ADVERTISEMENT

ಉಕ್ರೇನ್‌ನತ್ತ ಅಮೆರಿಕ, ನ್ಯಾಟೊ ಶಸ್ತ್ರಾಸ್ತ್ರ ರವಾನೆ

ರಾಯಿಟರ್ಸ್
Published 12 ಮಾರ್ಚ್ 2022, 5:37 IST
Last Updated 12 ಮಾರ್ಚ್ 2022, 5:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್:ಯುದ್ಧ ಪೀಡಿತ ಉಕ್ರೇನ್‌ನತ್ತ ಅಮೆರಿಕ ಹಾಗೂ ನ್ಯಾಟೊ ಸೇನೆಗಳು ಮಾನವ ಚಾಲಿತ ವಾಯು ರಕ್ಷಣಾ ವ್ಯವಸ್ಥೆಯ (Man-Portable Air-Defense Systems–MANPADS) ಕ್ಷಿಪಣಿಗಳೂ ಸೇರಿದಂತೆ ಅತ್ಯಂತ ಸೂಕ್ಷ್ಮ ಶಸ್ತ್ರಾಸ್ತ್ರಗಳನ್ನು ರವಾನಿಸುತ್ತಿವೆ.

ರಷ್ಯಾ ಸೇನೆ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಉಕ್ರೇನ್ ಸೇನೆಯನ್ನು ಸಜ್ಜುಗೊಳಿಸಲು ಇದು ಪ್ರಮುಖ ಪಾತ್ರವಹಿಸಲಿದೆ. ಆದರೆ, ಎರಡನೇಮಹಾಯುದ್ಧದ ನಂತರ ಯುರೋಪ್‌ನಲ್ಲಿ ಅತಿಹೆಚ್ಚು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸ್ಥಳಾಂತರಿಸುತ್ತಿರುವುದು, ಶಸ್ತ್ರಾಸ್ತ್ರಗಳ ದುರ್ಬಳಕೆಯ ಅಪಾಯದ ಬಗ್ಗೆ ಕಳವಳವನ್ನೂ ಉಂಟುಮಾಡಿದೆ.

ಈ ಬಗ್ಗೆ ಮಾತನಾಡಿರುವ ಅಮೆರಿಕ ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು, 'ಪ್ರಾಮಾಣಿಕವಾಗಿ ಹೇಳುವುದಾದರೆ, ಅಪಾಯವನ್ನು ಎದುರುಹಾಕಿಕೊಳ್ಳಲೇಬೇಕಾದ ಸನ್ನಿವೇಶ ಇದು ಎಂದು ಭಾವಿಸಿದ್ದೇವೆ. ಏಕೆಂದರೆ, ಉಕ್ರೇನಿಯನ್ನರು ತಮ್ಮಲ್ಲಿರುವ ಶಸ್ತ್ರಾಸ್ತ್ರಗಳೊಂದಿಗೆ ತುಂಬಾ ಕೌಶಲ್ಯಪೂರ್ಣರಾಗಿ ಮತ್ತು ಸೃಜನಾತ್ಮಕವಾಗಿ ಹೋರಾಟ ಮಾಡುತ್ತಿದ್ದಾರೆ' ಎಂದಿದ್ದಾರೆ. ಆ ಮೂಲಕ ರಷ್ಯಾ ವಿರುದ್ಧದ ಸಂಘರ್ಷದಲ್ಲಿ ಉಕ್ರೇನ್‌ಗೆ ಬೆಂಬಲ ನೀಡಬೇಕಿದೆ ಎಂಬುದನ್ನು ಸಮರ್ಥಿಸಿಕೊಂಡಿದ್ದಾರೆ.

ADVERTISEMENT

ಸೈನಿಕರು ತಮ್ಮ ಹೆಗಲ ಮೇಲೆ ಇಟ್ಟುಕೊಂಡು ಕ್ಷಿಪಣಿಗಳನ್ನು ಸಿಡಿಸುವ ಮ್ಯಾನ್‌ಪ್ಯಾಡ್ಸ್‌ಗಳು (MANPADS) ಯುದ್ಧ ಗೆಲ್ಲಲು ನೆರವಾಗಲಿದೆ. ಆದರೆ, ಈ ಹಿಂದೆ ಇಂತಹ ಹಲವು ಕ್ಷಿಪಣಿಗಳು ಉಗ್ರವಾದಿಗಳ ಕೈಸೇರಿವೆ. ಕಳೆದು ಹೋಗಿರುವ ಮತ್ತು ಅಕ್ರಮವಾಗಿ ಮಾರಾಟವಾಗಿರುವ ಹಲವು ಉದಾಹರಣೆಗಳೂ ಇವೆ.

1980 ಮತ್ತು 1990ರ ದಶಕದಲ್ಲಿಅಫ್ಗಾನಿಸ್ತಾನದಿಂದ ಸೋವಿಯತ್ ಪಡೆಗಳನ್ನು ಹಿಮ್ಮೆಟ್ಟಿಸಲು ಹೋರಾಟ ನಡೆಸುತ್ತಿದ್ದ ಮುಜಾಹಿದ್ದೀನ್ ಬಂಡುಕೋರರಿಗೆ ಅಮೆರಿಕ ನೂರಾರು ಕ್ಷಿಪಣಿಗಳನ್ನು ರವಾನಿಸಿತ್ತು. ಆದರೆ, ಬಳಕೆಯಾಗದ ಮ್ಯಾನ್‌ಪ್ಯಾಡ್ಸ್‌ಗಳನ್ನು ವಾಪಸ್‌ ಪಡೆಯಲು ಅಮೆರಿಕ ಸಾಕಷ್ಟು ವರ್ಷಗಳಿಂದ ಪ್ರಯತ್ನಿಸುತ್ತಲೇ ಇದೆ.

1970ರ ದಶಕದಲ್ಲಿ 60 ವಿಮಾನಗಳ ಮೇಲೆ ನಡೆದ ಮ್ಯಾನ್‌ಪ್ಯಾಡ್ಸ್‌ ದಾಳಿಯಿಂದ 1,000ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಮೆರಿಕದ 'ರ‍್ಯಾಂಡ್ ಕಾರ್ಪ್‌' ಚಿಂತಕರ ಚಾವಡಿ 2019ರಲ್ಲಿ ಅಂದಾಜಿಸಿತ್ತು. 57ಕ್ಕೂ ಹೆಚ್ಚು ಸಂಘಟನೆಗಳು ಮ್ಯಾನ್‌ಪ್ಯಾಡ್ಸ್‌ಗಳನ್ನು ಹೊಂದಲು ಹವಣಿಸುತ್ತಿವೆ ಎಂದೂ ಶಂಕಿಸಿತ್ತು.

ರಷ್ಯಾ ಅತಿದೊಡ್ಡ ಮ್ಯಾನ್‌ಪ್ಯಾಡ್ಸ್‌ ಮಾರಾಟಗಾರ ರಾಷ್ಟ್ರವಾಗಿದ್ದು, 2010–2018ರ ಅವಧಿಯಲ್ಲಿ ಇರಾಕ್, ವೆನುಜುವೆಲಾ, ಕಜಕಿಸ್ತಾನ. ಕತಾರ್ ಮತ್ತು ಲಿಬಿಯಾ ರಾಷ್ಟ್ರಗಳಿಗೆ 10,000ಕ್ಕೂ ಹೆಚ್ಚು ಮಾರಾಟಮಾಡಿದೆ ಎಂದು ರ‍್ಯಾಂಡ್ ಕಾರ್ಪ್‌ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.