ADVERTISEMENT

ರಷ್ಯಾದಿಂದ ಖಂಡಾಂತರ ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ: ಉಕ್ರೇನ್‌

ಏಜೆನ್ಸೀಸ್
Published 21 ನವೆಂಬರ್ 2024, 15:42 IST
Last Updated 21 ನವೆಂಬರ್ 2024, 15:42 IST
<div class="paragraphs"><p>ರಷ್ಯಾ ಗುರುವಾರ ನಡೆಸಿದ ಕ್ಷಿಪಣಿಗಳ ದಾಳಿಯಿಂದ ಉಕ್ರೇನ್‌ನ ಡಿನಿಪ್ರೊ ನಗರದ ಕಟ್ಟಡಗಳು ಹಾನಿಯಾಗಿದ್ದು, ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು </p></div>

ರಷ್ಯಾ ಗುರುವಾರ ನಡೆಸಿದ ಕ್ಷಿಪಣಿಗಳ ದಾಳಿಯಿಂದ ಉಕ್ರೇನ್‌ನ ಡಿನಿಪ್ರೊ ನಗರದ ಕಟ್ಟಡಗಳು ಹಾನಿಯಾಗಿದ್ದು, ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು

   

ಕೀವ್‌: ಇದೇ ಮೊದಲ ಬಾರಿಗೆ ರಷ್ಯಾ ತನ್ನ ಮೇಲೆ ಖಂಡಾಂತರ ಬ್ಯಾಲಿಸ್ಟಿಕ್‌ ಕ್ಷಿಪಣಿಯ ದಾಳಿ ನಡೆಸಿದೆ ಎಂದು ಉಕ್ರೇನ್‌ ಹೇಳಿದೆ.  

ಪಾಶ್ಚಿಮಾತ್ಯ ದೇಶಗಳು ಪೂರೈಸಿರುವ ಬಲಿಷ್ಠ, ದೂರಗಾಮಿ ಕ್ಷಿಪಣಿಗಳನ್ನು ಉಕ್ರೇನ್‌ ದೇಶವು ರಷ್ಯಾ ವಿರುದ್ಧ ಬಳಸಿದ ಬೆನ್ನಲ್ಲೇ ರಷ್ಯಾ ಖಂಡಾಂತರ ಕ್ಷಿಪಣಿ ದಾಳಿ ಮೂಲಕ ಪ್ರತ್ಯುತ್ತರ ನೀಡಿದೆ.

ADVERTISEMENT

ಉಕ್ರೇನ್‌ನ ಡಿನಿಪ್ರೊ ನಗರದ ಮೂಲ ಸೌಕರ್ಯಗಳನ್ನು ಗುರಿಯಾಗಿಸಿ ರಷ್ಯಾ ವಿವಿಧ ಬಗೆಯ ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ. ಅಲ್ಲದೆ ತನ್ನ ಅಸ್ಟ್ರಾಖಾನ್‌ ಪ್ರದೇಶದಿಂದ ಖಂಡಾಂತರ ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನೂ ರಷ್ಯಾ ಉಡಾಯಿಸಿದೆ ಎಂದು ಉಕ್ರೇನ್‌ ಹೇಳಿದೆ.

ಈ ಕ್ಷಿಪಣಿಯು ಸಾಂಪ್ರದಾಯಿಕ ಮತ್ತು ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯದ್ದಾಗಿದೆ ಎಂದಿರುವ ಉಕ್ರೇನ್‌ ಮೂಲಗಳು, ಆದರೆ ಈ ದಾಳಿಯಲ್ಲಿ ಅಣ್ವಸ್ತ್ರ ಬಳಕೆಯಾಗಿಲ್ಲ ಎಂದು ತಿಳಿಸಿದೆ.

ವೈಮಾನಿಕ ರಕ್ಷಣಾ ಘಟಕವು ಆರು ಕ್ಷಿಪಣಿಗಳನ್ನು ಹೊಡೆದುರುಳಿಸಿದೆ ಎಂದು ಉಕ್ರೇನ್‌ ವಾಯು ಪಡೆ ತಿಳಿಸಿದೆ. ಆದರೆ ಅವು ಖಂಡಾಂತರ ಬ್ಯಾಲಿಸ್ಟಿಕ್‌ ಕ್ಷಿಪಣಿಗಳೇ ಎಂಬುದನ್ನು ಅದು ಸ್ಪಷ್ಟಪಡಿಸಿಲ್ಲ.

ಡಿನಿಪ್ರೊ ನಗರದ ಮೇಲೆ ರಷ್ಯಾ ಸುರಿಸಿದ ಬಾಂಬ್‌ ದಾಳಿಯಿಂದ ಹಲವು ಮನೆಗಳು, ಪುನರ್ವಸತಿ ಕೇಂದ್ರ ಮತ್ತು ಕೈಗಾರಿಕಾ ಘಟಕಕ್ಕೆ ಹಾನಿಯಾಗಿದೆ. ಈ ದಾಳಿಯಲ್ಲಿ ಇಬ್ಬರು ವ್ಯಕ್ತಿಗಳಿಗೆ ತೀವ್ರ ಗಾಯಗಳಾಗಿವೆ ಎಂದು ಉಕ್ರೇನ್‌ ತಿಳಿಸಿದೆ.

ಖಂಡಾಂತರ ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ ಕುರಿತು ಎದುರಾದ ಪ್ರಶ್ನೆಗೆ ಕ್ರೆಮ್ಲಿನ್‌ ವಕ್ತಾರ ಡಮಿಟ್ರಿ ಪೆಸ್ಕೊವ್‌, ‘ಈ ವಿಷಯದ ಕುರಿತು ಹೇಳುವುದೇನು ಇಲ್ಲ’ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.