ADVERTISEMENT

PV Web Exclusive | ಥಾಯ್ಲೆಂಡ್‌ನ ಯೋಜನೆಗಳಲ್ಲಿ ‘ಕ್ವಾಡ್‌ ಕೂಟ’ದ ಆಸಕ್ತಿ

ಚೀನಾ ಆಕ್ರಮಣಶೀಲತೆಗೆ ಮತ್ತೊಂದು ಎದುರೇಟು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 12:23 IST
Last Updated 22 ಸೆಪ್ಟೆಂಬರ್ 2020, 12:23 IST
ಕ್ರಾ ಕಾಲುವೆ
ಕ್ರಾ ಕಾಲುವೆ   

ಹಿಂದೂ ಮಹಾ ಸಾಗರ ಮತ್ತು ಪೆಸಿಫಿಕ್‌ ಸಾಗರವನ್ನು ಒಂದುಗೂಡಿಸುವ, ಜಲಮಾರ್ಗದ ಅಂತರ ಕಡಿಮೆ ಮಾಡುವ ಉದ್ದೇಶದಿಂದ ಥಾಯ್‌ ಕಾಲುವೆ ಅಥವಾ ಕ್ರಾ ಕಾಲುವೆ ನಿರ್ಮಾಣಕ್ಕೆ ಚೀನಾ 2015ರಲ್ಲಿ ಥಾಯ್ಲೆಂಡ್‌ನೊಂದಿಗೆ ಸಹಿ ಹಾಕಿತ್ತು. ಈ ಮೂಲಕ ಇಂಡೊ–ಫೆಸಿಫಿಕ್‌ ವಲಯದಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬಯಸಿತ್ತು. ಇದೀಗ ಥಾಯ್ಲೆಂಡ್‌ ಈ ಕಾಲುವೆ ನಿರ್ಮಾಣವನ್ನು ಹಿನ್ನೆಲೆಗೆ ಸರಿಸಿದ್ದು, ರೈಲು ಮಾರ್ಗ ನಿರ್ಮಿಸಲು ಮುಂದಾಗಿದೆ.

ಏಕಾಏಕಿ ಯೋಜನೆಯನ್ನು ಬದಲಿಸಲು ‘ಕ್ವಾಡ್‌’ ರಾಷ್ಟ್ರಗಳೇ ಕಾರಣ ಎನ್ನಲಾಗಿದೆ. ಈ ವಾದವನ್ನು ಸಮರ್ಥಿಸುವಂತೆ ‘ಕ್ರಾ ಕಾಲುವೆ ಯೋಜನೆ’ಗೆ ಭಾರತ, ಆಸ್ಟ್ರೇಲಿಯಾ, ಅಮೆರಿಕ, ಜಪಾನ್‌ಗಳು ಆಸಕ್ತಿ ತೋರಿವೆ ಎಂದು ಇತ್ತೀಚೆಗೆ ಥಾಯ್ಲೆಂಡ್‌ ಹೇಳಿದೆ. ಇದರೊಂದಿಗೆ ಆಗ್ನೇಯ ಏಷ್ಯಾದಲ್ಲಿ ಚೀನಾದ ಮತ್ತೊಂದು ಮಹತ್ವಕಾಂಕ್ಷಿ ಯೋಜನೆಯೊಂದಕ್ಕೆ ಹಿನ್ನಡೆ ಉಂಟಾಗಿದೆ.

