ಮಾಸ್ಕೊ:ಉಕ್ರೇನ್‌ನಲ್ಲಿ ನಡೆಸುತ್ತಿರುವ ವಿಶೇಷ ಸೇನಾ ಕಾರ್ಯಾಚರಣೆಯಲ್ಲಿ ಅಣ್ವಸ್ತ್ರ ಬಳಕೆಯ ಸಾಧ್ಯತೆಯನ್ನುರಷ್ಯಾ ಶುಕ್ರವಾರ ತಳ್ಳಿ ಹಾಕಿದೆ.
ವರದಿಗಾರರೊಂದಿಗೆ ಮಾತನಾಡಿದ ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಅಲೆಕ್ಸಿ ನೈಜೆವ್ ‘ರಷ್ಯಾದಿಂದ ಅಣ್ವಸ್ತ್ರಗಳ ಬಳಕೆ ಸಾಧ್ಯತೆ ಮತ್ತು ಅದರ ಅಪಾಯದ ಬಗ್ಗೆ ಪಾಶ್ಚಾತ್ಯ ಉನ್ನತ ಅಧಿಕಾರಿಗಳ ನಡುವಿನ ಚರ್ಚೆಯು ವಿಶೇಷ ಸೇನಾ ಕಾರ್ಯಾಚರಣೆಗೆ ಅನ್ವಯಿಸುವುದಿಲ್ಲ’ಎಂದು ಸ್ಪಷ್ಟಪಡಿಸಿದ್ದಾರೆ.
ಬಾಲ್ಟಿಕ್ ಸಮುದ್ರದ ಕಲಿನಿಂಗ್ರಾಡ್‌ನ ಪಶ್ಚಿಮದ ಎನ್‌ಕ್ಲೇವ್‌ನಲ್ಲಿ ಎರಡು ದಿನಗಳ ಹಿಂದಷ್ಟೇ ಅಣ್ವಸ್ತ್ರಗಳನ್ನು ಸಾಗಿಸುವ ಇಸ್ಕಾಂಡರ್ ಕ್ಷಿಪಣಿಗಳ ದಾಳಿಯ ಅಣಕು ಅಭ್ಯಾಸ ನಡೆಸಿರುವುದಾಗಿ ರಷ್ಯಾ ರಕ್ಷಣಾ ಸಚಿವಾಲಯ ಹೇಳಿಕೆ ನೀಡಿದ ಬೆನ್ನಲ್ಲೇ, ವಿದೇಶಾಂಗ ಸಚಿವಾಲಯದಿಂದ ಈ ಸ್ಪಷ್ಟನೆ ಹೊರಬಿದ್ದಿದೆ.
ಅಮೆರಿಕದ ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ) ನಿರ್ದೇಶಕ ವಿಲಿಯಂ ಬರ್ನ್ಸ್ ‘ಕಳೆದ ಏಪ್ರಿಲ್ 14ರಂದು ಉಕ್ರೇನ್‌ನಲ್ಲಿ ರಷ್ಯಾಕ್ಕೆ ಆಗಿರುವ ಹಿನ್ನಡೆಗಳನ್ನು ಗಮನಿಸಿದರೆ, ‘ರಷ್ಯಾವು ಯುದ್ಧತಂತ್ರದ ಅಣ್ವಸ್ತ್ರಗಳು ಅಥವಾ ಕಡಿಮೆ ಪರಿಣಾಮದ ಅಣ್ವಸ್ತ್ರಗಳ ಸಂಭಾವ್ಯ ದಾಳಿಯ ಮೊರೆ ಹೋಗುವ ಬೆದರಿಕೆಯನ್ನು ನಮ್ಮಲ್ಲಿ ಯಾರೂ ಲಘುವಾಗಿ ತೆಗೆದುಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ.
