ADVERTISEMENT

ಶ್ರೀಲಂಕಾದ ಅಧ್ಯಕ್ಷರಾಗಿ ರಾನಿಲ್‌ ವಿಕ್ರಮಸಿಂಘೆ ಪ್ರಮಾಣ ವಚನ ಸ್ವೀಕಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜುಲೈ 2022, 5:38 IST
Last Updated 21 ಜುಲೈ 2022, 5:38 IST
ಶ್ರೀಲಂಕಾದ ಅಧ್ಯಕ್ಷರಾಗಿ ರಾನಿಲ್‌ ವಿಕ್ರಮಸಿಂಘೆ ಅವರು ಪ್ರಮಾಣ ವಚನ ಸ್ವೀಕರಿಸಿದರು. 
ಶ್ರೀಲಂಕಾದ ಅಧ್ಯಕ್ಷರಾಗಿ ರಾನಿಲ್‌ ವಿಕ್ರಮಸಿಂಘೆ ಅವರು ಪ್ರಮಾಣ ವಚನ ಸ್ವೀಕರಿಸಿದರು.    

ಕೊಲಂಬೊ: ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್‌ ವಿಕ್ರಮಸಿಂಘೆ ಅವರು ಇಂದು (ಗುರುವಾರ)ಪ್ರಮಾಣ ವಚನ ಸ್ವೀಕರಿಸಿದರು.

ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದಿದ್ದ ಚುನಾವಣೆಯಲ್ಲಿ ರಾನಿಲ್‌ ವಿಕ್ರಮಸಿಂಘೆ ಗೆಲುವು ಸಾಧಿಸಿದ್ದರು.

ಸಿಂಗಾಪುರಕ್ಕೆ ಪಲಾಯನ ಮಾಡಿರುವ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ರಾಜೀನಾಮೆಯಿಂದ ಶ್ರೀಲಂಕಾದ ಅಧ್ಯಕ್ಷ ಸ್ಥಾನ ತೆರವಾಗಿತ್ತು.

225 ಸದಸ್ಯ ಬಲದ ಸಂಸತ್ತಿನಲ್ಲಿ ರಾನಿಲ್ ಅವರು 134, ಸಮೀಪದ ಪ್ರತಿಸ್ಪರ್ಧಿ ಡುಲ್ಲಾಸ್‌ ಅಲಹಪ್ಪೆರುಮ ಅವರು 82 ಮತ ಪಡೆದಿದ್ದಾರೆ.

ADVERTISEMENT

ಕಣದಲ್ಲಿದ್ದ ಮತ್ತೊಬ್ಬ ಅಭ್ಯರ್ಥಿ ಜನತಾ ವಿಮುಕ್ತಿ ಪೆರಮುನ ನಾಯಕ ಅನುರ ಕುಮಾರ ಡಿಸ್ಸಾನಾಯಕೆ 3 ಮತಗಳನ್ನಷ್ಟೇ ಪಡೆದಿದ್ದರು. ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯ ಫಲಿತಾಂಶವನ್ನು ಸ್ಪೀಕರ್ ಮಹಿಂದಾ ಯಪ ಅಬೆವರ್ದೆನಅವರು ಪ್ರಕಟಿಸಿದ್ದಾರೆ.

ಫಲಿತಾಂಶ ಪ್ರಕಟವಾದ ಬಳಿಕ ಮಾತನಾಡಿದ ರಾನಿಲ್‌, ‘ನಾವಿನ್ನು ಭಿನ್ನಾಭಿಪ್ರಾಯ ಮರೆಯಬೇಕು. ದೇಶ ಸಂಕಷ್ಟದಲ್ಲಿದೆ. ಯುವಜನರು ಬದಲಾವಣೆ ನಿರೀಕ್ಷೆಯಲ್ಲಿದ್ದಾರೆ. ಅಭಿವೃದ್ಧಿ ಕುರಿತು ಎಲ್ಲರ ಜೊತೆಗೆ ಚರ್ಚಿಸಲು ನಾನು ಮುಕ್ತನಿದ್ದೇನೆ’ ಎಂದು ಹೇಳಿದ್ದರು.

ದೇಶದ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಸಂಸತ್ತಿನ ಸದಸ್ಯರು ಮತದಾನದ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. 73 ವರ್ಷದ ರಾನಿಲ್‌ ಅವರು ಐದು ದಶಕಗಳ ಆಡಳಿತ ಅನುಭವ ಹೊಂದಿದ್ದು, ಆರು ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ದೇಶದಲ್ಲಿ ಸರ್ಕಾರ ವಿರುದ್ಧದ ಜನಾಕ್ರೋಶಕ್ಕೆ ಮಣಿದು ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆ ನೀಡಿದ್ದರು. ತೆರವಾದ ಸ್ಥಾನಕ್ಕೆ ಉಳಿದ ಅವಧಿಗೆ ಚುನಾವಣೆ ನಡೆದಿತ್ತು.ಅಧ್ಯಕ್ಷರಾಗಿ ರಾನಿಲ್‌ ಅವರ ಅಧಿಕಾರವಧಿ ನವೆಂಬರ್‌ 2024ರಲ್ಲಿ ಅಂತ್ಯವಾಗಲಿದೆ.

ರಾನಿಲ್‌ ವಿಕ್ರಮಸಿಂಘೆ ಈ ವರ್ಷದ ಮೇ ತಿಂಗಳಲ್ಲಿ ಪ್ರಧಾನಿಯಾಗಿ ನೇಮಕಗೊಂಡಿದ್ದರು. ಬಳಿಕ ಹಂಗಾಮಿ ಅಧ್ಯಕ್ಷರಾಗಿ ಜು.13ರಂದು ಅಧಿಕಾರ ಸ್ವೀಕರಿಸಿದ್ದರು. ಆಗಸ್ಟ್ 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಇವರ ನೇತೃತ್ವದ ಸಂಯುಕ್ತ ರಾಷ್ಟ್ರೀಯ ಪಕ್ಷ(ಯುಎನ್‌ಪಿ) ಒಂದೂಸ್ಥಾನ ಗೆಲ್ಲದೇ ಹೀನಾಯ ಸೋಲುಕಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.