120 ಕಿ.ಮೀ ಉದ್ದದ ಥಾಯ್‌ ಕಾಲುವೆ ನಿರ್ಮಾಣವು ಸಾಗರ ವಹಿವಾಟಿನಲ್ಲಿ ಮಹತ್ವದ ತಿರುವು ನೀಡಲಿದೆ. ಈಜಿಪ್ಟ್‌ನಲ್ಲಿ ಸೂಯೆಜ್‌ ಕಾಲುವೆ ನಿರ್ಮಿಸುವ ಮೂಲಕ ಯೂರೋಪ್‌ ಮೇಲೆ ಬ್ರಿಟನ್‌ ಪ್ರಭಾವ ಬೀರಿದಂತೆಯೇ ಥಾಯ್ಲೆಂಡ್‌ನ ನವ ಯೋಜನೆಗಳಿಗೆ ಬೆಂಬಲ ನೀಡುವ ಮೂಲಕ ಆಗ್ನೇಯ ಏಷ್ಯಾದಲ್ಲಿ ಪ್ರಭಾವವನ್ನು ಹೆಚ್ಚಿಸಿಕೊಳ್ಳುವುದು ಚೀನಾ ಮತ್ತು ಕ್ವಾಡ್‌ ಕೂಟದ ಉದ್ದೇಶವಾಗಿದೆ.

ADVERTISEMENT

ಮಲಕ್ಕಾ ಜಲಸಂಧಿ‌ಯಲ್ಲಿ ಪ್ರಪಂಚದ ಮೂರನೇ ಒಂದರಷ್ಟು ಸರಕು ಸಾಗಣೆಯಾಗುತ್ತದೆ.ಕಾಲುವೆ ನಿರ್ಮಾಣವಾದರೆ ಮಲಯ್‌ ಪರ್ಯಾಯ ಪ್ರಸ್ಥಭೂಮಿಯನ್ನು 1,200 ಕಿ.ಮೀನಷ್ಟು ಬಳಸುವುದು ತಪ್ಪುತ್ತದೆ. ಅಲ್ಲದೆ, ಮೂರು ದಿನದ ಪ್ರಯಾಣ ಉಳಿತಾಯವಾಗುತ್ತದೆ. ಹೀಗಾಗಿಯೇ ಚೀನಾವು ಥಾಯ್ಲೆಂಡ್‌ನ ಯೋಜನೆಗಳ ಮೇಲೆ ಬಂಡವಾಳ ಹೂಡಲು ಉತ್ಸುಕವಾಗಿತ್ತು. ಸಾಗರ ವ್ಯಾಪಾರದಲ್ಲಿ ಮೇಲುಗೈ ಸ್ಥಾಪಿಸುವುದು ಅದರ ಉದ್ದೇಶವಾಗಿತ್ತು.

‘ಕಾಲುವೆ ನಿರ್ಮಾಣ ಯೋಜನೆಯನ್ನು ಬೆಂಬಲಿಸಲು ಭಾರತ, ಆಸ್ಟ್ರೇಲಿಯಾ, ಅಮೆರಿಕ ನಿರ್ಧರಿಸಿವೆ.ಒಪ್ಪಂದಕ್ಕೆ ಸಹಿ ಹಾಕುವ ಕುರಿತು ಆ ದೇಶಗಳ ರಾಯಭಾರಿ ಕಚೇರಿಗಳು ಮಾತುಕತೆ ನಡೆಸಲು ಹಲವು ಬಾರಿ ಸಂಪರ್ಕಿಸಿವೆ’ ಎಂದು ಥಾಯ್ಲೆಂಡ್‌ ಸಂಸದ ಸೊಂಗ್‌ಕ್ಲೊಡ್ ತಿಪ್ಪರತ್ ಅವರು ಹೇಳಿರುವುದಾಗಿಥಾಯ್ ಪತ್ರಿಕೆ ಖಾಸೋಡ್ ಇಂಗ್ಲಿಷ್ ವರದಿ ಮಾಡಿದೆ. ಥಾಯ್ಲೆಂಡ್ ಮತ್ತು ಕ್ವಾಡ್‌ನ ಈ ನಡೆಯು ಚೀನಾವನ್ನು ಕಂಗೆಡಿಸಲಿದೆ.

