ಕೀವ್: ಉಕ್ರೇನ್ ಮೇಲೆ ರಷ್ಯಾದ ದಾಳಿ ಮುಂದುವರಿದಿದೆ. ರಾಕೆಟ್ ದಾಳಿಯಿಂದಾಗಿ 70ಕ್ಕೂ ಅಧಿಕ ಉಕ್ರೇನ್ ಸೈನಿಕರು ಮೃತಪಟ್ಟಿದ್ದು, ಶೆಲ್ ದಾಳಿಯಿಂದಾಗಿ 12ಕ್ಕೂ ಅಧಿಕ ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್ ರಾಜಧಾನಿ ಕೀವ್‌ನಿಂದ ಉತ್ತರಕ್ಕೆ 40 ಮೈಲಿಯಷ್ಟು ದೂರದವರೆಗೆ ರಷ್ಯಾ ಪಡೆಗಳು ಬೀಡುಬಿಟ್ಟಿರುವುದು ಅಮೆರಿಕದ ‘ಮ್ಯಾಕ್ಸರ್ ಟೆಕ್ನಾಲಜೀಸ್’ ಕಂಪನಿಯ ಉಪಗ್ರಹ ಚಿತ್ರದಿಂದ ತಿಳಿದುಬಂದಿದೆ. ರಷ್ಯಾ ಪಡೆಗಳು ಕೀವ್‌ನಿಂದ ಉತ್ತರಕ್ಕೆ 17 ಮೈಲಿ ದೂರದಿಂದ ಸುಮಾರು 40 ಮೈಲಿವರೆಗೆ ವ್ಯಾಪಿಸಿವೆ. ಶಸ್ತ್ರಸಜ್ಜಿತ ವಾಹನಗಳು, ಟ್ಯಾಂಕ್‌ಗಳು, ಫಿರಂಗಿ, ಬೆಂಗಾವಲು ವಾಹನಗಳು ಇದರಲ್ಲಿ ಸೇರಿವೆ.
ಶಸ್ತ್ರಾಸ್ತ್ರ ಸಾಗಣೆಗೆ ತೊಂದರೆ ಉಂಟಾದ ಪರಿಣಾಮವಾಗಿ ಕಳೆದ 24 ಗಂಟೆಗಳಲ್ಲಿ ರಾಜಧಾನಿ ಕೀವ್‌ನಲ್ಲಿ ರಷ್ಯಾ ಸ್ವಲ್ಪ ಮುನ್ನಡೆಯನ್ನಷ್ಟೇ ಸಾಧಿಸಿದೆ. ಅಲ್ಲದೆ, ರಷ್ಯಾ ತನ್ನ ಶಸ್ತ್ರಾಸ್ತ್ರಗಳ ಬಳಕೆಯನ್ನು ಹೆಚ್ಚಿಸಿದೆ' ಎಂದು ಬ್ರಿಟಿಷ್ ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ.
ಜನನಿಬಿಡ ನಗರ ಪ್ರದೇಶಗಳಲ್ಲಿ ಭಾರಿ ಶಸ್ತ್ರಾಸ್ತ್ರಗಳ ಬಳಕೆಯು ನಾಗರಿಕ ಸಾವು-ನೋವುಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅದು ಹೇಳಿದೆ.
ರಷ್ಯಾದ ಪಡೆಗಳು ನಗರದ ಹಲವಾರು ಕಡೆಗಳಲ್ಲಿ ದಾಳಿ ಮಾಡುತ್ತಿದ್ದು, ಉಕ್ರೇನ್ ದೇಶದ ಎರಡನೇ ಅತಿದೊಡ್ಡ ನಗರವಾದ ಹಾರ್ಕಿವ್ ಮೇಲೆ ಬಾಂಬ್ ದಾಳಿ ನಡೆಸಿ 12ಕ್ಕೂ ಅಧಿಕ ನಾಗರಿಕರನ್ನು ಕೊಂದಿದೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಶಾಂತಿಯುತವಾಗಿದ್ದ ನಗರದ ಮೇಲೆ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ಮಾಡುತ್ತಿರುವ ರಷ್ಯಾವನ್ನು ನೋಡಿದರೆ, ಅದು ಶಸ್ತ್ರಸಜ್ಜಿತ ಉಕ್ರೇನ್ ಸೇನೆಗಳೊಂದಿಗೆ ಸೆಣಸಲು ಸಾಧ್ಯವಿಲ್ಲ ಎಂಬುದು ತಿಳಿಯುತ್ತದೆ ಎಂದು ಉಕ್ರೇನ್ ರಕ್ಷಣಾ ಸಚಿವ ಒಲೆಕ್ಸಿ ರೆಜ್‌ನಿಕೊವ್ ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ.
'ರಷ್ಯಾದ 5,710 ಸೈನಿಕರನ್ನು ಹತ್ಯೆ ಮಾಡಲಾಗಿದೆ ಮತ್ತು 198 ಟ್ಯಾಂಕ್‌ಗಳು, 29 ಫೈಟರ್ ವಿಮಾನಗಳು, 29 ಹೆಲಿಕಾಪ್ಟರ್‌ಗಳನ್ನು ಉಕ್ರೇನ್ ಪಡೆಗಳು ನಾಶ ಮಾಡಿವೆ' ಎಂದು ತಿಳಿಸಿದ್ದಾರೆ.
ಯುದ್ಧಕ್ಕೆ ವಿರಾಮ ನೀಡುವ ನಿಟ್ಟಿನಲ್ಲಿ ಸೋಮವಾರ ಉಕ್ರೇನ್ ಮತ್ತು ರಷ್ಯಾ ನಡುವೆ ನಡೆದ ಮೊದಲ ಸುತ್ತಿನ ಮಾತುಕತೆ ಅಂತ್ಯವಾಗಿದ್ದು, ಫಲಪ್ರದವಾಗಿಲ್ಲ. ಶೀಘ್ರವೇ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.