ವಾಷಿಂಗ್ಟನ್: ‘ಅಮೆರಿಕದಲ್ಲಿ ನಡೆದಿದ್ದ, ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂ ಹತ್ಯೆಯ ಸಂಚಿನಲ್ಲಿ ‘ರಾ’ ಅಧಿಕಾರಿ ವಿಕ್ರಂ ಯಾದವ್ ಅವರು ಭಾಗಿಯಾಗಿದ್ದರು’ ಎಂದು ಸ್ಥಳೀಯ ‘ವಾಷಿಂಗ್ಟನ್ ಪೋಸ್ಟ್’ ದೈನಿಕ ವರದಿ ಮಾಡಿದೆ.
ವಿಕ್ರಂ ಯಾದವ್ ಅವರು ಸಂಚಿನ ಭಾಗವಾಗಲು ಆಗ ಭಾರತೀಯ ಗುಪ್ತದಳ ಸಂಸ್ಥೆ ‘ರಾ’ ಮುಖ್ಯಸ್ಥರಾಗಿದ್ದ ಸಾಮಂತ್ ಗೋಯಲ್ ಅವರ ಅನುಮೋದನೆ ಸಿಕ್ಕಿತ್ತು ಎಂದು ಕೂಡ ಈ ವರದಿಯು ಉಲ್ಲೇಖಿಸಿದೆ.
ಖಾಲಿಸ್ತಾನ ಪರ ಆಂದೋಲನದ ಪ್ರಮುಖ ನಾಯಕನಾದ ಪನ್ನೂ, ‘ಸಿಖ್ಸ್ ಫಾರ್ ಜಸ್ಟೀಸ್’ (ಎಸ್‌ಎಫ್‌ಜೆ) ಸಂಘಟನೆಯ ಕಾನೂನು ಸಲಹೆಗಾರ ಮತ್ತು ವಕ್ತಾರನೂ ಆಗಿದ್ದನು.
ಭಾರತ ಸರ್ಕಾರವು ಪನ್ನೂ ಒಬ್ಬ ಭಯೋತ್ಪಾದಕ ಎಂದು ಘೋಷಿಸಿದೆ.
‘ವಾಷಿಂಗ್ಟನ್ ಪೋಸ್ಟ್’ ದೈನಿಕದಲ್ಲಿ ಪ್ರಕಟವಾದ ವಿಶೇಷ ತನಿಖಾ ವರದಿಯು, ‘ದಕ್ಷಿಣ ಅಮೆರಿಕದಲ್ಲಿ ನಡೆದಿದ್ದ ಹತ್ಯೆ ಸಂಚಿನ ವಿಷಯದಲ್ಲಿ ಭಾರತದ ಧೋರಣೆಯು ಅಮೆರಿಕದ ಭದ್ರತಾ ಅಧಿಕಾರಿಗಳಲ್ಲಿ ದಿಗ್ಭ್ರಮೆ ಮೂಡಿಸಿತ್ತು’ ಎಂದೂ ಉಲ್ಲೇಖಿಸಿದೆ.
ಯಾದವ್ ಅವರ ಗುರುತು ಮತ್ತು ಅವರೂ ಸಂಚಿನಲ್ಲಿ ಭಾಗಿಯಾಗಿದ್ದರು ಎಂಬುದು ಈ ಮೊದಲು ವರದಿಯಾಗಿರಲಿಲ್ಲ. ಈಗ ಬಯಲಾಗಿರುವ ಈ ಅಂಶ ಹತ್ಯೆಗೆ ಭಾರತ ಗುಪ್ತದಳ ಸಂಸ್ಥೆಯ ನಿರ್ದೇಶನವಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ವರದಿ ಪ್ರತಿಪಾದಿಸಿದೆ.
‘ಸಿಐಎ, ಎಫ್‌ಬಿಐ ಮತ್ತುಇತರೆ ಸಂಸ್ಥೆಗಳ ತನಿಖೆ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ವಲಯದ ಸಂಪರ್ಕ ಹೊಂದಿರುವ ‘ರಾ’ ಸಂಸ್ಥೆಯ ಉನ್ನತ ಅಧಿಕಾರಿಗಳ ಪಾತ್ರ ಕೂಡ ಹತ್ಯೆ ಸಂಚಿನಲ್ಲಿ ಇರುವುದು ದೃಢಪಟ್ಟಿದೆ’ ಎಂದು ಭದ್ರತಾ ಅಧಿಕಾರಿಯೊಬ್ಬರ ಹೇಳಿಕೆಯನ್ನು ವರದಿ ಉಲ್ಲೇಖಿಸಿದೆ.
‘ವಾಷಿಂಗ್ಟನ್ ಪೋಸ್ಟ್’ನ ಮಾಲೀಕ ಜೆಫ್ ಬೆಜೋಸ್ ಅವರು, ಹೆಚ್ಚುತ್ತಿರುವ ಗಡಿಯಾಚೆಗಿನ ದಮನಕಾರಿ ನಡೆ ಕುರಿತು ದೈನಿಕವು ತನಿಖಾ ವರದಿ ಮಾಡುತ್ತಿದೆ ಎಂದು ಹೇಳಿದ್ದಾರೆ.
ಈ ವಿಶೇಷ ವರದಿಗಾಗಿ ಪತ್ರಿಕೆಯ ಪ್ರತಿನಿಧಿಗಳು ದೆಹಲಿ, ವಾಷಿಂಗ್ಟನ್, ಒಟ್ಟಾವಾ, ಲಂಡನ್, ಪ್ರಾಗ್, ಬರ್ಲಿನ್‌ನಲ್ಲಿ 12ಕ್ಕೂ ಹೆಚ್ಚು ಅಧಿಕಾರಿಗಳು, ಪರಿಣತರು, ಪ್ರಮುಖರನ್ನು ಸಂದರ್ಶಿಸಿದ್ದಾರೆ ಎಂದು ತಿಳಿಸಿದ್ದಾರೆ.
ಭಾರತದ ಪ್ರಧಾನಿಯವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಭಾಲ್ ಅವರಿಗೂ ಬಹುಶಃ, ಸಿಖ್ ಕಾರ್ಯಕರ್ತನ ಕೊಲ್ಲುವ ‘ರಾ’ ಸಂಚಿನ ಅರಿವಿತ್ತು ಎಂದು ವರದಿಯು ಉಲ್ಲೇಖಿಸಿದೆ.
ಜೂನ್ 18ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಖಾಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ನಡೆದಿತ್ತು. ಅದೇ ಅವಧಿಯಲ್ಲಿ ಪನ್ನೂ ಹತ್ಯೆಗೂ ಸಂಚು ನಡೆದಿದ್ದು, ಆ ಕಾರ್ಯಾಚರಣೆಗೂ ವಿಕ್ರಂ ಯಾದವ್ ಅವರಿಗೂ ಸಂಪರ್ಕವಿದೆ ಎಂದು ವರದಿ ಹೇಳಿದೆ.
ಈ ಪ್ರಕರಣದ ಕುರಿತು ಅಮೆರಿಕ ಜತೆಗೆ ಮಾಹಿತಿಯನ್ನು ಕಲೆಹಾಕಿ, ಸಂಚಿನಲ್ಲಿ ಶಾಮೀಲಾಗಿರುವವರ ಪತ್ತೆಹಚ್ಚಲು ಉನ್ನತ ಮಟ್ಟದ ಸಮಿತಿ ರಚಿಸಿರುವುದಾಗಿ ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಕಳೆದ ವಾರ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.