ರೈಲು ಮಾರ್ಗ ನಿರ್ಮಿಸುವತ್ತ ಆಸಕ್ತಿ:ಥಾಯ್‌ ಖಾರಿ ಮತ್ತು ಅಂಡಮಾನ್‌ ಸಮುದ್ರ ಬಂದರುಗಳನ್ನು ಒಂದು ಗೂಡಿಸುವ ರೈಲು ಮಾರ್ಗದ ನಿರ್ಮಾಣಕ್ಕೂ ಥಾಯ್ಲೆಂಡ್‌ ಒಲವು ವ್ಯಕ್ತಪಡಿಸಿದೆ. ಈಗಾಗಲೇ ರಸ್ತೆಯನ್ನು ನಿರ್ಮಿಸಲಾಗಿದ್ದು, ಇದರ ಜೊತೆಯಲ್ಲಿಯೇ ರೈಲು ಮತ್ತು ಜಲ ಮಾರ್ಗವನ್ನು ಕಲ್ಪಿಸುವುದು ಅದರ ಯೋಜನೆಯಾಗಿದೆ.

‘ದುಬಾರಿ ಜಲಮಾರ್ಗ ನಿರ್ಮಾಣ ಯೋಜನೆಯನ್ನು ಮುಂದೂಡಲಾಗಿದೆ. ರೈಲು ಮಾರ್ಗ ಯೋಜನೆ ಅಧ್ಯಯನಕ್ಕಾಗಿ ₹ 39 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಸಾರಿಗೆ ಸಚಿವ ಸಕ್ಸಿಯಾಮ್‌ ಚಿದ್‌ಚೊಬ್‌ ಇತ್ತೀಚೆಗೆ ಹೇಳಿದ್ದರು. ಈ ರೈಲು ಮಾರ್ಗ ನಿರ್ಮಾಣದ ಒಟ್ಟು ವೆಚ್ಚ ಸುಮಾರು ₹ 2 ಲಕ್ಷ ಕೋಟಿಯಾಗಿದ್ದು, ಥಾಯ್ಲೆಂಡ್‌ ಈ ಯೋಜನೆ ಮೂಲಕ ಆಗ್ನೇಯ ಏಷ್ಯಾ ರಾಷ್ಟ್ರಗಳ ವ್ಯಾಪಾರ ವಹಿವಾಟಿನಲ್ಲಿ ಪ್ರಭಾವ ಬೀರಲಿದೆ.

‘400 ಮೀ ಅಗಲದ ಕಾಲುವೆ ನಿರ್ಮಾಣದಿಂದ ಪರಿಸರಕ್ಕೆಹೆಚ್ಚು ಹಾನಿಯಾಗಲಿದ್ದು, ಇದರ ಬದಲಾಗಿ ಸದ್ಯಕ್ಕೆ ರೈಲು ಮಾರ್ಗ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಇದು ಎರಡು ದಿನಗಳಷ್ಟು ಸಮುದ್ರ ಪ್ರಯಾಣವನ್ನು ತಪ್ಪಿಸಲಿದೆ. ಮುಂದೆ ಜಲ ಮಾರ್ಗದ ಕುರಿತು ಯೋಜಿಸಲಾಗುವುದು’ ಎಂದು ಸಚಿವ ಚಿದ್‌ಚೊಬ್‌ ಹೇಳಿದ್ದರು. ಈ ಹೇಳಿಕೆಯು 2015ರಲ್ಲಿ ಕಾಲುವೆ ನಿರ್ಮಾಣದ ಸಂಬಂಧ ಚೀನಾದೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಕಡಿದುಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಏನಿದು ‘ಕ್ವಾಡ್’‌ ಕೂಟ:ಹಿಂದೂ ಮಹಾಸಾಗರ–ಪೆಸಿಫಿಕ್‌ ಸಾಗರ ಪ್ರದೇಶದಲ್ಲಿ ಚೀನಾದ ವಿಸ್ತರಣಾವಾದಿ ನೀತಿಯನ್ನು ತಡೆಯುವುದಕ್ಕಾಗಿಯೇ 2017ರಲ್ಲಿ ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ನಡೆದ ಆಸಿಯಾನ್‌ ಸಮ್ಮೇಳನದಲ್ಲಿ ಕ್ವಾಡ್‌ ಕೂಟ ರಚನೆಯಾಯಿತು.ಇದರಲ್ಲಿ ಭಾರತ, ಅಮೆರಿಕ, ಆಸ್ಟ್ರೇಲಿಯಾ, ಜಪಾನ್‌ ಇವೆ.

