ಕಿಶಿಡಾ, ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್‌  ಪಿಟಿಐ ಚಿತ್ರ   

ಟೋಕಿಯೊ: ಯಥಾಸ್ಥಿತಿಯನ್ನು ಬಲಪ್ರಯೋಗಿಸಿ ಬದಲಾಯಿಸುವ ಪ್ರಯತ್ನದ ವಿರುದ್ಧ ಕ್ವಾಡ್‌ ನಾಯಕರು ಮಂಗಳವಾರ ಎಚ್ಚರಿಕೆ ನೀಡಿದ್ದಾರೆ. ಚೀನಾವು ತೈವಾನ್‌ ಮೇಲೆ ಯುದ್ಧ ಸಾರುವ ಭೀತಿ ಎದುರಾಗಿರುವ ಸಂದರ್ಭದಲ್ಲಿ ಕ್ವಾಡ್‌ ನಾಯಕರು ಈ ಎಚ್ಚರಿಕೆ ನೀಡಿದ್ದಾರೆ.

ಟೋಕಿಯೊದಲ್ಲಿ ನಡೆದ ಕ್ವಾಡ್‌ ಕೂಟದ ಶೃಂಗಸಭೆಯ ಜಂಟಿ ಹೇಳಿಕೆಯಲ್ಲಿ ಚೀನಾವನ್ನು ನೇರವಾಗಿ ಎಲ್ಲಿಯೂ ಹೆಸರಿಸಿಲ್ಲ. ಆದರೆ, ಚೀನಾವನ್ನು ಉದ್ದೇಶಿಸಿಯೇ ಈ ಎಚ್ಚರಿಕೆ ನೀಡಲಾಗಿದೆ ಎಂಬುದು ಅತ್ಯಂತ ಸ್ಪಷ್ಟವಾಗಿದೆ.

ಅತ್ಯಂತ ಎಚ್ಚರಿಕೆಯಿಂದ ಬರೆಯಲಾಗಿರುವ ಜಂಟಿ ಹೇಳಿಕೆಯಲ್ಲಿ ಉಕ್ರೇನ್‌ ಸಂಘರ್ಷದ ಬಗ್ಗೆಯೂ ಉಲ್ಲೇಖ ಇದೆ. ಆದರೆ. ರಷ್ಯಾದ ನಡೆಯನ್ನು ಎಲ್ಲಿಯೂ ಖಂಡಿಸಲಾಗಿಲ್ಲ. ರಷ್ಯಾ–ಉಕ್ರೇನ್ ಸಂಘರ್ಷದಲ್ಲಿ ರಷ್ಯಾವನ್ನು ಖಂಡಿಸಲು ಭಾರತ ನಿರಾಕರಿಸಿದೆ. ಕ್ವಾಡ್‌ನ ಇತರ ರಾಷ್ಟ್ರಗಳಿಗಿಂತ ಭಿನ್ನವಾದ ನಿಲುವನ್ನು ಭಾರತ ತಳೆದಿದೆ. ತನ್ನ ನಿಲುವನ್ನು ಕ್ವಾಡ್‌ನ ಇತರ ರಾಷ್ಟ್ರಗಳು ಅರ್ಥ ಮಾಡಿಕೊಂಡಿವೆ ಎಂದು ಭಾರತ ಹೇಳಿದೆ.

ADVERTISEMENT

‘ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣವು ಅಂತರರಾಷ್ಟ್ರೀಯ ವ್ಯವಸ್ಥೆಯ ಮೂಲಭೂತ ತತ್ವಗಳನ್ನೇ ಅಲುಗಾಡುವಂತೆ ಮಾಡಿದೆ. ಯಥಾಸ್ಥಿತಿಯನ್ನು ಬಲಪ್ರಯೋಗಿಸಿ ಬದಲಾಯಿಸುವ ಯತ್ನವನ್ನು ಎಲ್ಲಿಯೂ ಸಹಿಸಲಾಗದು ಮತ್ತು ವಿಶೇಷವಾಗಿ ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿಯೂ ಅದನ್ನು ಸಹಿಸುವುದಿಲ್ಲ ಎಂದು ನಾವು ದೃಢಪಡಿಸುತ್ತಿದ್ದೇವೆ’ ಎಂದು ಜಂಟಿ ಹೇಳಿಕೆಯಲ್ಲಿ ಘೋಷಿಸಲಾಗಿದೆ.

