ADVERTISEMENT

ದಕ್ಷಿಣ ಆಫ್ರಿಕಾ: ಮಾಜಿ ಅಧ್ಯಕ್ಷ ಜೈಲು ಸೇರಿದ ನಂತರ ಭುಗಿಲೆದ್ದ ಗಲಭೆ, 72 ಸಾವು

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 1:41 IST
Last Updated 14 ಜುಲೈ 2021, 1:41 IST
ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್‌ ಜುಮಾ ಜೈಲು ಸೇರಿದ ನಂತರ ಉದ್ಭವಿಸಿದ ಗಲಭೆ
ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್‌ ಜುಮಾ ಜೈಲು ಸೇರಿದ ನಂತರ ಉದ್ಭವಿಸಿದ ಗಲಭೆ   

ಜೋಹಾನ್ಸ್‌ಬರ್ಗ್ (ಎಎಫ್‌ಪಿ/ರಾಯಿಟರ್ಸ್‌): ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್‌ ಜುಮಾ ಅವರನ್ನು ಜೈಲಿಗಟ್ಟಿದ ಬೆನ್ನಲ್ಲೇ ಉದ್ಭವಿಸಿದ ಗಲಭೆ, ಹಿಂಸಾಚಾರದಲ್ಲಿ ಸುಮಾರು 72 ಮಂದಿ ಮೃತಪಟ್ಟಿದ್ದಾರೆ. 1,234 ಮಂದಿಯನ್ನು ಬಂಧಿಸಲಾಗಿದೆ.

ಜೋಹಾನ್ಸ್‌ಬರ್ಗ್‌ ಹೊರವಲಯದ ಸೊವೆಟೊದಲ್ಲಿ ಗಲಭೆಕೋರರು ಲೂಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಹಲವರು ಮೃತಪಟ್ಟಿದ್ದಾರೆ.

ಕ್ವಾಜುಲು–ನಟಾಲ್‌ ಪ್ರಾಂತ್ಯದಲ್ಲಿ ನಡೆದ ಗಲಭೆ, ಹಿಂಸಾಚಾರದಲ್ಲಿ 27 ಜನರು ಮೃತಪಟ್ಟಿದ್ದಾರೆ. ಗೌಟೆಂಗ್‌ ಪ್ರಾಂತ್ಯದಲ್ಲಿ 45 ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಮೂರು ಪ್ರಾಂತ್ಯಗಳಲ್ಲಿನ ಗಲಭೆ, ಕಾಲ್ತುಳಿತದಲ್ಲಿ ಸತ್ತವರ ಸಂಖ್ಯೆ 72ಕ್ಕೇರಿದಂತಾಗಿದೆ.

ADVERTISEMENT

ಗೌಟೆಂಗ್‌ ಹಾಗೂ ಕ್ವಾಜುಲು–ನಟಾಲ್‌ ಪ್ರಾಂತ್ಯಗಳಲ್ಲಿ ಕಳೆದ ಐದು ದಿನಗಳಿಂದ ಗಲಭೆ, ಅಂಗಡಿಗಳ ಲೂಟಿ ನಡೆಯುತ್ತಿದೆ. ಮಂಗಳವಾರವೂ ಈ ಪ್ರಾಂತ್ಯಗಳಲ್ಲಿ ಅಂಗಡಿಗಳ ಲೂಟಿ ನಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಅಧ್ಯಕ್ಷ ಸಿರಿಲ್‌ ರಾಮಫೊಸಾ ಅವರು ಭದ್ರತಾ ಪಡೆಗಳನ್ನು ನಿಯೋಜಿಸಿದ್ದಾರೆ.

ಭ್ರಷ್ಟಾಚಾರ ಪ್ರಕರಣದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್‌ ಜುಮಾ ಅವರಿಗೆ 15 ತಿಂಗಳ ಜೈಲು ಶಿಕ್ಷೆಯಾಗಿದೆ. ಅವರನ್ನು ಜೈಲಿಗೆ ಕಳಿಸಿದ ನಂತರ ಹಿಂಸಾಚಾರ, ಗಲಭೆ ಭುಗಿಲೆದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.