ಮಾಸ್ಕೊ: ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಮಹತ್ವಾಕಾಂಕ್ಷೆಯ ಚಂದ್ರಯಾನ–3 ಯೋಜನೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಆ. 23 ದಿನಾಂಕ ನಿಗದಿಯಾಗಿದೆ. ಅದಕ್ಕೂ ಎರಡು ದಿನ ಮೊದಲೇ ರಷ್ಯಾದ ನೌಕೆ ಅದೇ ಧ್ರುವದಲ್ಲಿ ಇಳಿಯುವ ಸಾಧ್ಯತೆ ಇದೆ.
ಬಾಹ್ಯಾಕಾಶದ ಈ ಪೈಪೋಟಿಗೆ ಇರುವ ಏಕೈಕ ಉದ್ದೇಶ ಚಂದ್ರನ ಅಂಗಳದಲ್ಲಿ ನೀರು ಶೋಧ!
47 ವರ್ಷಗಳ ಬಳಿಕ ಚಂದ್ರನ ಅಂಗಳಕ್ಕೆ ರಷ್ಯಾ ಬಾಹ್ಯಾಕಾಶ ಸಂಸ್ಥೆಯು ನೌಕೆಯನ್ನು ಕಳುಹಿಸಿದೆ. ಆ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿದೆ ಎನ್ನಲಾದ ಮಂಜು ರೂಪದ ನೀರಿನ ಶೋಧಕ್ಕಾಗಿ ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಗಳು ಪೈಪೋಟಿಗಿಳಿದಿವೆ.
ರಷ್ಯಾದ ಚಂದ್ರಯಾನ ಯೋಜನೆ 1976ರಲ್ಲಿ ಮೊದಲ ಬಾರಿಗೆ ನಡೆದಿತ್ತು. ಇದೀಗ ಲುನಾ–25 ಎಂಬ ನೌಕೆಯನ್ನು ಸೊಯುಜ್ 2.1 ರಾಕೇಟ್ ಮೂಲಕ ಶುಕ್ರವಾರ ನಸುಕಿನ 2:11ಕ್ಕೆ (ರಷ್ಯಾ ಸಮಯ) ಮಾಸ್ಕೊದ ಪೂರ್ವಕ್ಕೆ 5,550 ಕಿ.ಮೀ. ದೂರದಲ್ಲಿರುವ ಚೊಸ್ಟೊಚ್ನಿ ಕೊಸ್ಮೊಡ್ರೊಮ್ ಉಡ್ಡಯನ ಕೇಂದ್ರದಿಂದ ಕಕ್ಷೆಗೆ ಕಳುಹಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಈ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಆ. 21ರಂದು ಇಳಿಯಲಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆಯು ಮುಖ್ಯಸ್ಥ ಯುರಿ ಬೊರಿಸೊವ್ ಅವರು ರಾಷ್ಟ್ರೀಯ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಇದಕ್ಕೂ ಮೊದಲು ಆ. 23ರಂದೇ ನೌಕೆಯನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ಯೋಜನೆಯನ್ನು ರಷ್ಯಾ ಹೊಂದಿತ್ತು.
‘ಆ. 21ರವರೆಗೆ ಕಾಯೋಣ. ಬಹುಷಃ ನಾವೇ ಮೊದಲಿಗರು ಎಂಬ ವಿಶ್ವಾಸವಿದೆ’ ಎಂದು ಬೊರಸೊವ್ ಸಂಸ್ಥೆಯ ಉದ್ಯೋಗಿಗಳಿಗೆ ಹೇಳಿದ್ದಾರೆ ಎಂದೂ ವರದಿಯಾಗಿದೆ.
‘ಲುನಾ–25 ಸಣ್ಣ ಕಾರಿನ ಗಾತ್ರದ ನೌಕೆ. ಇದು ಚಂದ್ರನ ದಕ್ಷಿಣ ಧ್ರುವದಲ್ಲಿ ಒಂದು ವರ್ಷ ಕೆಲಸ ಮಾಡಲಿದೆ. ನಾಸಾ ವಿಜ್ಞಾನಿಗಳನ್ನೂ ಒಳಗೊಂಡು ಬಾಹ್ಯಾಕಾಶ ತಜ್ಞರು, ಸದಾ ಮರೆಯಲ್ಲೇ ಇರುವ ಚಂದ್ರನ ಈ ಭಾಗದಲ್ಲಿ ನೀರಿನ ನಿಕ್ಷೇಪ ಇರುವುದನ್ನು ಪತ್ತೆ ಮಾಡಿದ್ದಾರೆ.
