ADVERTISEMENT

ನೇಪಾಳ | ಕೊಚ್ಚಿಹೋದ 2 ಬಸ್‌–51ಜನ ನಾಪತ್ತೆ: ರಕ್ಷಣಾ ಕಾರ್ಯಾಚರಣೆ ಪುನರಾರಂಭ

ಪಿಟಿಐ
Published 13 ಜುಲೈ 2024, 7:24 IST
Last Updated 13 ಜುಲೈ 2024, 7:24 IST
   

​​ಕಠ್ಮಂಡು: ನೇಪಾಳದ ಚಿತ್ವಾನ್ ಜಿಲ್ಲೆಯ ನಾರಾಯಣಘಾಟ್‌–ಮುಗಲಿಂಗ್ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ಭೂಕುಸಿತ ಸಂಭವಿಸಿದ್ದು, ಎರಡು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಏಳು ಭಾರತೀಯರು ಸೇರಿದಂತೆ 50 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಇವರ ಪತ್ತೆಗಾಗಿ ನೇಪಾಳದ ಭದ್ರತಾ ಪಡೆಗಳ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ಶನಿವಾರ ಪುನರಾರಂಭಿಸಲಾಗಿದೆ.

ನಾರಾಯಣಘಾಟ್‌–ಮುಗಲಿಂಗ್ ರಸ್ತೆಯ ಸಿಮಲ್ಟಾಲ್ ಪ್ರದೇಶದಲ್ಲಿ ಭೂಕುಸಿತ ಉಂಟಾಗಿ, ತ್ರಿಶೂಲಿ ನದಿಯಲ್ಲಿ 54 ಪ್ರಯಾಣಿಕರನ್ನು ಹೊತ್ತ ಎರಡು ಬಸ್‌ಗಳು ನಾಪತ್ತೆಯಾಗಿದ್ದವು. ಈ ಹಿಂದೆ ಎರಡು ಬಸ್‌ಗಳಲ್ಲಿ 60ಕ್ಕೂ ಹೆಚ್ಚು ಮಂದಿ ಇದ್ದರು ಎಂದು ವರದಿಯಾಗಿತ್ತು.

ನೇಪಾಳಿ ಸೇನೆ ಮತ್ತು ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯನ್ನು ಪುನರಾರಂಭಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಬಿರ್‌ಗುಂಜ್‌ನಿಂದ ಕಠ್ಮಂಡು ಕಡೆಗೆ ಹೋಗುತ್ತಿದ್ದ ಬಸ್‌ನಲ್ಲಿ 7 ಭಾರತೀಯರು ಸೇರಿದಂತೆ 24 ಜನರಿದ್ದರು ಮತ್ತು ಕಠ್ಮಂಡುವಿನಿಂದ ಗೌರ್‌ಗೆ ತೆರಳುತ್ತಿದ್ದ ಇನ್ನೊಂದು ಬಸ್‌ನಲ್ಲಿ 30 ಸ್ಥಳೀಯರು ಇದ್ದರು.

ಒಂದು ಬಸ್‌ನಲ್ಲಿದ್ದ ಮೂವರು ಪ್ರಯಾಣಿಕರು ಹೊರಗೆ ಜಿಗಿದು ಪಾರಾಗಿದ್ದಾರೆ. ಇನ್ನೂ 51 ಮಂದಿ ನಾಪತ್ತೆಯಾಗಿದ್ದು, ರಕ್ಷಣೆ ಮತ್ತು ಶೋಧ ಕಾರ್ಯ ಮುಂದುವರಿದಿದೆ ಎಂದು ನೇಪಾಳ ಪೊಲೀಸ್ ವಕ್ತಾರ ಡಾನ್ ಬಹದ್ದೂರ್ ಕರ್ಕಿ ಹೇಳಿದ್ದಾರೆ.

500ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ . ಶುಕ್ರವಾರ ರಾತ್ರಿ ನೀರಿನ ಹರಿವು ಹೆಚ್ಚಿದ್ದ ಕಾರಣ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಶನಿವಾರ ಬೆಳಗ್ಗೆ 8 ಗಂಟೆಗೆ ಮತ್ತೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.