ತೈವಾನ್‌ ಮೇಲೆ ಚೀನಾವು ದಾಳಿ ನಡೆಸಲು ಸಜ್ಜಾಗಿದೆ ಎಂಬ ವರದಿಗಳು ಸೋಮವಾರ ಪ್ರಕಟವಾಗಿದ್ದವು. ಚೀನಾ ದಾಳಿ ನಡೆಸಿದರೆ ಮಧ್ಯಪ್ರವೇಶಕ್ಕೆ ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದರು. ಅದರ ಮರು ದಿನವೇ ಕ್ವಾಡ್‌ ನಾಯಕರ ಸಭೆ ನಡೆದಿದೆ.

ರಷ್ಯಾ ಮತ್ತು ಚೀನಾದ ಯುದ್ಧ ವಿಮಾನಗಳು ಜಪಾನ್‌ ಸಮುದ್ರ ಮತ್ತು ಪೂರ್ವ ಚೀನಾ ಸಮುದ್ರದ ಮೇಲೆ ಜತೆಯಾಗಿ ಹಾರಾಟ ನಡೆಸಿವೆ ಎಂದು ಕ್ವಾಡ್‌ ಸಭೆಯ ಕೆಲ ತಾಸುಗಳ ಬಳಿಕ ಜಪಾನ್‌ ಹೇಳಿದೆ. ಇದು ‘ಪ್ರಚೋದನಕಾರಿ’ ಎಂದು ಜಪಾನ್‌ನ ರಕ್ಷಣಾ ಸಚಿವ ಹೇಳಿದ್ದಾರೆ.

ಹಾರಾಟ ನಡೆಸಿದ್ದನ್ನು ಚೀನಾ ದೃಢಪಡಿಸಿದೆ. ಇದು ಚೀನಾ–ರಷ್ಯಾ ನಡುವಣ ‘ವಾರ್ಷಿಕ ಸೇನಾ ಸಹಕಾರ ಯೋಜನೆ’ಯ ಭಾಗ ಎಂದು ಹೇಳಿದೆ.

ಮೂರು ದೇಶಗಳ ಮುಖ್ಯಸ್ಥರ ಜೊತೆ ಮೋದಿ ಮಾತುಕತೆ: ಜಪಾನ್‌ನಲ್ಲಿ ನಡೆಯುತ್ತಿರುವ ಕ್ವಾಡ್ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ ಹಾಗೂ ಆಸ್ಟ್ರೇಲಿಯಾ ನೂತನ ಪ್ರಧಾನಿ ಅಲ್ಬನೀಸ್ ಅವರ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪ್ರತ್ಯೇಕವಾಗಿ ಫಲಪ್ರದ ಮಾತುಕತೆ ನಡೆಸಿದರು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ವ್ಯಾಪಾರ, ತಂತ್ರಜ್ಞಾನ ಹಾಗೂ ರಕ್ಷಣಾ ಪಾಲುದಾರಿಕೆ ವಿಚಾರದಲ್ಲಿ ಬೈಡನ್ ಹಾಗೂ ಪ್ರಧಾನಿ ಮೋದಿ ಮಾತುಕತೆ ನಡೆಸಿದರು. ಉಭಯ ದೇಶಗಳ ಭದ್ರತಾ ಸಂಸ್ಥೆಗಳ ಮಹತ್ವದ ಹಾಗೂ ತಂತ್ರಜ್ಞಾನ ಪಾಲುದಾರಿಕೆಯನ್ನು ಹೆಚ್ಚಿಸುವ ನಿರ್ಧಾರಕ್ಕೆ ಬರಲಾಗಿದೆ. ಹೂಡಿಕೆ ಹೆಚ್ಚಿಸುವ ಮಾರ್ಗಗಳ ಬಗ್ಗೆ ಚರ್ಚೆ ನಡೆಯಿತು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.

