ಮಾಸ್ಕೊ: ತಾಂತ್ರಿಕ ದೋಷದಿಂದ ಚಂದ್ರನ ಮೇಲ್ಮೈ ಮೇಲೆ ಇಳಿಯುವ ಒಂದು ದಿನದ ಮೊದಲೇ ರಷ್ಯಾದ ‘ಲೂನಾ –25’ ಬಾಹ್ಯಾಕಾಶ ನೌಕೆ ಪತನಗೊಂಡಿದೆ.
ಚಂದ್ರನಲ್ಲಿ ಘನೀಕರಣಗೊಂಡಿರುವ ನೀರು ಮತ್ತು ಅಮೂಲ್ಯ ಅಂಶಗಳಿರುವ ಕುರಿತು ಅನ್ವೇಷಣೆ ನಡೆಸಲು ಉದ್ದೇಶದಿಂದ ‘ಲೂನಾ–25’ ನೌಕೆಯನ್ನು ಆಗಸ್ಟ್ 11ರಂದು ರಷ್ಯಾ ಉಡಾವಣೆ ಮಾಡಿತ್ತು. ನೌಕೆಯು ಸೋಮವಾರ(ಆಗಸ್ಟ್ 21) ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಸಮಯ ನಿಗದಿ ಮಾಡಲಾಗಿತ್ತು.
‘ಆಗಸ್ಟ್ 21ಕ್ಕೆ ಚಂದ್ರನ ಮೇಲೆ ನೌಕೆಯನ್ನು ಇಳಿಸಲು ಯೋಜಿಸಲಾಗಿತ್ತು. ಇದರನ್ವಯ ಶನಿವಾರ ಫ್ರೀ ಲ್ಯಾಂಡಿಂಗ್ ಕಕ್ಷೆಗೆ ನೌಕೆಯನ್ನು ತರುವ ಕೆಲಸ ನಡೆದಿತ್ತು. ಸುಮಾರು 11 ಗಂಟೆಯ ವೇಳೆ ನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಯೋಜಿತ ಕಕ್ಷಗೆ ನೌಕೆಯು ಹೋಗಲು ವಿಫಲವಾಗಿದ್ದು, ಪತನಗೊಂಡಿದೆ’ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ‘ರೊಸ್ಕೋಸ್ಮಾಸ್’ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದರಿಂದ ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್ ಲ್ಯಾಂಡ್ ಮಾಡಿದ ಮೊದಲ ರಾಷ್ಟ್ರವಾಗಬೇಕು ಎಂಬ ರಷ್ಯಾದ ಕನಸು ಭಗ್ನವಾಗಿದೆ.
ಭಾರತದ ಚಂದ್ರಯಾನ–3 ನೌಕೆ ಬುಧವಾರ(ಆಗಸ್ಟ್ 23) ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.