ADVERTISEMENT

ಸ್ಟ್ಯಾನ್‌ ಸ್ವಾಮಿ ಸಾವಿನ ಬಗ್ಗೆ ತನಿಖೆ: ಅಮೆರಿಕ ಸಂಸತ್‌ನಲ್ಲಿ ನಿರ್ಣಯ ಮಂಡನೆ

ಪಿಟಿಐ
Published 9 ಜುಲೈ 2024, 3:29 IST
Last Updated 9 ಜುಲೈ 2024, 3:29 IST
ಫಾದರ್ ಸ್ಟ್ಯಾನ್ ಸ್ವಾಮಿ
ಫಾದರ್ ಸ್ಟ್ಯಾನ್ ಸ್ವಾಮಿ   

ವಾಷಿಂಗ್ಟನ್‌: ಜೈಲಿನಲ್ಲಿಯೇ ಮೃತಪಟ್ಟ ಮಾನವ ಹಕ್ಕುಗಳ ಕಾರ್ಯಕರ್ತ ಫಾದರ್ ಸ್ಟ್ಯಾನ್‌ ಸ್ವಾಮಿ ಅವರ ಬಂಧನ ಮತ್ತು ಸಾವಿನ ಬಗ್ಗೆ ಸ್ವತಂತ್ರ ತನಿಖೆಯನ್ನು ನಡೆಸುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿ ಅಮೆರಿಕದ ಸಂಸತ್‌ನಲ್ಲಿ ನಿರ್ಣಯವೊಂದನ್ನು ಮಂಡಿಸಲಾಗಿದೆ.

ಸಂಸದರಾದ ಜಿಮ್ ಮೆಕ್‌ಗವರ್ನ್, ಆಂಡ್ರೆ ಕಾರ್ಸನ್, ಜುವಾನ್ ವರ್ಗಾಸ್ ಸಂಸತ್ತಿನಲ್ಲಿ ಈ ನಿರ್ಣಯವನ್ನು ಮಂಡಿಸಿದ್ದಾರೆ. ನಿರ್ಣಯವು ಮಾನವ ಹಕ್ಕುಗಳ ರಕ್ಷಕರು ಮತ್ತು ರಾಜಕೀಯ ವಿರೋಧಿಗಳನ್ನು ಮಣಿಸಲು ಭಯೋತ್ಪಾದನೆ ವಿರೋಧಿ ಕಾನೂನುಗಳ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

‘ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ 19ನೇ ವಿಧಿಯಲ್ಲಿ ತಿಳಿಸಿರುವಂತೆ ಅಭಿವ್ಯಕ್ತಿ ಸ್ವಾತಂತ್ರ್ಯವು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ. ಇದು ಭಾರತವೂ ಒಳಗೊಂಡಂತೆ ಪ್ರಪಂಚದ ಎಲ್ಲ ಸರ್ಕಾರಗಳಿಗೂ ಅನ್ವಯವಾಗುತ್ತದೆ’ ಎಂದು ನಿರ್ಣಯವು ಸ್ಪಷ್ಟಪಡಿಸಿದೆ.

ADVERTISEMENT

ನಿರ್ಣಯ ಮಂಡಿಸುವ ವೇಳೆ ಮಾತನಾಡಿದ ಸಂಸದ ವರ್ಗಾಸ್‌, ‘ಫಾದರ್ ಸ್ಟ್ಯಾನ್‌(ಸ್ಟ್ಯಾನ್ ಸ್ವಾಮಿ) ಧ್ವನಿಯಿಲ್ಲದವರಿಗೆ ಧ್ವನಿಯಾಗಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಸ್ಥಳೀಯ ಆದಿವಾಸಿ ಜನ ಹಕ್ಕುಗಳಿಗಾಗಿ ದಣಿವರಿಯದೇ ಹೋರಾಡಿದ್ದರು. ಯುವ ಸಮುದಾಯದ ನಾಯಕರಿಗೆ ತರಬೇತಿಯನ್ನೂ ನೀಡಿದ್ದರು. ಭಾರತದಲ್ಲಿನ ಅನೇಕ ಸಮುದಾಯಗಳಿಗೆ ನ್ಯಾಯಕ್ಕಾಗಿ ಕೆಲಸ ಮಾಡಿದ್ದರು’ ಎಂದರು.