ಅಮೆರಿಕದ ಉದ್ಯಮಿಗಳ ಜೊತೆ ಸಂವಾದ ನಡೆಸಿದ ಪ್ರಧಾನಿ, ಭಾರತದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದರು. ಭಾರತದಲ್ಲಿ ಹೂಡಿಕೆಗೆ ಇರುವ ಅವಕಾಶಗಳನ್ನು ಅವರು ವಿವರಿಸಿದರು.ಉಕ್ರೇನ್ ಯುದ್ಧದ ಪರಿಣಾಮಗಳ ಬಗ್ಗೆ ಮೋದಿ ಅವರಿಗೆ ವಿವರಿಸಿದ್ದಾಗಿ ಬೈಡನ್ ಹೇಳಿದ್ದಾರೆ. ಆದರೆ ಮೋದಿ ಅವರು ಯುದ್ಧದ ಉಲ್ಲೇಖವನ್ನು ಮಾಡಿಲ್ಲ.

ರಕ್ಷಣಾ ಉತ್ಪಾದನೆ ಸೇರಿದಂತೆ ರಕ್ಷಣಾ ಸಹಕಾರ ಕ್ಷೇತ್ರದಲ್ಲಿ ಜಪಾನ್ ಹಾಗೂ ಭಾರತ ದ್ವಿಪಕ್ಷೀಯ ಸಂಬಂಧ ವನ್ನು ಇನ್ನಷ್ಟು ವಿಸ್ತರಿಸಲು ನಿರ್ಧರಿಸಿವೆ. 2+2 ವಿದೇಶಾಂಗ ಹಾಗೂರಕ್ಷಣಾ ಸಚಿವರ ಮಟ್ಟದ ಮಾತುಕತೆಯನ್ನು ಜಪಾನ್‌ನಲ್ಲಿ ಶೀಘ್ರದಲ್ಲೇ ನಡೆಸಲು ಒಪ್ಪಿಗೆ ಸೂಚಿಸಲಾಯಿತು.

ಮುಂಬೈ–ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆ (ಎಂಎಎಚ್‌ಎಸ್‌ಆರ್) ಅನುಷ್ಠಾನ ಪ್ರಗತಿ, ಸೆಮಿಕಂಡಕ್ಟರ್, 5ಜಿಯಂತಹ ತಂತ್ರಜ್ಞಾನಗಳಲ್ಲಿ ಪಾಲುದಾರಿಕೆಯ ಸಾಧ್ಯತೆಗಳ ಬಗ್ಗೆ ಮೋದಿ ಮತ್ತು ಕಿಶಿಡಾ ಸಮಾಲೋಚನೆ ನಡೆಸಿದರು. ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡ ಭಾರತೀಯರಿಗೆ ಜಪಾನ್‌ಗೆ ಭೇಟಿ ಪ್ರಕ್ರಿಯೆಯನ್ನು ಸರಳಗೊಳಿಸುವ ವಿಚಾರವನ್ನು ಮೋದಿ ಪ್ರಸ್ತಾಪಿಸಿದರು. ಪ್ರಾದೇಶಿಕ ಹಾಗೂ ಜಾಗತಿಕ ವಿದ್ಯಮಾನಗಳ ಬಗ್ಗೆ ಮೋದಿ–ಕಿಶಿಡಾ ಚರ್ಚೆ ನಡೆಸಿದರು ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಕೌಶಲ ಅಭಿವೃದ್ಧಿ, ಪಾಲುದಾರಿಕೆ, ವ್ಯಾಪಾರ, ತಂತ್ರಜ್ಞಾನ, ಪ್ರಾದೇಶಿಕ ಸರಕು ಪೂರೈಕೆ ಸರಪಳಿ ಮೊದಲಾದ ವಿಚಾರಗಳಲ್ಲಿ ಉಭಯ ನಾಯಕರು ಫಲಪ್ರದ ಮಾತುಕತೆ ನಡೆಸಿದರು ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್‌ ಕ್ವಾತ್ರಾ ತಿಳಿಸಿದ್ದಾರೆ.

