ADVERTISEMENT

ಸೇನೆಯಿಂದ ಭಾರತೀಯರ ಬಿಡುಗಡೆಗೆ ರಷ್ಯಾ ಒಪ್ಪಿಗೆ

ಪಿಟಿಐ
Published 9 ಜುಲೈ 2024, 18:20 IST
Last Updated 9 ಜುಲೈ 2024, 18:20 IST

ವ್ಲಾಡಿಮರ್ ಪುಟಿನ್ ಮತ್ತು ನರೇಂದ್ರ ಮೋದಿ

ವ್ಲಾಡಿಮರ್ ಪುಟಿನ್ ಮತ್ತು ನರೇಂದ್ರ ಮೋದಿ

ರಾಯಿಟರ್ಸ್ ಚಿತ್ರ

ಮಾಸ್ಕೊ: ಯೋಧರಿಗೆ ಸಹಾಯಕ ಸಿಬ್ಬಂದಿಯಾಗಿ ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿರುವ  ಭಾರತದ ಎಲ್ಲ ಪ್ರಜೆಗಳನ್ನು ಕೆಲಸದಿಂದ ಬಿಡುಗಡೆಗೊಳಿಸಲು ರಷ್ಯಾ ಸರ್ಕಾರ ಬಹುತೇಕ ಒಪ್ಪಿಕೊಂಡಿದೆ.

ADVERTISEMENT

‘ಸೇನೆಯಲ್ಲಿರುವ ಭಾರತೀಯರ ಬಿಡುಗಡೆಗೆ ಮಾಸ್ಕೊ ಸಮ್ಮತಿಸಿದೆ’ ಎಂದು ಉನ್ನತ ಮೂಲಗಳು ಮಂಗಳ
ವಾರ ದೃಢಪಡಿಸಿವೆ. ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ನಡೆಸಿದ
ಔಪಚಾರಿಕ ಸಭೆಯಲ್ಲಿ ಇದನ್ನು
ಪ್ರಸ್ತಾಪಿಸಿದ್ದರು.

ರಷ್ಯಾ ಸೇನೆಯಲ್ಲಿದ್ದ ಇಬ್ಬರು ಭಾರತೀಯರು ಮೃತಪಟ್ಟಿರುವ
ವಿಷಯ ಜೂನ್ 11ರಂದು ಬಯಲಾಗಿ, ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ್ದ
ಭಾರತ, ‘ಸೇನೆಗೆ ಭಾರತೀಯರ ನೇಮಕವನ್ನು ಕೂಡಲೇ ನಿಲ್ಲಿಸಬೇಕು’ ಎಂದು ಒತ್ತಾಯಿಸಿತ್ತು.

ರಷ್ಯಾ ಸೇನೆಯಲ್ಲಿ ಸಹಾಯಕ
ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಸೂರತ್‌ನ 23 ವರ್ಷ ವಯಸ್ಸಿನ ಹೇಮಲ್‌ ಅಶ್ವಿನಿಭಾಯಿ ಫೆಬ್ರುವರಿ ತಿಂಗಳಲ್ಲಿ, ಹೈದರಾಬಾದ್‌ನ
30 ವರ್ಷ ವಯಸ್ಸಿನ ಮೊಹಮ್ಮದ್ ಅಸ್ಫಾನ್‌ ಮಾರ್ಚ್‌ ತಿಂಗಳಲ್ಲಿ, ಅಸುನೀಗಿದ್ದರು.

‘2 ಕಾನ್ಸುಲೇಟ್ ಆರಂಭಕ್ಕೆ ನಿರ್ಧಾರ’: ರಷ್ಯಾದ ಕಝಾನ್‌, ಯೆಕತರಿನ್‌ಬರ್ಗ್‌ ನಗರಗಳಲ್ಲಿ ಭಾರತವು ಕಾನ್ಸುಲೇಟ್‌ ಗಳನ್ನು ಆರಂಭಿಸಲಿದೆ. ಇದರಿಂದ ಭವಿಷ್ಯದಲ್ಲಿ ಪ್ರವಾಸ ಮತ್ತು
ವಾಣಿಜ್ಯ ಚಟುವಟಿಕೆಯ ಚೇತರಿಕೆಗೆ ನೆರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಪ್ರಕಟಿಸಿದರು.

ಪ್ರಸ್ತುತ ಸೇಂಟ್‌ ಪೀಟರ್ಸ್‌ಬರ್ಗ್ ಮತ್ತು ವ್ಲಾಡುವೊಸ್ಟೊಕ್‌ ನಗರಗಳಲ್ಲಿ ಭಾರತದ ಕಾನ್ಸುಲೇಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ, ಭಾರತ ಮೂಲದ ಜನಸಮೂಹವನ್ನು ಉದ್ದೇಶಿಸಿ
ಮಾತನಾಡಿದ ಅವರು ಈ ವಿಷಯ ತಿಳಿಸಿದರು.

