ಮಾಲೆ: ‘ಮಾಲ್ದೀವ್ಸ್ ಭಾರತದ ಕೇವಲ ಒಂದು ಸಾಮಾನ್ಯ ನೆರೆಯ ರಾಷ್ಟ್ರವಷ್ಟೇ ಅಲ್ಲ. ಅದರೊಂದಿಗಿನ ಸಂಬಂಧ ವಿಶೇಷವಾದದ್ದು. ಹೀಗಾಗಿ ದ್ವೀಪಸಮೂಹ ರಾಷ್ಟ್ರದೊಂದಿಗೆ ಉತ್ತಮ ಸಂಬಂಧ ಬೆಳೆಸಲು ನವದೆಹಲಿ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುತ್ತದೆ’ ಎಂದು ಭಾರತ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಮಾಲ್ದೀವ್ಸ್‌ಗೆ ತಮ್ಮ ಮೂರು ದಿನಗಳ ಭೇಟಿ ಕುರಿತು ಮಾತನಾಡಿದ ಅವರು, ‘ಭಾರತೀಯ ಮೂಲದವರು ಜಗತ್ತಿನ ಎಲ್ಲಾ ಕಡೆ ಇದ್ದಾರೆ. ಮಾಲ್ದೀವ್ಸ್‌ನಲ್ಲೂ ಭಾರತೀಯರಿದ್ದು, ಅವರ ಹಿತ ಕಾಯಲು ಬದ್ಧ’ ಎಂದಿದ್ದಾರೆ.
ಮಾಲ್ದೀವ್ಸ್‌ನಲ್ಲಿರುವ ಭಾರತ ರಾಯಭಾರ ಕಚೇರಿಯ ಮಾಹಿತಿ ಪ್ರಕಾರ, ಮಾಲ್ದೀವ್ಸ್‌ನಲ್ಲಿ ಸುಮಾರು 27 ಸಾವಿರ ಭಾರತೀಯರು ಇದ್ದಾರೆ. ಇವರು ಹೆಚ್ಚಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್ನೂ ಕೆಲವರು ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದಿದ್ದಾರೆ.
ಈ ಭೇಟಿಯಲ್ಲಿ ಅವರು ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಉಭಯ ರಾಷ್ಟ್ರಗಳ ಬಾಂಧವ್ಯದಿಂದ ದೇಶಗಳ ಜನರಿಗೆ ಬಹಳಷ್ಟು ಪ್ರಯೋಜನವಾಗಲಿದೆ ಎಂದು ಮನವರಿಕೆ ಮಾಡಿದರು.
ಇದೇ ಸಂದರ್ಭದಲ್ಲಿ 28 ದ್ವೀಪಗಳನ್ನು ಒಳಗೊಂಡ ಮಾಲ್ದೀವ್ಸ್‌ನಲ್ಲಿ ಭಾರತ ಕೈಗೊಂಡ 110 ದಶಲಕ್ಷ ಅಮೆರಿಕನ್ ಡಾಲರ್ ಮೊತ್ತದ ನೀರು ಮತ್ತು ನೈರ್ಮಲ್ಯ ಯೋಜನೆಗೆ ಜೈಶಂಕರ್ ಚಾಲನೆ ನೀಡಿದರು. ಇದು ದೇಶದ ಶೇ 7ರಷ್ಟು ಜನಸಂಖ್ಯೆಗೆ ನೆರವಾಗಲಿದೆ.
‘ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹಿಂದೂ ಮಹಾಸಾಗರದ ರಾಷ್ಟ್ರಗಳಿಗೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗುತ್ತಿದೆ. ‘ಸಾಗರ್’ ಎಂಬ ಯೋಜನೆಯನ್ನು ಭಾರತ ಕೈಗೊಂಡಿದೆ. 1988ರ ನವೆಂಬರ್‌ನಲ್ಲಿ ಭಾರತ ಇಲ್ಲಿ ಕೈಗೊಂಡ ಕಾರ್ಯಕ್ರಮಗಳು, ಕೊಡುಗೆಗಳನ್ನು, 2004ರ ಸುನಾಮಿ ಸಂದರ್ಭದಲ್ಲಿ ಮಾಲೆಯಲ್ಲಿ ಎದುರಾದ ನೀರಿನ ಸಮಸ್ಯೆಗೆ ಭಾರತದ ಪರಿಹಾರ ಕುರಿತು ಮಾಲ್ದೀವ್ಸ್‌ನ ಹಲವರು ಗಮನಕ್ಕೆ ತಂದರು. ಇದು ಉಭಯ ರಾಷ್ಟ್ರಗಳ ಬಾಂಧವ್ಯ ವೃದ್ಧಿಗೆ ಸಹಕಾರಿ’ ಎಂದು ಜೈಶಂಕರ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಹೇಳಿಕೆ ನಂತರ ಭಾರತ ಹಾಗೂ ಮಾಲ್ದೀವ್ಸ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಂಡಿತ್ತು. ಹೇಳಿಕೆ ನೀಡಿದ ಮೂರು ಸಚಿವರನ್ನು ಮಾಲ್ದೀವ್ಸ್ ವಜಾಗೊಳಿಸಿತ್ತು. ಇದಾದ ಬೆನ್ನಲ್ಲೇ ಮಾಲ್ದೀವ್ಸ್‌ಗೆ ಪರ್ಯಾಯವಾಗಿ ಲಕ್ಷದ್ವೀಪವನ್ನು ದಕ್ಷಿಣ ಏಷ್ಯಾದ ಪ್ರವಾಸಿ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ ಭಾರತ ಕ್ರಮ ಕೈಗೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರೂ ಭೇಟಿ ನೀಡಿದರು.
ಚೀನಾ ಪರ ಒಲವುಳ್ಳ ಅಲ್ಲಿನ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಕೆಲವೊಂದು ತೀಕ್ಷ್ಣ ಹೇಳಿಕೆಗಳನ್ನು ನೀಡಿದ್ದರು. ಇದಾದ ನಂತರ ಮಾಲ್ದೀವ್ಸ್‌ನಲ್ಲಿದ್ದ ಭಾರತ ಯೋಧರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಮುಯಿಝು ಅವರು ಮೇ 10ರ ಗಡುವು ನೀಡಿದ್ದರು. ಅದರಂತೆಯೇ ಭಾರತದ ಸೈನಿಕರು ಸ್ವದೇಶಕ್ಕೆ ಮರಳಿದ್ದರು. ಇವು ಉಭಯ ರಾಷ್ಟ್ರಗಳ ನಡುವೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದ್ದವು.
ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಮುಯಿಝು ಅವರಿಗೂ ಭಾರತ ಆಹ್ವಾನ ನೀಡಿತ್ತು. ಇದನ್ನು ಸ್ವೀಕರಿಸಿದ್ದ ಮುಯಿಝು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿದ್ದ ಔತಣಕೂಟದಲ್ಲೂ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.