ADVERTISEMENT

ಶ್ರೀಲಂಕಾದ ನೂತನ ಪ್ರಧಾನಿಯಾಗಿ ರಾನಿಲ್ ವಿಕ್ರಮಸಿಂಘೆ ಪ್ರಮಾಣ ವಚನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮೇ 2022, 2:29 IST
Last Updated 13 ಮೇ 2022, 2:29 IST
ರಾನಿಲ್ ವಿಕ್ರಮಸಿಂಘೆ
ರಾನಿಲ್ ವಿಕ್ರಮಸಿಂಘೆ   

ಕೊಲಂಬೊ: ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಾಲ್ಕೇ ದಿನಗಳಲ್ಲಿ, ವಿರೋಧ ಪಕ್ಷದ ನಾಯಕ ರಾನಿಲ್ ವಿಕ್ರಮಸಿಂಘೆ ಅವರು ಗುರುವಾರ ಸಂಜೆ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಬುಧವಾರ ಮತ್ತು ಗುರುವಾರ ಅಧ್ಯಕ್ಷ ಗೊಟಬಯ ರಾಜಪಕ್ಸ ಹಾಗೂ ರಾನಿಲ್ ವಿಕ್ರಮಸಿಂಘೆ ಮಧ್ಯೆ ನಿರಂತರ ಮಾತುಕತೆ ಬಳಿಕ, ಗುರುವಾರ ಸಂಜೆ ಯುನೈಟೆಡ್ ನ್ಯಾಷನಲ್ ಪಕ್ಷದ ನಾಯಕ ರನಿಲ್ ವಿಕ್ರಮಸಿಂಘೆ ಅವರನ್ನು ಗೊಟಬಯ ಅವರು ಪ್ರಧಾನಿಯನ್ನಾಗಿ ನೇಮಕ ಮಾಡಿದ್ದಾರೆ.

ಆಡಳಿತಾರೂಢ ಶ್ರೀಲಂಕಾ ಪೊಡುಜನ ಪೆರಮುನ (ಎಸ್‌ಎಲ್‌ಪಿಪಿ) ಹಾಗೂ ವಿರೋಧ ಪಕ್ಷದ ಎಸ್‌ಜೆಬಿಯ ಕೆಲವು ನಾಯಕರು ಸೇರಿದಂತೆ ಇತರ ರಾಜಕೀಯ ನಾಯಕರು ವಿಕ್ರಮಸಿಂಘೆ ಅವರಿಗೆ ಬೆಂಬಲ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಈ ಹಿಂದೆ ಪ್ರಧಾನಿಯಾಗಿದ್ದ ವಿಕ್ರಮಸಿಂಘೆ ಅವರನ್ನು 2018ರಲ್ಲಿ ಆಗಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ್ದರು. ಆದರೆ, ಇದಾಗಿ 2 ತಿಂಗಳ ಬಳಿಕ ವಿಕ್ರಮಸಿಂಘೆ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ನೇಮಕ ಮಾಡಲಾಗಿತ್ತು. ಶ್ರೀಲಂಕಾದ 225 ಸದಸ್ಯ ಬಲದ ಸಂಸತ್ತಿನಲ್ಲಿ ವಿಕ್ರಮಸಿಂಘೆ ಪಕ್ಷವು ಒಬ್ಬರು ಸಂಸದರನ್ನು ಮಾತ್ರ ಹೊಂದಿದೆ ಎಂಬುದು ವಿಶೇಷ.

ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಕಳೆದ ಕೆಲ ದಿನಗಳಿಂದ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಇತ್ತೀಚಿನ ಹಿಂಸಾಚಾರದಲ್ಲಿ 8 ಮಂದಿ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ, ಮಹಿಂದಾ ರಾಜಪಕ್ಸ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ವಿಕ್ರಮಸಿಂಘೆ ಅವರಿಗೆ ಅಧ್ಯಕ್ಷ ಗೊಟಬಯ ಅವರು ಪ್ರಮಾಣ ವಚನ ಬೋಧಿಸಿದರು. ಅವರು 6ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಂತಾಗಿದೆ. ಆದರೆ, ಈವರೆಗೂಒಂದು ಸಲವೂ ಪ್ರಧಾನಿಯಾಗಿ ಅಧಿಕಾರವಧಿ ಪೂರ್ಣಗೊಳಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.