ಕ್ವಾಡ್‌ ರಾಷ್ಟಗಳು ತಮ್ಮ ಸದಸ್ಯ ರಾಷ್ಟ್ರಗಳೊಂದಿಗೆ ಭೂ, ವಾಯು ಮತ್ತು ನೌಕಾ ಸೇನೆಗಳ ನೆಲೆಗಳನ್ನು ಪರಸ್ಪರ ಹಂಚಿಕೊಳ್ಳಬಹುದು. ಜೊತೆಗೆ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ತೋರಿರುವ ಆಕ್ರಮಣಕಾರಿ ನಡೆಯನ್ನು ಎದುರಿಸಲು ಆಸಿಯಾನ್‌ ರಾಷ್ಟ್ರಗಳಿಗೆ ರಕ್ಷಣಾ ಸಹಕಾರವನ್ನು ನೀಡುವುದಾಗಿದೆ.ಭಾರತದ ಮೂರು ಸಮುದ್ರದಲ್ಲಿ ಚೀನಾ ಹೆಣೆದಿರುವ ಮುತ್ತಿನ ಹಾರಕ್ಕೆ (ಸ್ಟ್ರಿಂಗ್ ಆಫ್‌ ಪರ್ಲ್ಸ್‌) ಪ್ರತಿಯಾಗಿ ಕ್ವಾಡ್‌ ಕೂಟ ಚೀನಾಗೆ ವಜ್ರರೇಖೆಯನ್ನು ಎಳೆದಿದೆ. ಭವಿಷ್ಯದಲ್ಲಿ ಇಂಡೊ–ಫೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಭಾವವನ್ನು ತಪ್ಪಿಸುವುದು ಇದರ ಉದ್ದೇಶ.

1992ರಲ್ಲಿ ಮಲಬಾರ್‌ ನೌಕಾ ಅಭ್ಯಾಸವನ್ನು ನೆನೆಯದೇ ‘ಕ್ವಾಡ್‌’ ಗುಂಪನ್ನು ಊಹಿಸಲಾಗದು. ಆಗ ಮಲಬಾರ್‌ ಕರಾವಳಿ ತೀರದಲ್ಲಿ ಅಮೆರಿಕ ಮತ್ತು ಭಾರತ ಜಂಟಿ ಸಮರಾಭ್ಯಾಸ ನಡೆಸಿದ್ದವು. ಇದು ಪ್ರತಿ ವರ್ಷವೂ ನಡೆಯುತ್ತಿದೆ.2007ರಲ್ಲಿ ಆಸ್ಟ್ರೇಲಿಯಾ, ಸಿಂಗಪುರ, ಜಪಾನ್‌ಗಳು ಮಲಬಾರ್‌ ಕವಾಯತಿನಲ್ಲಿ ಭಾಗವಹಿಸಿದ್ದವು. ಆದರೆ, ಮರುವರ್ಷವೇ ಆಸ್ಟ್ರೇಲಿಯಾವು ಕವಾಯತಿನಿಂದ ಹಿಂದೆ ಸರಿಯಿತು. ಇದಕ್ಕೆ ಚೀನಾ ನೀಡಿದ ಎಚ್ಚರಿಕೆ ಕಾರಣವಾಗಿತ್ತು. 2015ರಲ್ಲಿ ಜಪಾನ್‌ ಈ ಕವಾಯತಿನ ಶಾಶ್ವತ ಸದಸ್ಯತ್ವ ಪಡೆದಿದೆ. ಇದರ ಮುಂದುವರಿದ ಭಾಗವಾಗಿ ‘ಕ್ವಾಡ್‌’ ರಚನೆಯಾಯಿತು.