‘ರಷ್ಯಾದ ಈ ಯೋಜನೆ ಹಿಂದೆಯೇ ನಿರ್ಧಾರವಾಗಿತ್ತು. 2022ರಲ್ಲಿ ಉಕ್ರೇನ್‌ನೊಂದಿಗೆ ಆರಂಭವಾದ ಯುದ್ಧದಿಂದಾಗಿ ಬಾಹ್ಯಾಕಾಶ ಕಾರ್ಯಾಚರಣೆಗೆ ಸಮಯ ದೊರೆತಿರಲಿಲ್ಲ. ಜತೆಗೆ ರಷ್ಯಾದ ಆರ್ಥಿಕತೆಯೂ ಕುಸಿದ ಕಾರಣ ಯೋಜನೆ ಮುಂದಕ್ಕೆ ಹೋಗಿತ್ತು. ಇದೀಗ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ಛಾಪನ್ನು ಮುಂದುವರಿಸಲು ರಷ್ಯಾ ಆತುರದಲ್ಲಿ ಈ ಯೋಜನೆ ಕೈಗೊಂಡಿದೆ’ ಎಂದು ಮೂಲಗಳು ತಿಳಿಸಿವೆ.
ಉಕ್ರೇನ್‌ನೊಂದಿಗಿನ ಯುದ್ಧಕ್ಕೂ ಮೊದಲು ಯುರೋಪ್‌ನ ಬಾಹ್ಯಾಕಾಶ ಸಂಸ್ಥೆಯು ರಷ್ಯಾದ ಈ ನೌಕೆಯೊಂದಿಗೆ ತನ್ನ ಪೈಲೆಟ್–ಡಿ ಎಂಬ ನೌಕೆಗೆ ಕ್ಯಾಮೆರಾ ಸಿಕ್ಕಿಸಿ ಕಳುಹಿಸಲು ಮಾತುಕತೆ ನಡೆಸಿತ್ತು. ಆದರೆ ಯುದ್ಧದ ನಂತರ ಈ ಒಪ್ಪಂದ ಮುರಿದುಬಿತ್ತು.
ಅಮೆರಿಕದ ಗಗನಯಾನಿ ನೀಲ್ ಆರ್ಮ್‌ಸ್ಟ್ರಾಂಗ್ 1969ರಲ್ಲಿ ಚಂದ್ರನ ಅಂಗಳದಲ್ಲಿಳಿದ ಮೊದಲ ವ್ಯಕ್ತಿ. ಆದರೆ ಚಂದ್ರನ ತಲುಪಲು ಮೊದಲು ಯೋಜನೆ ರೂಪಿಸಿದ್ದು ಸೋವಿಯತ್ ಒಕ್ಕೂಟವು 1959ರಲ್ಲೇ ಲುನಾ–2 ಯೋಜನೆಯನ್ನು ಕೈಗೊಂಡಿತ್ತು. 1966ರಲ್ಲಿ ಕೈಗೊಂಡ ಲುನಾ–9 ನೌಕೆಯು ಚಂದ್ರನಲ್ಲಿ ಇಳಿದ ಮೊದಲ ನೌಕೆ. 1991ರ ನಂತರ ರಷ್ಯಾ ತನ್ನ ಬಾಹ್ಯಾಕಾಶ ಶೋಧವನ್ನು ಮಂಗಳನತ್ತ ತಿರುಗಿಸಿತು.
ಇದನ್ನು ಓದಿ: ಚಂದ್ರನ ದಕ್ಷಿಣ ಧ್ರುವದತ್ತ ಇಸ್ರೊ.. ಈ ಸಾರಿ ಹೇಗಿರಲಿದೆ ಕಾರ್ಯಾಚರಣೆ?
