ಲಂಡನ್:ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಭಾನುವಾರ ಹೇಳಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಲು ತಮಗೆ ಸಾಕಷ್ಟು ಬೆಂಬಲವಿದ್ದರೂ ದೇಶದ ಬಗ್ಗೆ ತಾವು ಚಿಂತಿಸಿರುವುದಾಗಿಯೂ, ಸದ್ಯ ಕನ್ಸರ್ವೇಟಿವ್ ಪಕ್ಷಕ್ಕೆ ಏಕತೆಯ ಅಗತ್ಯವಿರುವುದಾಗಿ ಭಾವಿಸಿರುವುದಾಗಿಯು ಜಾನ್ಸನ್ ಹೇಳಿದ್ದಾರೆ. ಹೀಗಾಗಿ ಬ್ರಿಟನ್ ಪ್ರಧಾನಿಯಾಗಲು ಭಾರತ ಮೂಲದ ರಿಷಿ ಸುನಕ್ ಅವರಿಗೆ ಹಾದಿ ಸುಗಮವಾಗಿದೆ.
ಸ್ಪರ್ಧೆಯ ಮುಂಚೂಣಿಯಲ್ಲಿರುವ ಸುನಕ್ ಅವರು ಬೋರಿಸ್ ಜಾನ್ಸನ್ ಅವರಿಗಿಂತಲೂ ಹೆಚ್ಚಿನ ಸದಸ್ಯರ ಬೆಂಬಲ ಹೊಂದಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ರಿಷಿ ಸುನಕ್ ಭಾನುವಾರ ಘೋಷಣೆ ಮಾಡಿದ್ದರು.
ಭಾನುವಾರ ಈ ಕುರಿತು ಟ್ವೀಟ್ ಮಾಡಿದ್ದ ಅವರು, ‘ಬ್ರಿಟನ್ ಒಂದು ದೊಡ್ಡ ದೇಶ. ಆದರೆ, ಸದ್ಯ ನಾವು ತೀವ್ರವಾದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ಕನ್ಸರ್ವೇಟಿವ್ ಪಕ್ಷದ ಮುಂದಾಳಾಗಿ ನಾನು ಬ್ರಿಟನ್‌ನ ಪ್ರಧಾನಿಯಾಗಲು ಇಚ್ಚಿಸುತ್ತೇನೆ. ಆ ಮೂಲಕ ಪ್ರಸ್ತುತ ಸಮಸ್ಯೆಗಳನ್ನು ಬಗೆಹರಿಸುವ ವಿಶ್ವಾಸ ಹೊಂದಿದ್ದೇನೆ’ ಎಂದಿದ್ದಾರೆ.
ಲಿಜ್ ಟ್ರಸ್ ಅವರ ರಾಜೀನಾಮೆಯಿಂದ ಪ್ರಧಾನಿ ಹುದ್ದೆ ತೆರವಾಗಿದೆ. ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗುವವರು ನೂತನ ಪ್ರಧಾನಿಯಾಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.