ಆಸ್ಟ್ರಿಯಾಗೆ ಪ್ರಧಾನಿ: ರಷ್ಯಾ‌ಕ್ಕೆ ಎರಡು ದಿನದ ಪ್ರವಾಸ ಪೂರ್ಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ, ಮಂಗಳವಾರ ‌ಆಸ್ಟ್ರೀಯಾ ಪ್ರವಾಸಕ್ಕಾಗಿ ವಿಯೆನ್ನಾಗೆ ತೆರಳಿದರು.

ಮೋದಿ ಭೇಟಿಯೊಂದಿಗೆ 40 ವರ್ಷದ ಬಳಿಕ ಆಸ್ಟ್ರೀಯಾಗೆ ಭಾರತದ ಪ್ರಧಾನಿ ಭೇಟಿ ನೀಡಿದಂತಾಗಲಿದೆ. ಹಿಂದೆ 1983ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ಭೇಟಿ ನೀಡಿದ್ದರು.

ಭಾರತ–ರಷ್ಯಾ ಆರ್ಥಿಕ ಸಹಕಾರ–2030: ಹಲವು ನಿರ್ಧಾರ

ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಉಪಸ್ಥಿತಿಯಲ್ಲಿ ಕೈಗೊಂಡ ತೀರ್ಮಾನಗಳು

• ದ್ವಿಪಕ್ಷೀಯ ವ್ಯಾಪಾರದ ಉದಾರೀಕರಣ ಮತ್ತು ತೆರಿಗೆ ನಿರ್ಬಂಧಗಳ ತೆರವು

• ಇಎಇಯು–ಭಾರತ ಮುಕ್ತ ಮಾರಾಟ ವಲಯದ ಸೃಷ್ಟಿಸುವುದು

• 2030ರ ಹೊತ್ತಿಗೆ 100 ಶತಕೋಟಿ ಡಾಲರ್‌ನಷ್ಟು ವಹಿವಾಟಿನ ಗುರಿ

• ರಾಷ್ಟ್ರೀಯ ಕರೆನ್ಸಿ ಬಳಕೆ ಮೂಲಕ ದ್ವಿಪಕ್ಷೀಯ ಪಾವತಿ ವ್ಯವಸ್ಥೆ ರೂಪಿಸುವುದು

• ಪರಸ್ಪರ ಒಪ್ಪಂದಗಳಲ್ಲಿ ಡಿಜಿಟಲ್‌ ಹಣಕಾಸು ವ್ಯವಸ್ಥೆಯ ಬಳಕೆ

• ಹೊಸ ಮಾರ್ಗಗಳ ಪರಿಚಯದ ಮೂಲಕ ಭಾರತದ ಜೊತೆಗೆ ಸರಕು ವಹಿವಾಟು ವೃದ್ಧಿ

• ಇದಕ್ಕಾಗಿ ದಕ್ಷಿಣ–ಉತ್ತರ ಅಂತರರಾಷ್ಟ್ರೀಯ ಟ್ರಾನ್ಸ್‌ಪೋರ್ಟ್ ಕಾರಿಡಾರ್, ಉತ್ತರದ ಸಮುದ್ರ ಮಾರ್ಗ, ಚೆನ್ನೈ–ವ್ಳಾಡಿವೊಸ್ಟೊಕ್‌ ಸಮುದ್ರ ಮಾರ್ಗಗಳ ಪರಿಚಯ.

• ದ್ವಿಪಕ್ಷೀಯ ವ್ಯಾಪಾರದಲ್ಲಿ ಕೃಷಿ ಉತ್ಪನ್ನ, ಆಹಾರ ಮತ್ತು ರಸಗೊಬ್ಬರಗಳ ಪ್ರಮಾಣ ಏರಿಕೆ

• ಇಂಧನ, ಅಣುಶಕ್ತಿ, ತೈಲ ಸಂಸ್ಕರಣೆ, ಪೆಟ್ರೊಕೆಮಿಕಲ್ಸ್‌ ವಲಯದಲ್ಲಿ ಪರಸ್ಪರ ಸಹಕಾರ ವೃದ್ಧಿ

ಭಾರತದ ‘ಸುಖ–ದುಃಖದ ಗೆಳೆಯ’ ರಷ್ಯಾ–ಮೋದಿ

ಭಾರತ–ರಷ್ಯಾ ಬಾಂಧವ್ಯ ವೃದ್ಧಿಯಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ ಅವರ ನಾಯಕತ್ವದ ಕೊಡುಗೆ ಹೆಚ್ಚು ಎಂದು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಭಾರತದ ಸುಖ–ದುಃಖದಲ್ಲಿ ಜೊತೆಗಿರುವ ಗೆಳೆಯನಂತೆ ರಷ್ಯಾ’ ಎಂದು ಬಣ್ಣಿಸಿದ್ದಾರೆ.

ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಪಶ್ಚಿಮ ರಾಷ್ಟ್ರಗಳು ರಷ್ಯಾದ ಸಾಮರ್ಥ್ಯವನ್ನು ನಿಸ್ತೇಜಗೊಳಿಸಲು ಯತ್ನಿಸುತ್ತಿರುವ ಹೊತ್ತಿನಲ್ಲಿಯೇ ಪ್ರಧಾನಿ ಈ ಮಾತು ಹೇಳಿದ್ದಾರೆ. ಅವರು ಇಲ್ಲಿ ಭಾರತ ಮೂಲದ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದರು.

‘ರಷ್ಯಾದ ಹೆಸರು ಕೇಳುತ್ತಿದ್ದಂತೆಯೇ ಪ್ರತಿ ಭಾರತೀಯನಲ್ಲೂ ರಷ್ಯಾ ನಂಬಿಕಾರ್ಹ ಪಾಲುದಾರ. ಕಷ್ಟ–ಸುಖದಲ್ಲಿ ಜೊತೆಗಿರುವ ಗೆಳೆಯ ಎಂಬ ಭಾವನೆ ಮೂಡುತ್ತದೆ’ ಎಂದು ಹೇಳಿದರು.

‘ಚಳಿಗಾಲದಲ್ಲಿ ರಷ್ಯಾದ ತಾಪಮಾನ ಎಷ್ಟೇ ಮೈನಸ್‌ ಡಿಗ್ರಿ ಸೆಲ್ಸಿಯಸ್ ಇರಲಿ. ಭಾರತ–ರಷ್ಯಾದ ಭಾಂಧವ್ಯ ಎಂದಿಗೂ ಪ್ಲಸ್‌ ಆಗಿರಲಿದೆ. ಮಧುರವಾಗಿರಲಿದೆ. ಈ ಬಾಂಧವ್ಯವು ದೃಢವಾದ, ಪರಸ್ಪರ ನಂಬಿಕೆ ಮತ್ತು ಗೌರವದ ಅಡಿಪಾಯವನ್ನು ಅವಲಂಬಿಸಿದೆ’ ಎಂದು ಮೋದಿ ಹೇಳಿದರು.

‘ಜಗತ್ತಿಗೆ ಈಗ ಬೇಕಾಗಿರುವುದು ಕೂಡಿ ಬಾಳುವ ಮನೋಧರ್ಮ; ಪ್ರಭಾವ ಬೀರುವ ಧೋರಣೆ ಅಲ್ಲ. ಕೂಡಿ ಬಾಳುವುದರ ಪ್ರಾಮುಖ್ಯವನ್ನು ಭಾರತದಷ್ಟು ಹೆಚ್ಚು ಅರ್ಥಪೂರ್ಣವಾಗಿ ಜಗತ್ತಿಗೆ ಬೇರಾರೂ ಸಾರಲು ಸಾಧ್ಯವಿಲ್ಲ. ಏಕೆಂದರೆ, ಭಾರತದಲ್ಲಿ ಈ ಭಾವನೆಯನ್ನು ಪೂಜಿಸುವ ಸಂಪ್ರದಾಯವಿದೆ’ ಎಂದು ಹೇಳಿದರು.

‘ಪ್ರಗತಿ ಕುರಿತು ಭಾರತದಲ್ಲಿ 10 ವರ್ಷಗಳಲ್ಲಿ ನೋಡಿರುವುದು ಟ್ರೇಲರ್ ಮಾತ್ರ. ಮುಂದಿನ 10 ವರ್ಷಗಳಲ್ಲಿ ಇನ್ನಷ್ಟು ತ್ವರಿತಗತಿಯ ಪ್ರಗತಿ ನೋಡಲಿದ್ದೇವೆ’ ಎಂದು ಹೇಳಿದರು.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ನಾಯಕ, ವಿಶ್ವದ ಅತಿದೊಡ್ಡ ರಕ್ತದಾಹಿ ಕ್ರಿಮಿನಲ್‌ನನ್ನು ಅಪ್ಪಿಕೊಂಡಿರುವುದು ಶಾಂತಿ ಸ್ಥಾಪನೆಯ ಪ್ರಕ್ರಿಯೆಗೆ ಹಿನ್ನಡೆ
ವೊಲೊಡಿಮಿರ್ ಝೆಲೆನ್‌ಸ್ಕಿ, ಉಕ್ರೇನ್ ಅಧ್ಯಕ್ಷ

ಉಕ್ರೇನ್‌ ಬಿಕ್ಕಟ್ಟನ್ನು ಶಾಂತಿಯುತ ಮಾರ್ಗದಲ್ಲಿ ಬಗೆಹರಿಸಲು ಯತ್ನಿಸುತ್ತಿರುವುದಕ್ಕಾಗಿ ಭಾರತದ ಪ್ರಧಾನಿ ಮೋದಿಯವರಿಗೆ ಕೃತಜ್ಞತೆಗಳು

ವ್ಲಾದಿಮಿರ್ ಪುಟಿನ್, ರಷ್ಯಾ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.