ADVERTISEMENT

ದಕ್ಷಿಣ ಆಫ್ರಿಕಾ | ಸಿಗದ ಬಹುಮತ; ವಿಪಕ್ಷದೊಂದಿಗೆ ಕೈಜೋಡಿಸಿ ಅಧ್ಯಕ್ಷರಾದ ರಾಮಪೋಸಾ

ಪಿಟಿಐ
Published 19 ಜೂನ್ 2024, 13:12 IST
Last Updated 19 ಜೂನ್ 2024, 13:12 IST
<div class="paragraphs"><p>ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ಸಿರಿಲ್ ರಾಮಪೋಸಾ ಬುಧವಾರ ಪ್ರಮಾಣವಚನ ಸ್ವೀಕರಿಸಿದರು</p></div>

ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ಸಿರಿಲ್ ರಾಮಪೋಸಾ ಬುಧವಾರ ಪ್ರಮಾಣವಚನ ಸ್ವೀಕರಿಸಿದರು

   

ರಾಯಿಟರ್ಸ್ ಚಿತ್ರ

ಜೊಹಾನ್ಸ್‌ಬರ್ಗ್‌: ಅಗತ್ಯವಿರುವ ಬಹುಮತ ಸಿಗದ ಕಾರಣ, ವಿರೋಧ ಪಕ್ಷದೊಂದಿಗೆ ಕೈಜೋಡಿಸಿದ ಸಿರಿಲ್ ರಾಮಪೋಸಾ ಅವರು 2ನೇ ಬಾರಿಗೆ ದಕ್ಷಿಣಾ ಆಫ್ರಿಕಾದ ಅಧ್ಯಕ್ಷರಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದರು. 

ADVERTISEMENT

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸಂಸತ್ತಿನಲ್ಲಿ ಅಗತ್ಯವಿರುವ ಬಹುಮತ ಪಡೆಯುವಲ್ಲಿ ಆಫ್ರಿಕನ್ ರಾಷ್ಟ್ರೀಯ ಕಾಂಗ್ರೆಸ್‌ ವಿಫಲವಾಯಿತು. ಕಳೆದ 30 ವರ್ಷಗಳಲ್ಲಿ ದಕ್ಷಿಣಾ ಆಫ್ರಿಕಾದಲ್ಲಿ ನಡೆದ ಚುನಾವಣೆಯಲ್ಲಿ ರಾಮಾಫೋಸಾ ಅವರ ಎಎನ್‌ಸಿ ಪಕ್ಷವು ಅತ್ಯಂತ ಕನಿಷ್ಠ ಸ್ಥಾನಗಳನ್ನು ಪಡೆಯಿತು. ಎಎನ್‌ಸಿ ಪಕ್ಷವು ಶೇ 40ರಷ್ಟು ಮತಗಳನ್ನು ಪಡೆದರೆ, ಡೆಮಾಕ್ರೆಟಿಕ್ ಒಕ್ಕೂಟ ಶೇ 22ರಷ್ಟು ಮತಗಳನ್ನು ಪಡೆದಿದೆ. ಇದರಿಂದಾಗಿ ವಿರೋಧ ಪಕ್ಷದ ನೆರವಿನೊಂದಿಗೆ ಮತ್ತೊಮ್ಮೆ ಅಧ್ಯಕ್ಷರಾಗಿ ರಾಮಪೋಸಾ ಅಧಿಕಾರ ವಹಿಸಿಕೊಂಡಿದ್ದಾರೆ.

‘ದಕ್ಷಿಣ ಆಫ್ರಿಕಾದ ಜನತೆಯ ನಂಬಿಕೆಗೆ ಸದಾ ಬದ್ಧನಾಗಿರುತ್ತೇನೆ ಎಂದು ವಾಗ್ದಾನ ಮಾಡುತ್ತೇನೆ. ನೆಲದ ಕಾನೂನು ಹಾಗೂ ಸಂವಿಧಾನವನ್ನು ಎತ್ತಿಹಿಡಿಯುತ್ತೇನೆ’ ಎಂದು 71 ವರ್ಷದ ರಾಮಪೋಸಾ ಅವರು ತಮ್ಮ ಪ್ರಮಾಣವಚನದಲ್ಲಿ ಹೇಳಿದ್ದಾರೆ.

‘ಈ ಸರ್ಕಾರ ದೇಶದ ಒಗ್ಗಟ್ಟಿನ ಪ್ರತೀಕ. ಹೀಗಾಗಿ ದೇಶದ ನಾಗರಿಕರು ಪರಸ್ಪರ ಘರ್ಷಣೆಯಲ್ಲಿ ತೊಡಗುವ ಯಾವುದೇ ಪ್ರಯತ್ನ ನಡೆಸಬಾರದು. ನಮ್ಮನ್ನು ವಿಭಜಿಸುವ ಯಾವುದೇ ಪ್ರಯತ್ನವನ್ನು ನಾವು ವಿಫಲಗೊಳಿಸಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.

‘ದೇಶದ ಪ್ರಜಾಪ್ರಭುತ್ವವು ಜನರ ಹೃದಯದಲ್ಲಿರುತ್ತದೆ. ಅದು ಎಂದಿಗೂ ನಶಿಸದು. ಇದನ್ನು ವಿಫಲಗೊಳಿಸುವ ಯಾವುದೇ ಪ್ರಯತ್ನ ಕೈಗೂಡದು’ ಎಂದು ಮಾಜಿ ಅಧ್ಯಕ್ಷ ಜೇಕಬ್ ಝುಮಾ ಅವರ ಹೆಸರು ತೆಗೆದುಕೊಳ್ಳದೆ ಹೇಳಿದರು.

1994ರಿಂದ ಏಕಾಧಿಪತ್ಯ ಸ್ಥಾಪಿಸಿದ್ದ ಎಎನ್‌ಸಿಗೆ ಈ ಬಾರಿ ಸಂಕಷ್ಟ ಎದುರಾಗಿದ್ದು, ದಕ್ಷಿಣ ಆಫ್ರಿಕಾ ರಾಜಕೀಯ ಕ್ಷೇತ್ರದಲ್ಲಿ ಇದೊಂದು ಐತಿಹಾಸಿಕ ಬೆಳವಣಿಗೆಯಾಗಿದೆ. ಬಿಳಿಯರೇ ಸೇರಿ ಸ್ಥಾಪಿಸಿದ್ದ ಡೆಮಾಕ್ರೆಟಿಕ್ ಒಕ್ಕೂಟದ ಜತೆಗೂಡಿದೆ.

‘ದೇಶದ ಒಂಬತ್ತು ಪ್ರಾಂತ್ಯಗಳನ್ನು ಒಳಗೊಂಡ ಈ ನೆಲದಲ್ಲಿ ಜನಿಸಿದವರು ಇಲ್ಲಿ ಸೇರಿದ್ದಾರೆ. ಹಿಂದೆ ನಮ್ಮ ನಡುವೆ ಸೃಷ್ಟಿಯಾಗಿದ್ದ ಕಂದಕವನ್ನು ಅಳಿಸಿಹಾಕಲು ಬದ್ಧವಾಗಿದ್ದೇವೆ. ಮುಂದೆಯೂ ಯಾವುದೇ ರೀತಿಯ ಅಸಮಾನತೆಯನ್ನು ತೊಡೆದುಹಾಕುವ ಗುರಿ ಹೊಂದಿದ್ದೇವೆ’ ಎಂದು ರಾಮಪೋಸಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.