ಕ್ವಾಡ್‌ ಕೂಟದ ವಿಷಯಗಳು ಮತ್ತು ಮಾತುಕತೆಗಳು ಮುನ್ನೆಲೆಗೆ ಬಂದಾಗಲೆಲ್ಲ ಭಾರತ– ಚೀನಾ ಗಡಿಯಲ್ಲಿ ಉದ್ವಿಗ್ನತೆ ನೆಲೆಸುತ್ತದೆ. 2017ರಲ್ಲಿ ಕ್ವಾಡ್‌ ರಚನೆಯಾದ ಕೆಲವೇ ತಿಂಗಳುಗಳಲ್ಲಿ ಸಿಕ್ಕಿಂನ ದೋಕಲಾದಲ್ಲಿಚೀನಾ– ಭಾರತ ಸೇನೆಗಳು ಎದುರಾಗಿದ್ದವು. ಆಗ ಮಾತುಕತೆ ಮೂಲಕ ವಿವಾದವನ್ನು ಶಮನಗೊಳಿಸುವ ಯತ್ನ ನಡೆಯಿತು. 2018ರ ವುಹಾನ್‌ ಶೃಂಗಸಭೆಯ ನಂತರ ಚೀನಾವನ್ನು ಅಸಮಾಧಾನಗೊಳಿಸುವಂತಹ ಯಾವುದೇ ಕೆಲಸವನ್ನು ಭಾರತ ಸಹ ನಡೆಸಿರಲಿಲ್ಲ. ಆದರೆ,ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಚೀನಾ– ಭಾರತದ ಸಂಬಂಧದಲ್ಲಿ ಭಾರಿ ಬದಲಾವಣೆಯಾಗಿದೆ. ಪೂರ್ವ ಲಡಾಖ್‌ನಲ್ಲಿ ಬಿಕ್ಕಟ್ಟು ತಲೆದೂರಿದೆ. ಜೂನ್‌ನಿಂದ ಗಾಲ್ವಾನ್ ಕಣಿವೆ ಮತ್ತು ಪಾಂಗಾಂಗ್‌ ಸರೋವರದಲ್ಲಿ ಎರಡೂ ರಾಷ್ಟ್ರಗಳ ಸೈನಿಕರ ನಡುವೆ ಘರ್ಷಣೆ ನಡೆದಿದೆ.ಪ್ರತಿಯಾಗಿ ಭಾರತವೂ ಚೀನಾದ ಆ್ಯಪ್‌ಗಳನ್ನು ನಿಷೇಧಿಸಿದೆ. ಜೊತೆಯಲ್ಲಿಯೇ ಉದ್ವಿಗ್ನತೆಯ ಶಮನಕ್ಕೆ ಹಲವು ಸುತ್ತಿನ ಮಾತುಕತೆಗಳು ನಡೆಯುತ್ತಿವೆ.

ಗಾಲ್ವಾನ್‌ ಘಟನೆ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ತೈವಾನ್‌ನೊಂದಿಗಿನ ಸಂಘರ್ಷವೂ ಕ್ವಾಡ್‌ ಕೂಟಕ್ಕೆ ನೀಡಿದ ಎಚ್ಚರಿಕೆ ಸಂದೇಶ ಎಂದುಚೀನಾ ಪರಿಗಣಿಸಿದಂತಿದೆ. ಆದರೆ,ಚೀನಾದ ಆಕ್ರಮಣಶೀಲತೆಗೆ ಇನ್ನಷ್ಟು ತಡೆಯೊಡ್ಡಲು ಕ್ವಾಡ್‌ ಕೂಟ ಯೋಜನೆಗಳನ್ನು ಹಾಕಿಕೊಂಡಿದೆ ಎಂಬುದಕ್ಕೆ ಥಾಯ್ಲೆಂಡ್‌ನ ಕ್ರಾ ಕಾಲುವೆ ಯೋಜನೆ ಉದಾಹರಣೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.