ಕಾಬೂಲ್: ಅಫ್ಗಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದ ಸಮೀಪ ಸೋಮವಾರ ಬೆಳಗ್ಗೆ ರಾಕೆಟ್ ದಾಳಿ ನಡೆದಿದೆ.
ವಿಮಾನ ನಿಲ್ದಾಣದಲ್ಲಿ ರಾಕೆಟ್ ದಾಳಿ ನಡೆದಿದೆ ಎಂದು ಅಮೆರಿಕದ ಶ್ವೇತಭವನವೂ ದೃಢೀಕರಿಸಿದೆ. ಆದರೆ ಸ್ಥಳಾಂತರ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.
‘ದೇಶದ ಭದ್ರತಾಪಡೆಗಳ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕಮಾಂಡರ್‌ಗಳು ತಮ್ಮ ಪ್ರಯತ್ನ ದ್ವಿಗುಣಗೊಳಿಸಬೇಕು,‘ ಎಂದು ಬೈಡನ್ ತಿಳಿಸಿದ್ದಾರೆ.
ಐಸಿಎಸ್ ಉಗ್ರಗಾಮಿ ಸಂಘಟನೆ ದಾಳಿ ನಡೆಸುವ ಬೆದರಿಕೆ ಮಧ್ಯೆಯೇ ಅಮೆರಿಕ ತನ್ನೆಲ್ಲ ಸೈನಿಕರನ್ನು ಸ್ಥಳಾಂತರಗೊಳಿಸಲು ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಈ ಮಧ್ಯೆ ರಾಕೆಟ್ ದಾಳಿ ನಡೆದಿದೆ.
ಮಂಗಳವಾರದ ಹೊತ್ತಿಗೆ ಭದ್ರತಾ ಪಡೆಗಳನ್ನು ಹಿಂತೆಗೆದುಕೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿರ್ಧರಿಸಿದ್ದಾರೆ. ಈ ಮೂಲಕ 9/11ರ ದಾಳಿಗೆ ಪ್ರತೀಕಾರವಾಗಿ ಅಫ್ಗಾನಿಸ್ತಾನದಲ್ಲಿ ಆರಂಭವಾದ ಅಮೆರಿಕದ ಸುದೀರ್ಘ ಮಿಲಿಟರಿ ಸಂಘರ್ಷವನ್ನು ಮುಕ್ತಾಯಗೊಳಿಸಲು ತೀರ್ಮಾನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.