ಹೊಸದಾಗಿ ಆಯ್ಕೆಯಾಗಿರುವ ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್ ಅವರ ಜೊತೆಗಿನ ಮಾತುಕತೆಯೂ ಯಶಸ್ವಿಯಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ದಿನದ ವಿದ್ಯಮಾನಗಳು
* ಕ್ವಾಡ್ ದೇಶಗಳಲ್ಲಿ ಹೊಸ ತಲೆಮಾರಿನ ವಿಜ್ಞಾನಿಗಳು ಹಾಗೂ ತಂತ್ರಜ್ಞಾನಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಕ್ವಾಡ್ ಫೆಲೋಶಿಪ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು

* ಹಣಕಾಸು, ತಂತ್ರಜ್ಞಾನ ವಲಯಗಳಲ್ಲಿ ಪರಸ್ಪರ ಸಹಕಾರದ ಮೂಲಕ ಕ್ವಾಡ್ ದೇಶಗಳು ಜಾಗತಿಕ ಆರೋಗ್ಯ ಮೂಲಸೌಕರ್ಯ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಲು ನಿರ್ಧರಿಸಿವೆ

* ವಿದೇಶಾಂಗ ಸಚಿವ ಜೈಶಂಕರ್ ಅವರು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಹಾಗೂ ಜಪಾನ್ ವಿದೇಶಾಂಗ ಸಚಿವ ಯೋಶಿಮಸಾ ಹಯಾಶಿ ಅವರ ಜೊತೆ ಮಾತುಕತೆ ನಡೆಸಿದರು. ಉಕ್ರೇನ್–ರಷ್ಯಾ ಯುದ್ಧದ ಪರಿಣಾಮಗಳ ಬಗ್ಗೆ ಚರ್ಚೆ ನಡೆಯಿತು

* ಪ್ರಧಾನಿ ಮೋದಿ ಅವರು ಜಪಾನ್ ಮಾಜಿ ಪ್ರಧಾನಿಗಳಾದ ಯೋಶಿಹಿದಾ ಸುಗಾ, ಯೋಶಿರೋ ಮೋರಿ ಹಾಗೂ ಶಿಂಜೊ ಅಬೆ ಜೊತೆ ಮಾತುಕತೆ ನಡೆಸಿದರು. ಉಭಯ ದೇಶಗಳ ಪಾಲುದಾರಿಕೆ ಬಲಗೊಳಿಸುವ ಬಗ್ಗೆ ಮಾತುಕತೆ ನಡೆಯಿತು. ಮೋರಿ ಅವರು ಜಪಾನ್–ಭಾರತ ಅಸೋಸಿಯೇಷನ್ ಮುಖ್ಯಸ್ಥರಾಗಿದ್ದು, ಅಬೆ ಅವರು ಸದ್ಯದಲ್ಲೇ ಈ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ

* ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿ ಮೂಲಸೌಕರ್ಯಕ್ಕೆ ಮುಂದಿನ ಐದು ವರ್ಷಗಳಲ್ಲಿ 5,000 ಕೋಟಿ ಡಾಲರ್‌ (₹3.87 ಲಕ್ಷ ಕೋಟಿ) ಹೂಡಿಕೆ ಮಾಡಲು ನಿರ್ಧಾರ

* ಚೀನಾದ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಸಾಗರ ನಿಗಾ ವ್ಯವಸ್ಥೆಯ ಜಾಲ ರೂಪಿಸಲು ತೀರ್ಮಾನ

* ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಅವರು ಪಪುವಾ ನ್ಯೂಗಿನಿ, ಫಿಜಿ, ಕಿರಿಬಾಟಿ ಸೇರಿದಂತೆ ಇಂಡೊ–ಪೆಸಿಫಿಕ್‌ ಪ್ರದೇಶದ ಎಂಟು ದೇಶಗಳಿಗೆ ಈ ವಾರ ಭೇಟಿ ಕೊಡಲಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.