‘ಜೈಲಿನಲ್ಲಿದ್ದಾಗ ಸ್ಟ್ಯಾನ್ ಸ್ವಾಮಿ ಅವರು ಅನೇಕ ನಿಂದನೆಗಳನ್ನು ಎದುರಿಸಿದ್ದರು. ಅವರಿಗೆ ಸೂಕ್ತ ವೈದ್ಯೋಪಚಾರವನ್ನು ನಿರಾಕರಿಸಲಾಗಿತ್ತು ಎಂಬ ವಿಷಯ ಕೇಳಿ ಗಾಬರಿಯಾಯಿತು. ತಳ ಸಮುದಾಯಗಳ ಒಳಿತಿಗಾಗಿ ಸ್ಟ್ಯಾನ್ ಅವರ ಬದ್ದತೆಯನ್ನು ಮರೆಯಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಈ ನಿರ್ಣಯವನ್ನು ಮಂಡಿಸಲಾಗುತ್ತಿದೆ’ ಎಂದು ಅವರು ಹೇಳಿದರು.

2017 ಡಿಸೆಂಬರ್ 31 ರಂದು ಪುಣೆಯಲ್ಲಿ, ಭೀಮಾ ಕೋರೆಗಾಂವ್ ಯುದ್ಧದ ಸ್ಮರಣಾರ್ಥವಾಗಿ ಎಲ್ಗಾರ್ ಪರಿಷತ್ ಎಂಬ ಕಾರ್ಯಕ್ರಮದಡಿ 260ಕ್ಕೂ ಹೆಚ್ಚು ಸಂಘಟನೆಗಳು ಬೃಹತ್ ಸಮಾವೇಶ ಸಂಘಟಿಸಿದ್ದವು. ಆ ನಂತರ ನಡೆದ ಹಿಂಸಾಚಾರದಲ್ಲಿ ಅನೇಕ ಜನ ಪ್ರಾಣ ಕಳೆದುಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಸ್ವಾಮಿ ಅವರನ್ನು ಭಯೋತ್ಪಾದನಾ ವಿರೋಧಿ ಕಾನೂನಿನಡಿ 2020ರಲ್ಲಿ ರಾಷ್ಟ್ರೀಯ ತನಿಖಾ ದಳ ಬಂಧಿಸಿ, ನವಿ ಮುಂಬೈನ ತಲೋಜ ಜೈಲಿನಲ್ಲಿ ಇರಿಸಿತ್ತು.

1937 ಏಪ್ರಿಲ್ 26 ರಂದು ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ಜನಿಸಿದ್ದ ಪಾಧರ್ ಸ್ಟ್ಯಾನ್‌ ಸ್ವಾಮಿ ಅವರು ಕ್ಯಾಥೋಲಿಕ್ ಪಂಗಡದ ಧರ್ಮಗುರುವಾಗಿ, ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು. ಪ್ರಮುಖವಾಗಿ ಅವರು ಬುಡಕಟ್ಟು ಜನಾಂಗಗಳ ಹಕ್ಕುಗಳಿಗಾಗಿ ತಮ್ಮ ಜೀವಮಾನದುದ್ದಕ್ಕೂ ಹೋರಾಟ ನಡೆಸಿದ್ದರು.

ಜುಲೈ 5, 2021ರಲ್ಲಿ ಅನಾರೋಗ್ಯದಿಂದ ಜೈಲಿನಲ್ಲಿಯೇ ಸ್ಟ್ಯಾನ್ ಸ್ವಾಮಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.