ಮಾಸ್ಕೊ: ರಷ್ಯಾದ ವಿರುದ್ಧ ಬಂಡಾಯವೆದ್ದಿದ್ದ ಖಾಸಗಿ ಸೇನಾ ಗುಂಪು ‘ವ್ಯಾಗ್ನರ್’ ವಾಪಸ್ ತೆರಳಲು ಬೆಲರೂಸ್‌ನ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರು ಸಂಧಾನ ಮಾತುಕತೆ ನಡೆಸಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಸಂಧಾನ ಮಾತುಕತೆಯ ಬಳಿಕ ‘ವ್ಯಾಗ್ನರ್’ನ ಮುಖ್ಯಸ್ಥ ಯೆವ್ಗೆನಿ ಪ್ರಿಗೋಷಿನ್ ಅವರಿಗೆ ಬೆಲರೂಸ್‌ನಲ್ಲಿ ಆಶ್ರಯ ನೀಡಲಾಗಿದೆ.
ಅಲೆಕ್ಸಾಂಡರ್ ಲುಕಾಶೆಂಕೊ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಪ್ತರಾಗಿದ್ದಾರೆ ಮತ್ತು ಬೆಲರೂಸ್‌ನ ಸೇನೆಯು ಉಕ್ರೇನ್ ಯುದ್ಧದಲ್ಲಿ ಭಾಗಿಯಾಗದಿದ್ದರೂ ಉಕ್ರೇನ್ ಜೊತೆ ಹೋರಾಡುತ್ತಿದ್ದ ರಷ್ಯಾದ ಪಡೆಗಳಿಗೆ ಆಶ್ರಯ ನೀಡಿತ್ತು. ರಷ್ಯಾದ ಅಣ್ವಸ್ತ್ರಗಳನ್ನು ತನ್ನ ದೇಶದಲ್ಲಿ ನಿಯೋಜನೆಗೊಳಿಸುವುದಕ್ಕೂ ಈ ವರ್ಷ ಒಪ್ಪಂದ ಮಾಡಿಕೊಂಡಿತ್ತು.
ರಷ್ಯಾದ ನಗರಗಳಿಂದ ಮರಳಲು ಪ್ರಿಗೋಷಿನ್ ಅವರು ಒಪ್ಪಿಕೊಂಡಿದ್ದಾರೆ ಎಂದು ಭಾನುವಾರ ರಷ್ಯಾ ಘೋಷಿಸಿದ ಬಳಿಕ ವ್ಯಾಗ್ನರ್ ಪಡೆಯು ಹಿಂದಿರುಗುತ್ತಿದ್ದಾಗಲೂ ಪ್ರಿಗೋಷಿನ್ ಮೌನವಾಗಿದ್ದರು. ಈ ವೇಳೆ ಅವರು ಎಲ್ಲಿದ್ದರು ಎಂಬುದೂ ಅಸ್ಪಷ್ಟವಾಗಿದೆ ಎಂದು ಮೂಲಗಳು ಹೇಳಿವೆ.
ತಮ್ಮ ಖಾಸಗಿ ಸೇನೆಯು ಮಾಸ್ಕೊ ಕಡೆಗೆ ತೆರಳುತ್ತಿದ್ದಾಗಲೂ ಪ್ರಿಗೋಷಿನ್ ಅವರು ಪುಟಿನ್ ಅವರನ್ನು ನೇರವಾಗಿ ಟೀಕಿಸಿರಲಿಲ್ಲ. ರಷ್ಯಾದ ರಕ್ಷಣಾ ವ್ಯವಸ್ಥೆಯ ವಿರುದ್ಧ ಬಂಡಾಯವೇಳುವುದು ತಮ್ಮ ಗುರಿ ಎಂದಿದ್ದರು. ರಷ್ಯಾದ ಸೇನೆಯು ಭ್ರಷ್ಟವಾಗಿದ್ದು, ಉಕ್ರೇನ್‌ನಲ್ಲಿ ತಮ್ಮ ಪಡೆಗಳಿಗೆ ಹಿನ್ನಡೆಯಾಗಲು ಕಾರಣವಾಗಿದೆ ಎಂದೂ ಪ್ರಿಗೋಷಿನ್ ಆರೋಪಿಸಿದ್ದರು.
ಬೆಲರೂಸ್ ಒಪ್ಪಂದದಿಂದ ಪ್ರಿಗೋಷಿನ್‌ಗೆ ‘ವ್ಯಾಗ್ನರ್’ ಪಡೆಗಳ ಮೇಲಿದ್ದ ಹಿಡಿತ ಸಡಿಲಗೊಳ್ಳಲಿದೆ ಎಂದು ಹೇಳಲಾಗಿದೆ.
ಬೀಜಿಂಗ್‌ಗೆ ರಷ್ಯಾದ ರಾಜತಾಂತ್ರಿಕರು
ತೈಪೆ (ತೈವಾನ್): ರಷ್ಯಾದಲ್ಲಿ ಬಂಡಾಯ ಶಮನಗೊಂಡ ನಂತರ ಅಲ್ಲಿನ ರಾಜತಾಂತ್ರಿಕರು ಚೀನಾ ಸರ್ಕಾರದ ಜೊತೆ ಮಾತುಕತೆ ನಡೆಸಲು ಭಾನುವಾರ ಬೀಜಿಂಗ್‌ಗೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಷ್ಯಾದ ಉಪ ವಿದೇಶಾಂಗ ಸಚಿವ ಎಂಡ್ರೈ ರುಡೆಂಕೊ ಅವರು ಚೀನಾದ ವಿದೇಶಾಂಗ ಸಚಿವ ಕಿನ್ ಗಾಂಗ್ ಅವರನ್ನು ಭೇಟಿಯಾಗಿ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಚಾರ ಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದೂ ತಿಳಿಸಿವೆ.
ಎರಡು ದಶಕಗಳಿಂದ ಅಧಿಕಾರದಲ್ಲಿರುವ ಪುಟಿನ್ ಪ್ರಾಬಲ್ಯವನ್ನು ಯೆವ್ಗೆನಿ ಪ್ರಿಗೋಷಿನ್ ಅವರ ಬಂಡಾಯವು ಕುಗ್ಗಿಸಿದೆ ಎನ್ನಲಾಗುತ್ತಿದೆ.
ಪ್ರಿಗೋಷಿನ್ ನೇತೃತ್ವದ ಪಡೆ ರೊಸ್ಟೋವನ್ ಡಾನ್ ನಗರ ಪ್ರವೇಶಿಸಿ ಮಾಸ್ಕೊಗೆ ತೆರಳಲು ಮುಂದಾದಾಗ ದೇಶದ ರಾಜಧಾನಿಯನ್ನು ರಕ್ಷಿಸಲು ರಷ್ಯಾದ ಪಡೆಗಳು ಪರದಾಡಿವೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.