ವಾಷಿಂಗ್ಟನ್: ‘ಷಿಕಾಗೋದಿಂದ ರಾಷ್ಟ್ರದಾದ್ಯಂತ ಸಂಚರಿಸುವ ರಾಮ ರಥಯಾತ್ರೆಯು ಮಾರ್ಚ್ 25ರಂದು ಆರಂಭಗೊಳ್ಳಲಿದೆ’ ಎಂದು ಅಮೆರಿಕದ ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿಎ) ಪ್ರಧಾನ ಕಾರ್ಯದರ್ಶಿ ಅಮಿತಾಬ್ ಮಿತ್ತಲ್ ತಿಳಿಸಿದ್ದಾರೆ.
‘ಅಮೆರಿಕದ 48 ರಾಜ್ಯಗಳ 851 ದೇಗುಲಗಳನ್ನು ಈ ರಥಯಾತ್ರೆ ಹಾದು ಹೋಗಲಿದ್ದು, 60 ದಿನಗಳಲ್ಲಿ 8 ಸಾವಿರ ಮೈಲುಗಳಿಗಿಂತ ಹೆಚ್ಚಿನ ದೂರ ಸಾಗಲಿದೆ’ ಎಂದು ಅವರು ಗುರುವಾರ ಹೇಳಿದ್ದಾರೆ.
‘ಭಗವಾನ್ ಶ್ರೀರಾಮ, ಸೀತಾ ದೇವಿ, ಲಕ್ಷ್ಮಣ, ಹನುಮಂತನ ವಿಗ್ರಹಗಳ ಜೊತೆಗೆ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ವಿಶೇಷ ಪ್ರಸಾದ, ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಪೂಜಿಸಿದ ಕಳಸದ ಅಕ್ಷತೆಯು ಯಾತ್ರೆಯೊಟ್ಟಿಗಿರಲಿದೆ’ ಎಂದು ಮಿತ್ತಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
‘ರಾಮಮಂದಿರದ ಉದ್ಘಾಟನೆಯು ವಿಶ್ವದಾದ್ಯಂತ ಇರುವ 1.5 ಶತಕೋಟಿ ಹಿಂದೂಗಳ ಹೃದಯದಲ್ಲಿ ಹೊಸ ಶಕ್ತಿಯನ್ನು ತುಂಬಿದೆ. ನಂಬಿಕೆಯನ್ನು ಮತ್ತಷ್ಟು ಬಲಪಡಿಸಿ, ಸಂತಸವನ್ನು ಮೂಡಿಸಿದೆ’ ಎಂದಿರುವ ಅವರು, ‘ರಥಯಾತ್ರೆಯು ಏ.23ರ ಹನುಮ ಜಯಂತಿಯಂದು ಇಲಿನಾಯ್ಸ್‌ನ ಶುಗರ್ ಗ್ರೋವ್‌ನಲ್ಲಿ ಸಮಾರೋಪಗೊಳ್ಳಲಿದೆ’ ಎಂದಿದ್ದಾರೆ.
‘ಶಿಕ್ಷಣ, ಸಬಲೀಕರಣ ಹಾಗೂ ಹಿಂದೂ ಧರ್ಮದ ಜಾಗೃತಿಗಾಗಿ ಕೆನಡಾದ ವಿಶ್ವ ಹಿಂದೂ ಪರಿಷತ್ ಸಹ ರಾಮ ರಥಯಾತ್ರೆಯನ್ನು ಪ್ರತ್ಯೇಕವಾಗಿ ಆಯೋಜಿಸಲಿದೆ. ಇದು 150ಕ್ಕೂ ಹೆಚ್ಚು ದೇಗುಲಗಳ ಮಾರ್ಗದಲ್ಲಿ ಸಂಚರಿಸಲಿದೆ’ ಎಂದು ಅಮೆರಿಕದ ಎಲ್ಲ ದೇಗುಲಗಳ ಅತ್ಯುನ್ನತ ಸಂಸ್ಥೆಯಾದ ಹಿಂದೂ ಮಂದಿರ ಸಬಲೀಕರಣ ಮಂಡಳಿಯ (ಎಚ್‌ಎಂಇಸಿ) ತೇಜಲ್ ಶಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.