ವಿಲ್ಮಿಂಗ್ಟನ್ (ಅಮೆರಿಕ): ಅಮೆರಿಕದಲ್ಲಿ ನಡೆಯುತ್ತಿರುವ ಕ್ವಾಡ್ ಶೃಂಗಸಭೆಯ ವೇಳೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಜಪಾನ್‌ನ ಪ್ರಧಾನಿ ಫುಮಿಯೊ ಕಿಶಿಡಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಈ ಸಂಬಂಧ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪ್ರಧಾನಿ ಮೋದಿ ಮಾಹಿತಿ ಹಂಚಿಕೊಂಡಿದ್ದಾರೆ.
'ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ವಿಸ್ತೃತ ಚರ್ಚೆ ನಡೆಸಲಾಯಿತು. ವ್ಯಾಪಾರ, ಭದ್ರತೆ, ಬಾಹ್ಯಾಕಾಶ ಮತ್ತು ಸಂಸ್ಕೃತಿಯಂತಹ ಕ್ಷೇತ್ರಗಳಲ್ಲಿ ಇನ್ನಷ್ಟು ಗತಿ ಪಡೆಯಲು ಪರಿಶ್ರಮಿಸುತ್ತೇವೆ. ಆಸ್ಟ್ರೇಲಿಯಾದೊಂದಿಗಿನ ಬಾಂಧವ್ಯವನ್ನು ಭಾರತ ಸದಾ ಗೌರವಿಸುತ್ತದೆ' ಎಂದು ಅವರು ಹೇಳಿದ್ದಾರೆ.
ಮಗದೊಂದು ಪೋಸ್ಟ್‌ನಲ್ಲಿ ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.
'ಮೂಲಸೌಕರ್ಯ, ಸೆಮಿಕಂಡಕ್ಟರ್, ರಕ್ಷಣಾ ವಲಯ, ಗ್ರೀನ್ ಎನರ್ಜಿ ಮತ್ತು ಇತರೆ ವಿಷಯಗಳಲ್ಲಿ ಉಭಯ ದೇಶಗಳ ಸಹಕಾರದ ಕುರಿತು ಚರ್ಚಿಸಲಾಯಿತು. ಭಾರತ-ಜಪಾನ್ ನಡುವಣ ಗಟ್ಟಿ ಬಾಂಧವ್ಯವು ಜಾಗತಿಕ ಏಳಿಗೆಗೆ ಪೂರಕವಾಗಿದೆ' ಎಂದು ಅವರು ಉಲ್ಲೇಖಿಸಿದ್ದಾರೆ.
ಈ ಮೊದಲು ಕ್ವಾಡ್ ಶೃಂಗದಲ್ಲಿ ಭಾಗಿಯಾಗಲು ಶನಿವಾರ ಅಮೆರಿಕಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಡೆಲವೇರ್‌ನ ವಿಲ್ಮಿಂಗ್ಟನ್‌ನಲ್ಲಿರುವ ಬೈಡನ್ ಅವರ ನಿವಾಸದಲ್ಲಿ ಉಭಯ ನಾಯಕರು ಭಾರತ–ಅಮೆರಿಕ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಂಬಂಧ ಚರ್ಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.