ADVERTISEMENT

ವಯಾಗ್ರ, ಅತ್ಯಾಚಾರವೂ ರಷ್ಯಾದ ‘ಮಿಲಿಟರಿ ತಂತ್ರ’: ವಿಶ್ವಸಂಸ್ಥೆ ಅಧಿಕಾರಿ

ಏಜೆನ್ಸೀಸ್
Published 16 ಅಕ್ಟೋಬರ್ 2022, 10:44 IST
Last Updated 16 ಅಕ್ಟೋಬರ್ 2022, 10:44 IST
ಉಕ್ರೇನ್‌ನಲ್ಲಿ ರಷ್ಯಾದ ಸೈನಿಕರಿಂದ ನಡೆಯುತ್ತಿರುವ ಲೈಂಗಿಕ ಶೋಷಣೆ ವಿರುದ್ಧ ನ್ಯೂಯಾರ್ಕ್‌ನಲ್ಲಿ ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಸಂದರ್ಭ
ಉಕ್ರೇನ್‌ನಲ್ಲಿ ರಷ್ಯಾದ ಸೈನಿಕರಿಂದ ನಡೆಯುತ್ತಿರುವ ಲೈಂಗಿಕ ಶೋಷಣೆ ವಿರುದ್ಧ ನ್ಯೂಯಾರ್ಕ್‌ನಲ್ಲಿ ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಸಂದರ್ಭ    

ಪ್ಯಾರಿಸ್‌: ಅತ್ಯಾಚಾರಗಳು ಮತ್ತು ಲೈಂಗಿಕ ಆಕ್ರಮಣಗಳು ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ತಂತ್ರವಾಗಿವೆ. ಸಂತ್ರಸ್ತರನ್ನು ಅಮಾನುಷವಾಗಿ ನಡೆಸಿಕೊಳ್ಳುವುದೂ ಕೂಡ ತಂತ್ರದ ಭಾಗವಾಗಿದೆ ಎಂದು ವಿಶ್ವಸಂಸ್ಥೆಯ ಪ್ರತಿನಿಧಿ ಪ್ರಮೀಳಾ ಪೆಟನ್‌ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿ ಸಂಸ್ಥೆ ಎಎಫ್‌ಪಿಯೊಂದಿಗೆ ಮಾತನಾಡಿರುವ ಪ್ರಮೀಳಾ, ಉಕ್ರೇನ್‌ ಯುದ್ಧಕ್ಕೆ ಸಂಬಂಧಿಸಿದ ಹಲವು ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

‘ಉಕ್ರೇನ್‌ನಲ್ಲಿ ಅತ್ಯಾಚಾರವನ್ನು ಯುದ್ಧದ ಅಸ್ತ್ರವಾಗಿ ಬಳಸಲಾಗುತ್ತಿದೆಯೇ?’ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ‘ಅಂಥ ಎಲ್ಲಾ ಸೂಚನೆಗಳು ಇವೆ’ ಎಂದು ಹೇಳಿದ್ದಾರೆ. ಪ್ರಮೀಳಾ ಅವರು ವಿಶ್ವಸಂಸ್ಥೆಯ ‘ಲೈಂಗಿಕ ಹಿಂಸೆ’ ತಡೆ ವಿಭಾಗದ ಪ್ರತಿನಿಧಿಯೂ ಆಗಿದ್ದಾರೆ.

ADVERTISEMENT

‘ಮಹಿಳೆಯರನ್ನು ಬಂಧಿಸಿ ದಿನಗಟ್ಟಲೆ ಅತ್ಯಾಚಾರ ಮಾಡುತ್ತಿರುವುದು, ಚಿಕ್ಕ ಹುಡುಗರು ಮತ್ತು ಪುರುಷರ ಮೇಲೂ ಬಲತ್ಕಾರ ಮಾಡುತ್ತಿರುವುದು, ಜನನಾಂಗಗಳ ಛೇದನ, ರಷ್ಯಾ ಸೈನಿಕರು ವಯಾಗ್ರಗಳನ್ನು ಹೊಂದಿರುವುದರ ಬಗ್ಗೆ ಮಹಿಳೆಯರು ಸಾಕ್ಷಿ ನುಡಿಯುತ್ತಿರುವುದನ್ನು ಕೇಳಿದರೆ ಇದು ಮಿಲಿಟರಿ ತಂತ್ರ ಎಂದು ಅನಿಸುತ್ತದೆ’ ಎಂದು ಪ್ರಮೀಳಾ ಹೇಳಿದ್ದಾರೆ.

‘ಅತ್ಯಾಚಾರದ ಸಮಯದಲ್ಲಿ ತಮಗೆ ಏನು ಹೇಳಲಾಯಿತು ಎಂಬುದರ ಬಗ್ಗೆ ಸಂತ್ರಸ್ತರು ಕೊಟ್ಟಿರುವ ವರದಿಗಳನ್ನು ಗಮನಿಸಿದರೆ, ಇದು ಬಲಿಪಶುಗಳನ್ನು ಅಮಾನುಷವಾಗಿ ನಡೆಸಿಕೊಳ್ಳುವ ಉದ್ದೇಶಪೂರ್ವಕ ತಂತ್ರವೆನಿಸುತ್ತದೆ’ ಎಂದು ಅವರು ಹೇಳಿದ್ದಾರೆ.

ಫೆಬ್ರುವರಿಯಲ್ಲಿ ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ವಿಶ್ವಸಂಸ್ಥೆಯು ಉಕ್ರೇನ್‌ನಲ್ಲಿ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯಗಳ ನೂರಕ್ಕೂ ಹೆಚ್ಚು ಪ್ರಕರಣಗಳನ್ನು ಪರಿಶೀಲಿಸಿದೆ ಎಂಬ ಇತ್ತೀಚಿನ ವರದಿಯನ್ನು ಉಲ್ಲೇಖಿಸಿ ಪ್ರಮೀಳಾ ಮಾತನಾಡಿದ್ದಾರೆ.

‘ರಷ್ಯಾದ ಪಡೆಗಳಿಂದಾದ ಅಮಾನುಷ ಕೃತ್ಯಗಳು ವರದಿಯಿಂದ ದೃಢವಾಗಿವೆ. ಸಂಗ್ರಹಿಸಿದ ಸಾಕ್ಷ್ಯಗಳ ಪ್ರಕಾರ, ಕನಿಷ್ಠ 4 ವರ್ಷ ವಯಸ್ಸಿನವರಿಂದ ಹಿಡಿದು ಗರಿಷ್ಠ 82 ವರ್ಷ ವಯಸ್ಸಿನವರ ಮೇಲೆ ರಷ್ಯಾ ಸೈನಿಕರಿಂದ ಲೈಂಗಿಕ ಶೋಷಣೆ ನಡೆದಿದೆ’ ಎಂದು ಅವರು ಹೇಳಿದರು.

‘ಸಂತ್ರಸ್ತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಹದಿ ಹರೆಯದ ಹೆಣ್ಣು ಮಕ್ಕಳಾಗಿದ್ದಾರೆ. ಪುರುಷರು ಮತ್ತು ಗಂಡು ಮಕ್ಕಳ ಮೇಲೂ ದೌರ್ಜನ್ಯ ನಡೆದಿದೆ’ ಎಂದು ಪ್ರಮೀಳಾ ಅವರು ವರದಿಯನ್ನು ಉಲ್ಲೇಖಿಸುತ್ತಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.