ವಿಜಯ ದಿನಕ್ಕಾಗಿ ಮರಿಯುಪೊಲ್ ವಶ:‘ಮೇ 9ರ ವಿಜಯ ದಿನ’ಕ್ಕಾಗಿ ರಷ್ಯಾ, ಉಕ್ರೇನಿನ ಬಂದರು ನಗರ ಮರಿಯುಪೋಲ್ ಮತ್ತು ಅಲ್ಲಿನ ಬೃಹತ್ ಉಕ್ಕಿನ ಸ್ಥಾವರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಬಯಸುತ್ತಿದೆ ಎಂದು ಬ್ರಿಟನ್ ಸೇನೆ ಶುಕ್ರವಾರ ಹೇಳಿದೆ.
ಉಕ್ಕಿನ ಸ್ಥಾವರದ ಮೇಲೆ ಶುಕ್ರವಾರವೂ ರಷ್ಯಾ ಪಡೆಗಳು ಬಾಂಬ್ ಮತ್ತು ಶೆಲ್ ದಾಳಿ ಮುಂದುವರಿಸಿವೆ ಎಂದು ಬ್ರಿಟನ್ ಸೇನಾ ಗುಪ್ತಚರ ವಿಭಾಗವು ಟ್ವೀಟ್ ಮಾಡಿದೆ.
ರಷ್ಯಾ ಪಡೆಗಳು ಕದನ ವಿರಾಮ ಉಲ್ಲಂಘಿಸಿ, ಸ್ಥಾವರದ ಮೇಲೆ ದಾಳಿ ನಡೆಸುತ್ತಲೇ ಇವೆಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಗುರುವಾರ ವಿಡಿಯೊ ಭಾಷಣದಲ್ಲಿ ತಿಳಿಸಿದ್ದರು. ದಾಳಿಯ ನಡುವೆಯೂಸ್ಥಾವರದ ಬಂಕರ್‌ಗಳಲ್ಲಿ ಸಿಲುಕಿರುವವರ ರಕ್ಷಣೆಗೆ ಪ್ರಯತ್ನ ಮುಂದುವರಿದಿವೆ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.
ಬೃಹತ್ ಶಸ್ತ್ರಕೋಠಿ ಧ್ವಂಸ:ಉಕ್ರೇನ್‌ನ ಕ್ರಾಮರೊಸ್ಕಿಯಲ್ಲಿನ ಯುದ್ಧೋಪಕರಣಗಳ ಬೃಹತ್ ಶಸ್ತ್ರಕೋಠಿಯನ್ನು ರಷ್ಯಾ ಕ್ಷಿಪಣಿ ದಾಳಿಯಿಂದ ಧ್ವಂಸಗೊಳಿಸಿದೆ.
ಪೂರ್ವ ಲುಹಾನ್‌ಸ್ಕ್ ಪ್ರದೇಶದಲ್ಲಿ ಉಕ್ರೇನ್‌ನ ಸುಖೊಯ್-25 ಮತ್ತು ಮಿಗ್-29 ಯುದ್ಧ ವಿಮಾನಗಳನ್ನು ವಾಯು ಪಡೆಗಳು ಹೊಡೆದುರುಳಿಸಿವೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.
ಮುಂದುವರಿದ ಶಸ್ತ್ರಾಸ್ತ್ರ ಪೂರೈಕೆ:ರಷ್ಯಾದ ಕಠಿಣ ಎಚ್ಚರಿಕೆಯ ನಡುವೆಯೂ ಉಕ್ರೇನ್‌ಗೆ ಪಾಶ್ಚಾತ್ಯ ರಾಷ್ಟ್ರಗಳಿಂದ ಶಸ್ತ್ರಾಸ್ತ್ರಗಳ ಪೂರೈಕೆ ಮುಂದುವರಿದಿದೆ. ಐದುಹೊವಿಟ್ಜರ್ ಫಿರಂಗಿಗಳನ್ನು ಉಕ್ರೇನ್‌ಗೆ ನೀಡುವುದಾಗಿನೆದರ್‌ಲೆಂಡ್ ವಾಗ್ದಾನ ನೀಡಿದ ಬೆನ್ನಲ್ಲೇ, ಜರ್ಮನಿಯು ಸ್ವಯಂಚಾಲಿತ ಏಳು ಹೊವಿಟ್ಜರ್ ಫಿರಂಗಿಗಳನ್ನು ಉಕ್ರೇನ್‌ಗೆ ಕೊಡಲಿದೆ ಎಂದು ಜರ್ಮನಿಯ ರಕ್ಷಣಾ ಸಚಿವ ಕ್ರಿಸ್ಟೀನ್ ಲ್ಯಾಂಬ್ರೆಕ್ಟ್ ಶುಕ್ರವಾರ ಹೇಳಿದ್ದಾರೆ.
