ADVERTISEMENT

ರಷ್ಯಾದಲ್ಲಿ ಪುಟಿನ್ ಟೀಕಾಕಾರ ಅಲೆಕ್ಸಿ ನವಾಲ್ನಿ ಹೆಸರು ಉಗ್ರರ ಪಟ್ಟಿಗೆ ಸೇರ್ಪಡೆ!

ಅಧ್ಯಕ್ಷ ಪುಟಿನ್‌ರ ಟೀಕಾಕಾರ ಅಲೆಕ್ಸಿ * ಅವರ 9 ಸಹಾಯಕರಿಗೂ ಉಗ್ರರ ಪಟ್ಟ

ಏಜೆನ್ಸೀಸ್
Published 25 ಜನವರಿ 2022, 11:19 IST
Last Updated 25 ಜನವರಿ 2022, 11:19 IST
ಅಲೆಕ್ಸಿ ನವಾಲ್ನಿ
ಅಲೆಕ್ಸಿ ನವಾಲ್ನಿ   

ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಕಟು ಟೀಕಾಕಾರ ಅಲೆಕ್ಸಿ ನವಾಲ್ನಿ ಅವರನ್ನು ‘ಭಯೋತ್ಪಾದಕರ ಪಟ್ಟಿ’ಗೆ ಮಂಗಳವಾರ ಸೇರ್ಪಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನವಾಲ್ನಿ ಅವರ ಪ್ರಮುಖ ಸಹಾಯಕ ಲ್ಯುಬೋವ್ ಸೊಬೊಲ್‌ ಅವರ ಹೆಸರು ಸಹ ‘ಫೆಡರಲ್ ಸರ್ವೀಸ್‌ ಫಾರ್ ಫೈನಾನ್ಶಿಯಲ್ ಮಾನಿಟರಿಂಗ್‌’ ಕಚೇರಿ ಸಿದ್ಧಪಡಿಸಿದ ‘ನಿಷೇಧಕ್ಕೆ ಒಳಗಾದವರ’ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

‘ನವಾಲ್ನಿ ಅವರ ಸಹಾಯಕರ ಪೈಕಿ ಒಟ್ಟು 9 ಜನರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ’ ಎಂದು ನವಾಲ್ನಿ ಅವರು ಸ್ಥಾಪಿಸಿರುವ ‘ಭ್ರಷ್ಟಾಚಾರ ವಿರೋಧಿ ಫೌಂಡೇಷನ್‌’ ತಿಳಿಸಿದೆ.

ADVERTISEMENT

ವಿರೋಧ ಪಕ್ಷವನ್ನು ದಮನಿಸುವ ಕಾರ್ಯವನ್ನು ಸರ್ಕಾರ ಮುಂದುವರಿಸಿದ್ದು, ಈಗ ನವಾಲ್ನಿ ಸೇರಿದಂತೆ ಹಲವು ನಾಯಕರ ವಿರುದ್ಧ ಪುಟಿನ್‌ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ಮೂಲಗಳು ಹೇಳಿವೆ.

ರಷ್ಯಾ ಸರ್ಕಾರದ ಈ ನಿರ್ಧಾರದಿಂದಾಗಿ, ಬಲಪಂಥೀಯ ರಾಷ್ಟ್ರವಾದಿ ಸಂಘಟನೆಗಳು ಹಾಗೂತಾಲಿಬಾನ್‌ ಮತ್ತು ಇಸ್ಲಾಮಿಕ್‌ ಸ್ಟೇಟ್‌ನಂತಹ ವಿದೇಶಿ ಭಯೋತ್ಪಾದಕ ಸಂಘಟನೆಗಳ ಸಾಲಿಗೆ ನವಾಲ್ನಿ ಅವರ ಸಂಘಟನೆಯನ್ನೂ ಸೇರಿಸಿದಂತಾಗಲಿದೆ.

ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಲೆಕ್ಸ್ ನವಾಲ್ನಿ ಅವರು ಪುಟಿನ್ ಸರ್ಕಾರದ ಹಲವು ಹಗರಣಗಳನ್ನು ಬಯಲಿಗೆ ಎಳೆದಿದ್ದರು. ಕೋವಿಡ್‌ ಲಾಕ್‌ಡೌನ್ ಅವಧಿಯಲ್ಲಿ ದೇಶದ ಆರ್ಥಿಕತೆ ಬಹುತೇಕ ಸ್ಥಗಿತವಾಗಿತ್ತು. ಲಾಕ್‌ಡೌನ್ ತೆರವಾದ ನಂತರ ನಿರೀಕ್ಷಿತ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗಲಿಲ್ಲ. ಪುಟಿನ್ ಅವರು ಕೋವಿಡ್ ಸ್ಥಿತಿಯನ್ನು ಸರಿಯಾಗಿ ನಿರ್ವಹಿಸಲಿಲ್ಲ ಎಂಬ ಆರೋಪಗಳು ಕೇಳಿಬಂದು, ಪ್ರತಿಭಟನೆ ಭುಗಿಲೆದ್ದಿತ್ತು.

ನಂತರ ನಡೆದ ಬೆಳಣಿಗೆಗಳಲ್ಲಿ, ನವಾಲ್ನಿ ಅವರನ್ನು ವಿಷವಿಟ್ಟು ಕೊಲ್ಲಲು ಯತ್ನಿಸಲಾಗಿತ್ತು ಎಂಬ ಆರೋಪಗಳು ಕೇಳಿಬಂದವು. ಆದರೆ, ಪುಟಿನ್‌ ಸರ್ಕಾರ ಈ ಆರೋಪಗಳನ್ನು ತಳ್ಳಿಹಾಕಿತ್ತು.

2014ರಲ್ಲಿ ನವಾಲ್ನಿ ವಿರುದ್ಧ ಹಣ ಅಕ್ರಮ ವರ್ಗಾವಣೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಶಿಕ್ಷೆಯ ನಿಯಮಗಳನ್ನು ನವಾಲ್ನಿ ಮುರಿದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದ ಸ್ಥಳೀಯ ಕೋರ್ಟ್‌, ಅವರಿಗೆ ಜೈಲು ಶಿಕ್ಷೆ ವಿಧಿಸಿ ಕಳೆದ ವರ್ಷ ಫೆಬ್ರುವರಿಯಲ್ಲಿ ತೀರ್ಪು ನೀಡಿತ್ತು. ನವಾಲ್ನಿ ಅವರು ಈಗ ಜೈಲಿನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.