ಸಹರಾ ಮರುಭೂಮಿಗಿಂತಲೂ ನೂರು ಪಟ್ಟು ಶುಷ್ಕವಾದ ಚಂದ್ರನ ಅಂಗಳದಲ್ಲಿ ನೀರು ಶೋಧ ಕಾರ್ಯಚರಣೆ ಕಳೆದ ನೂರು ವರ್ಷಗಳಿಂದ ನಡೆಯುತ್ತಿದೆ. 2018ರಲ್ಲಿ ನಾಸಾ ಬಿಡುಗಡೆ ಮಾಡಿದ ನಕ್ಷೆಯಲ್ಲಿ ಚಂದ್ರನ ಅಗೋಚರ ಭಾಗದಲ್ಲಿ ಘನರೂಪದಲ್ಲಿ ನೀರು ಇರುವುದನ್ನು ಪತ್ತೆ ಮಾಡಿತ್ತು. 2020ರಲ್ಲಿ ಅದನ್ನು ಖಚಿತಪಡಿಸಿತು.
ಇತ್ತೀಚಿನ ಕೆಲ ವರ್ಷಗಳಲ್ಲಿ ಅಮೆರಿಕ, ಚೀನಾ, ಭಾರತ, ಜಪಾನ್ ಹಾಗೂ ಐರೋಪ್ಯ ಒಕ್ಕೂಟಗಳು ಈ ಕುರಿತು ಶೋಧ ಕಾರ್ಯ ಆರಂಭಿಸಿದವು. 2019ರಲ್ಲಿ ಇಸ್ರೇಲ್ ಹಾಗೂ 2022ರಲ್ಲಿ ಜಪಾನ್‌ನ ಪ್ರಯತ್ನಗಳು ವಿಫಲವಾದವು. ಭಾರತದ ಚಂದ್ರಯಾನ–2 (2019ರಲ್ಲಿ) ಕೂಡಾ ಕೊನೆಯ ಲ್ಯಾಂಡಿಂಗ್ ಹಂತದಲ್ಲಿ ಸಂಪರ್ಕ ಕಳೆದುಕೊಂಡಿತು.
ಆದರೆ ಚಂದ್ರನ ಅಂಗಳದ ಮೇಲಿನ ಕುಳಿಗಳು ನೌಕೆಯ ಸುರಕ್ಷಿತ ಲ್ಯಾಂಡಿಂಗ್‌ಗೆ ಇರುವ ದೊಡ್ಡ ಸವಾಲು. ಆದರೆ ಚಂದ್ರನ ಅಂಗಳದಲ್ಲಿ ನೀರು ಇರುವುದೇ ಖಚಿತವಾದರೆ ಅದರಿಂದ ಇಂಧನ, ಆಮ್ಲಜನಕ, ಕುಡಿಯುವ ನೀರು ಪಡೆಯುವ ಯೋಜನೆಗಳನ್ನೂ ಹಲವು ರಾಷ್ಟ್ರಗಳು ಹಾಕಿಕೊಂಡಿವೆ.
ಬೊರಿಸೊವ್ ಅವರ ಪ್ರಕಾರ, ಮುಂದಿನ ಏಳು ವರ್ಷಗಳಲ್ಲಿ ಕನಿಷ್ಠ 3 ಚಂದ್ರಯಾನ ಯೋಜನೆಗಳನ್ನು ರಷ್ಯಾ ಹೊಂದಿದೆಯಂತೆ. ನಂತರ ರಷ್ಯಾ ಹಾಗೂ ಚೀನಾ ಜತೆಗೂಡಿ ಮಾನವ ಸಹಿತ ಚಂದ್ರಯಾನ ಯೋಜನೆ ಹಾಕಿಕೊಂಡಿದೆ ಎಂದಿದ್ದಾರೆ.
‘ರಷ್ಯಾದ ಲೂನಾ–25 ನೌಕೆಯು ಚಂದ್ರನ ಸುತ್ತ 5ರಿಂದ 7 ದಿನ ಸುತ್ತಲಿದೆ. ಆ. 21ರಂದು ಚಂದ್ರನ ಅಂಗಳದಲ್ಲಿ ಇಳಿಯಲಿದೆ’ ಎಂದಿದ್ದಾರೆ.
1.8 ಟನ್ ಸಾಮರ್ಥ್ಯದ ಈ ನೌಕೆಯಲ್ಲಿ 31 ಕೆ.ಜಿ. ತೂಕದ ವೈಜ್ಞಾನಿಕ ಉಪಕರಣಗಳಿವೆ. ಇವು ಚಂದ್ರನ ಮೇಲ್ಮೈ ಹಾಗೂ 15 ಸೆಂ.ಮೀ. ಆಳದಲ್ಲಿರುವ ಕಲ್ಲುಗಳಲ್ಲಿ ನೀರಿನ ಅಂಶ ಕುರಿತು ಪರೀಕ್ಷಿಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.