ಕಾಕ್ಸ್‌ಬಜಾರ್, ಬಾಂಗ್ಲಾದೇಶ: ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಇಲ್ಲಿನ ಲಕ್ಷಾಂತರ ರೋಹಿಂಗ್ಯಾ ಮುಸ್ಲಿಮರು ಬೃಹತ್ ಪ್ರತಿಭಟನೆ ನಡೆಸಿದರು. ಮ್ಯಾನ್ಮಾರ್‌ನಲ್ಲಿ ನೆಲೆ ಕಳೆದುಕೊಂಡು ಬಾಂಗ್ಲಾದೇಶಕ್ಕೆ ವಲಸೆ ಬಂದ ವರ್ಷಾಚರಣೆ ನಿಮಿತ್ತ ಸುಮಾರು 7 ಲಕ್ಷ ಪ್ರತಿಭಟನಾಕಾರರು ಶನಿವಾರ ಧರಣಿ ನಡೆಸಿದರು.
‘ನ್ಯಾಯ ಬೇಕು’ ಎಂಬ ಘೋಷಣೆಯೊಂದಿಗೆ ಶಾಂತಿಯುತ ಪ್ರತಿಭಟನೆ ನಡೆಸಿದರು.
ಜಗತ್ತಿನ ಅತಿದೊಡ್ಡ ನಿರಾಶ್ರಿತರ ಶಿಬಿರ ಎನಿಸಿರುವ ಇಲ್ಲಿನ ಕುಟುಪಲಾಂಗ್ ಕ್ಯಾಂಪ್‌ನಲ್ಲಿ ಮತ್ತಷ್ಟು ಪ್ರತಿಭಟನಾ ರ‍್ಯಾಲಿಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಸೇನೆ ಹಾಗೂ ಬೌದ್ಧ ಧರ್ಮೀಯರ ದಾಳಿಯಿಂದ ರೋಹಿಂಗ್ಯಾ ಮುಸ್ಲಿಮರು ದೇಶ ತೊರೆಯುವಂತಾಗಿತ್ತು.ಕಳೆದ ವರ್ಷದ ಆಗಸ್ಟ್ 25ರಂದು ನಡೆದ ದಾಳಿಯಿಂದ ರಾಖೈನ್ ರಾಜ್ಯದಲ್ಲಿ ಒಂದೇ ತಿಂಗಳಲ್ಲಿ 7 ಸಾವಿರ ಮುಸ್ಲಿಮರು ಮೃತಪಟ್ಟಿದ್ದರು. ಉಳಿದವರು ಬಾಂಗ್ಲಾದತ್ತ ವಲಸೆ ಬಂದರು. ಈ ವೇಳೆ ಅತ್ಯಾಚಾರ, ದೌರ್ಜನ್ಯ, ಕೊಲೆಗಳು ನಡೆದವು. ಇದಕ್ಕೆ ಸೇನೆಯನ್ನು ಹೊಣೆ ಮಾಡಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯ. ರೋಹಿಂಗ್ಯಾ ಬಂಡುಕೋರರ ವಿರುದ್ಧ ಮಾತ್ರ ದಾಳಿ ನಡೆಸುವಂತೆ ಸೂಚಿಸಲಾಗಿತ್ತು ಎಂದು ಮ್ಯಾನ್ಮಾರ್ ಸರ್ಕಾರ ಸ್ಪಷ್ಟಪಡಿಸಿತ್ತು.
ಭವಿಷ್ಯದ ಪ್ರಶ್ನೆ
ಭವಿಷ್ಯ ಏನು ಎಂಬುದು ರೋಹಿಂಗ್ಯಾ ಮುಸ್ಲಿಮರ ಮುಂದಿರುವ ದೊಡ್ಡ ಪ್ರಶ್ನೆ. ಇವರಿಗೆ ಸ್ವಂತ ಊರೂ ಇಲ್ಲ, ಬಾಂಗ್ಲಾದೇಶಕ್ಕೆ ಇವರು ಬೇಕಾಗಿಲ್ಲ. ಮೂಲನೆಲೆ ರಾಖೈನ್ ರಾಜ್ಯದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಅಲ್ಲಿ ಆರೋಗ್ಯದಂತಹ ಸಮಸ್ಯೆಗಳು ಹಾಗೇ ಉಳಿದಿವೆ. ಪಶ್ಚಿಮ ಮ್ಯಾನ್ಮಾರ್‌ನಿಂದ ಬಾಂಗ್ಲಾಗೆ ವಲಸೆ ಬರುವವರ ಸಂಖ್ಯೆಯೂ ನಿಂತಿಲ್ಲ. ವರ್ಷಪೂರ್ತಿಯೂ ಇದು ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.