ADVERTISEMENT

ಉಕ್ರೇನ್‌ ವಿದ್ಯುತ್‌ ಸ್ಥಾವರದ ಮೇಲೆ ರಷ್ಯಾ ದಾಳಿ; ಮೂವರ ಸಾವು

ಏಜೆನ್ಸೀಸ್
Published 22 ಮಾರ್ಚ್ 2024, 11:27 IST
Last Updated 22 ಮಾರ್ಚ್ 2024, 11:27 IST
<div class="paragraphs"><p>ರಾಯಿಟರ್ಸ್ ಸಾಂದರ್ಭಿಕ ಚಿತ್ರ</p></div>

ರಾಯಿಟರ್ಸ್ ಸಾಂದರ್ಭಿಕ ಚಿತ್ರ

   

ಕೀವ್‌: ಉಕ್ರೇನ್‌ನ ಅತ್ಯಂತ ದೊಡ್ಡ ಜಲವಿದ್ಯುತ್‌ ಸ್ಥಾವರ ಸೇರಿದಂತೆ ದೇಶದ ಬಹುಪಾಲು ವಿದ್ಯುತ್‌ ಸೌಕರ್ಯಗಳನ್ನು ಗುರಿಯಾಗಿಸಿ ರಷ್ಯಾ ಡ್ರೋನ್‌ ಮತ್ತು ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ಹಲವೆಡೆ ವಿದ್ಯುತ್‌ ಪೂರೈಕೆ ವ್ಯತ್ಯಯಗೊಂಡಿದೆ. ಅಲ್ಲದೆ, ದಾಳಿಯಿಂದ ಮೂವರು ನಾಗರಿಕರು ಹತರಾಗಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

‘ರಾತ್ರಿ ವೇಳೆ ಡ್ರೋನ್‌ ಮತ್ತು ರಾಕೆಟ್‌ ದಾಳಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ದೇಶದ ಇಂಧನ ವಲಯಗಳ ಮೇಲೆ ನಡೆದ ಅತ್ಯಂತ ದೊಡ್ಡ ದಾಳಿ ಇದು. ರಷ್ಯಾದ ಗುರಿ ಹಾನಿ ಮಾಡುವುದಷ್ಟೇ ಆಗಿಲ್ಲ, ಕಳೆದ ವರ್ಷದಂತೆ ನಮ್ಮ ಇಂಧನ ವ್ಯವಸ್ಥೆಗೆ ದೊಡ್ಡಮಟ್ಟದಲ್ಲಿ ಅಡಚಣೆ ಮಾಡುವುದಾಗಿದೆ’ ಎಂದು ಉಕ್ರೇನ್‌ ಇಂಧನ ಸಚಿವ ಜರ್ಮನ್‌ ಗಲುಶ್‌ಚೆಂಕೊ ತಿಳಿಸಿದ್ದಾರೆ.

ADVERTISEMENT

ಈ ದಾಳಿಯಲ್ಲಿ ಯುರೋಪ್‌ನ ಅತಿ ದೊಡ್ಡ ಝಪೊರಿಝಿಯಾ ಅಣು ವಿದ್ಯುತ್‌ ಸ್ಥಾವರಕ್ಕೆ ವಿದ್ಯುತ್‌ ಪೂರೈಸುವ ನಿಪ್ರೊ ಜಲವಿದ್ಯುತ್‌ ಸ್ಥಾವರದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಸ್ಥಾವರಕ್ಕೆ ವಿದ್ಯುತ್‌ ಪೂರೈಸುತ್ತಿದ್ದ 750 ಕೆ.ವಿ ಮಾರ್ಗ ಕಡಿತವಾಗಿದೆ. ಕಡಿಮೆ ಕೆ.ವಿ ಸಾಮರ್ಥ್ಯದ ಮಾರ್ಗ ಕಾರ್ಯನಿರ್ವಹಿಸುತ್ತಿದೆ ಎಂದು ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ ಮುಖ್ಯಸ್ಥ ರಾಫೆಲ್ ಗ್ರಾಸ್ಸಿ ಶುಕ್ರವಾರ ತಿಳಿಸಿದ್ದಾರೆ.

ಝಪೊರಿಝಿಯಾ ಅಣುಸ್ಥಾವರವನ್ನು ರಷ್ಯಾ ಪಡೆಗಳು ಆಕ್ರಮಿಸಿವೆ. ಸ್ಥಾವರದ ಸುತ್ತಲೂ ಕದನ ನಡೆಯುತ್ತಿದ್ದು, ಸಂಭಾವ್ಯ ಅಣು ದುರಂತದ ಆತಂಕ ಎದುರಾಗಿದೆ.

ಕಳೆದ ರಾತ್ರಿಯ ದಾಳಿಯಲ್ಲಿ ಒಬ್ಬರು ಮೃತಪಟ್ಟು, ಎಂಟು ಜನ ಗಾಯಗೊಂಡಿದ್ದಾರೆ ಎಂದು ಝಪೊರಿಝಿಯಾ ಪ್ರಾದೇಶಿಕ ಗವರ್ನರ್ ಇವಾನ್ ಫೆಡೊರೊವ್ ಹೇಳಿದ್ದಾರೆ. ಖ್ಮೆಲ್‌ನಿಟ್‌ಸ್ಕಿ ಪ್ರದೇಶದಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಆಂತರಿಕ ವ್ಯವಹಾರಗಳ ಸಚಿವಾಲಯ ಹೇಳಿದೆ. 

ಗಡಿ ಸಮೀಪದ ಬೆಲ್ಗೊರೊಡ್‌ ಪ್ರದೇಶ ಮತ್ತು ಕರ್‌ಸ್ಕ್‌ ಪ್ರದೇಶದ ಟೆಟ್‌ಕಿನೊ ಪಟ್ಟಣದ ಮೇಲೆ ಉಕ್ರೇನ್‌ ಪಡೆಗಳು ಶೆಲ್‌ ದಾಳಿ ನಡೆಸಿವೆ. ಇದರಲ್ಲಿ ವ್ಯಕ್ತಿಯೊಬ್ಬರು ಸತ್ತಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ರಷ್ಯಾ ಅಧಿಕಾರಿಗಳು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.