ಪೋರ್ಚುಗಲ್: 20 ಲಕ್ಷ ಲೀಟರ್ ರೆಡ್ ವೈನ್ ತುಂಬಿದ ಬ್ಯಾರೆಲ್ ಸ್ಟೋಟಗೊಂಡ ಪರಿಣಾಮ ರಸ್ತೆ ಮೇಲೆ ವೈನ್ ಹೊಳೆಯೇ ಸೃಷ್ಟಿಯಾದ ಘಟನೆ ಪೋರ್ಚುಗಲ್‌ನ ಸಾವೊ ಲೊರೆಂಕೊ ಡಿ ಬೈರೊ ನಗರದಲ್ಲಿ ಕಂಡುಬಂದಿದೆ.
ರೆಡ್ ವೈನ್ ರಸ್ತೆ ಮೇಲೆ ಹರಿಯುತ್ತಿರುವ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬೃಹತ್ ಪ್ರಮಾಣ ವೈನ್ ವ್ಯರ್ಥವಾಗಿರುವುದನ್ನು ಕಂಡು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.
‘ಲೆವಿರಾ ಡಿಸ್ಟಿಲರಿ’ ಎಂಬ ಕಂಪನಿಗೆ ಈ ವೈನ್ ಸೇರಿದ್ದು, ಸುಮಾರು 20 ಲಕ್ಷ ಲೀಟರ್ ವೈನ್ ಸಾಗಿಸಲು ಮುಂದಾಗಿತ್ತು. ಈ ವೇಳೆ ಅವಘಡ ಸಂಭವಿಸಿದ್ದು, ವೈನ್ ನದಿ ಸೃಷ್ಟಿಯಾಗಿದೆ.
ಒಮ್ಮೆಲೆ ಕಡಿದಾದ ರಸ್ತೆಯಲ್ಲಿ ಬೃಹತ್ ಪ್ರಮಾಣ ಕೆಂಪು ನೀರು ಹರಿಯುತ್ತಿರುವುದನ್ನು ಕಂಡು ನಿವಾಸಿಗಳು ದಿಗ್ಭ್ರಮೆಗೊಂಡಿದ್ದಾರೆ. ಒಂದು ಒಲಂಪಿಕ್‌ನ ಈಜುಕೊಳ ತುಂಬಬಹುದಾದಷ್ಟು ವೈನ್ ರಸ್ತೆಯಲ್ಲಿ ಹರಿದು ಹೋಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಇನ್ನೊಂದೆಡೆ ಸೆರ್ಟಿಮಾ ನದಿಗೆ ವೈನ್ ಸೇರುವ ಆತಂಕವನ್ನೂ ಸ್ಥಳೀಯರು ವ್ಯಕ್ತಪಡಿಸಿದ್ದರು. ನದಿಗೆ ವೈನ್ ಹರಿದು ಹೋಗದಂತೆ ತಡೆಯುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ವೈನ್ ಹರಿವನ್ನು ಬೇರೆಡೆಗೆ ತಿರುಗಿಸಿದ್ದಾರೆ. ರಸ್ತೆ ಮೇಲೆ ಹರಿಯುವುದಕ್ಕೂ ಮೊದಲು ವೈನ್ ಹತ್ತಿರದ ಮನೆಯ ನೆಲಮಾಳಿಗೆಗೆ ಹರಿದಿದೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ವೈನ್ ಕಂಪನಿ ಲೆವಿರಾ ಡಿಸ್ಟಿಲರಿ ಕ್ಷಮೆಯಾಚಿಸಿದೆ. ಹಾನಿಯ ಎಲ್ಲ ಖರ್ಚು–ವೆಚ್ಚಗಳ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.