‘ಭಾರತ ಶಾಂತಿ ಪರ, ಗೆಲುವಿನ ಕಡೆಗಲ್ಲ’
ವಿಶ್ವಸಂಸ್ಥೆ: ‘ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ನಾವು ವಿಜಯದ ಕಡೆಗೆ ಇರುವುದಿಲ್ಲ’ ಎಂದು ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರತಿಪಾದಿಸಿದೆ.
ಭದ್ರತಾ ಮಂಡಳಿಯಲ್ಲಿ ಗುರುವಾರ ಮಾತನಾಡಿದ ಭಾರತದ ಕಾಯಂ ಪ್ರತಿನಿಧಿಟಿ.ಎಸ್. ತಿರುಮೂರ್ತಿ, ‘ಭಾರತವು ಶಾಂತಿಯ ಕಡೆಗಿದೆ.ಈ ಸಂಘರ್ಷದಲ್ಲಿ ವಿಜಯದ ಭಾಗವಾಗುವುದಿಲ್ಲ. ಸಂಘರ್ಷ ಪ್ರಾರಂಭವಾದಾಗಿನಿಂದ, ಭಾರತವು ಯುದ್ಧ ನಿಲ್ಲಿಸಲು ಮತ್ತು ಮಾತುಕತೆ ಹಾಗೂ ರಾಜತಾಂತ್ರಿಕತೆ ಮಾರ್ಗ ಅನುಸರಿಸಲು ನಿರಂತರ ಕರೆ ನೀಡುತ್ತಿದೆ’ ಎಂದು ಪುನರುಚ್ಚರಿಸಿದರು.
‘ಉಕ್ರೇನ್‌ನ ಬುಚಾದಲ್ಲಿನ ನರಮೇಧವನ್ನು ಭಾರತ ತೀವ್ರವಾಗಿ ಖಂಡಿಸಿದೆ. ಸ್ವತಂತ್ರ ತನಿಖೆಗೂ ಒತ್ತಾಯಿಸಿದೆ. ಉಕ್ರೇನ್ ಜನರ ನೋವು ನಿವಾರಿಸುವ ಎಲ್ಲ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ. ಯುದ್ಧಪೀಡಿತ ಪ್ರದೇಶಗಳಿಂದ ಮುಗ್ಧ ನಾಗರಿಕರನ್ನು ತಕ್ಷಣವೇ ಸ್ಥಳಾಂತರಿಸುವ ಅಗತ್ಯವನ್ನು ಒತ್ತಿಹೇಳಿದೆ’ ಎಂದರು.
‘ಉಕ್ರೇನ್ ಸಂಘರ್ಷ ಕುರಿತ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಭಾರತ ಗೈರಾಗಬಾರದಿತ್ತು. ನೀವು (ತಿರುಮೂರ್ತಿ) ಸಾಮಾನ್ಯ ಸಭೆಯಿಂದ ಹೊರಗುಳಿಯಬಾರದು. ವಿಶ್ವಸಂಸ್ಥೆಯ ಚಾರ್ಟರ್ ಗೌರವಿಸಿ’ ಎಂದು ನೆದರ್‌ಲೆಂಡ್ ರಾಯಭಾರಿ ಮಾಡಿರುವ ಟ್ವೀಟ್‌ಗೆ ಪ್ರತ್ಯುತ್ತರ ನೀಡಿರುವ ಟಿ.ಎಸ್. ತಿರುಮೂರ್ತಿ, ‘ದಯವಿಟ್ಟು ನಮ್ಮನ್ನು ಉತ್ತೇಜಿಸಬೇಡಿ. ಏನು ಮಾಡಬೇಕೆಂದು ಭಾರತಕ್ಕೆ ತಿಳಿದಿದೆ’ ಎಂದು ತಿರುಗೇಟು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.