ADVERTISEMENT

ರಷ್ಯಾದ 200 ಸೈನಿಕರ ಸಾವು

ಡೊನೆಟ್‌ಸ್ಕ್‌ ಪ್ರಾಂತ್ಯದ ವಿಮೋಚನೆಗೆ ಉಕ್ರೇನ್‌ ಪ್ರತಿದಾಳಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 22:01 IST
Last Updated 2 ಜನವರಿ 2023, 22:01 IST
   

ಕೀವ್‌/ಮಾಸ್ಕೊ (ರಾಯಿಟರ್ಸ್‌/ಎಪಿ): ಡೊನೆಟ್‌ಸ್ಕ್‌ ಪ್ರಾಂತ್ಯದ ಮಕೀವ್ಕಾ ಪಟ್ಟಣದಲ್ಲಿ ತಾತ್ಕಾಲಿಕ ಸೇನಾ ವಸತಿ ಸೌಕರ್ಯಗಳ ಮೇಲೆ ಉಕ್ರೇನ್‌ ನಡೆಸಿರುವ ಹಿಮಾರ್ಸ್‌ ಕ್ಷಿಪಣಿ ದಾಳಿಯಲ್ಲಿ 200ಕ್ಕೂ ಹೆಚ್ಚು ಸೈನಿರು
ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ಸೇನಾ ಮೂಲಗಳು ಸೋಮವಾರ ತಿಳಿಸಿವೆ.

ಆದರೆ, ರಷ್ಯಾ ರಕ್ಷಣಾ ಸಚಿವಾಲಯ 63 ಸೈನಿಕರು ಸಾವನ್ನಪ್ಪಿರುವುದಾಗಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ದಾಳಿಯ ಹೊಣೆ ಹೊತ್ತುಕೊಂಡಿರದ ಉಕ್ರೇನ್‌ ಸೇನೆ, ರಷ್ಯಾ ಸೈನಿಕರಲ್ಲಿ ಸುಮಾರು 400 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿರಬಹುದು ಎಂದು ಹೇಳಿದೆ.

ADVERTISEMENT

ಉಕ್ರೇನ್‌ ಆರು ಹಿಮಾರ್ಸ್‌ ಕ್ಷಿಪಣಿಗಳನ್ನು ಉಡಾಯಿಸಿದ್ದು, ಇದರಲ್ಲಿ ಕ್ಷಿಪಣಿಗಳನ್ನು ರಷ್ಯಾ ಪಡೆಗಳು ಹೊಡೆದುರುಳಿಸಿವೆ. ಉಳಿದ ಕ್ಷಿಪಣಿಗಳು ಗುರಿ ಭೇದಿಸಿ ರಷ್ಯಾ ಸೇನೆಗೆ ಭಾರಿ ಹಾನಿ ಉಂಟು ಮಾಡಿವೆ ಎಂದು ‘ಅಲ್‌ ಜಝೀರಾ’ ಸುದ್ದಿಸಂಸ್ಥೆ ವರದಿ ಮಾಡಿದೆ.

‌ರಷ್ಯಾದ ಕ್ಷಿಪಣಿಗಳು ಮತ್ತು ಡ್ರೋನ್ ದಾಳಿ ಎದುರಿಸಲು ಉಕ್ರೇನ್, ಅಮೆರಿಕ ಮತ್ತಿತರ ಪಾಶ್ಚಿಮಾತ್ಯ ಮಿತ್ರ ದೇಶಗಳು ಪೂರೈಸಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳನ್ನು ಬಳಸುತ್ತಿದೆ.

ರಷ್ಯಾದ ಹಿಡಿತದಲ್ಲಿರುವ ಡೊನೆಟ್‌ಸ್ಕ್‌ ಪ್ರಾಂತ್ಯದ ವಿಮೋಚನೆಗೆ ಉಕ್ರೇನ್‌ ಪಡೆಗಳು ಕೆಲವು ದಿನಗಳಿಂದ ಪ್ರತಿ ದಾಳಿ ತೀವ್ರಗೊಳಿಸಿವೆ. ಡೊನೆಟ್ಸ್ಕ್ ಪ್ರಾಂತ್ಯದ ಹಲವು ಪ್ರದೇಶಗಳ ಮೇಲೆ ರಷ್ಯಾ ನಿಯಂತ್ರಣ ಸಾಧಿಸಿದ್ದು, ಸೇನಾ ಪಡೆಗಳಿಗೆ ಪೂರೈಸಲು ಆಯಕಟ್ಟಿನ ಸ್ಥಳಗಳಲ್ಲಿ ಶಸ್ತ್ರಾಸ್ತ್ರ ಮತ್ತು ಇಂಧನ ದಾಸ್ತಾನು ಮಾಡಿದೆ.

ಉಕ್ರೇನ್‌ ಮೇಲೆ 40 ಡ್ರೋನ್‌ ದಾಳಿ: ಹೊಸ ವರ್ಷಾರಂಭದಲ್ಲೂ ಉಕ್ರೇನ್‌ ಮೇಲೆ ದಾಳಿ ತೀವ್ರಗೊಳಿಸಿರುವ ರಷ್ಯಾ ಪಡೆಗಳು ಭಾನುವಾರ ತಡರಾತ್ರಿ ಪ್ರಮುಖ ನಗರಗಳ ಮೇಲೆ ಇರಾನಿ ನಿರ್ಮಿತ ಸ್ವಯಂ ಸ್ಫೋಟದ 40 ಶಾಹಿದ್‌ ಡ್ರೋನ್‌ಗಳನ್ನು ಉಡಾಯಿಸಿದೆ.

ರಷ್ಯಾ ಪಡೆಗಳು ಸೋಮವಾರ ನಡೆಸಿದ ಡ್ರೋನ್, ಕ್ಷಿಪಣಿ ಮತ್ತು ಶೆಲ್‌ ದಾಳಿಯಲ್ಲಿ ಉಕ್ರೇನ್‌ನ ಹಲವು ಪ್ರದೇಶಗಳಲ್ಲಿ ಭಾರಿ ಹಾನಿಯಾಗಿದೆ. ಪ್ರಮುಖ ಇಂಧನ, ವಿದ್ಯುತ್, ಕುಡಿಯುವ ನೀರಿನ ಮೂಲಸೌಕರ್ಯ ನಾಶಕ್ಕೆ ಮತ್ತು ಉಕ್ರೇನ್‌ನ ಪ್ರತಿರೋಧ ಶಕ್ತಿ ಕುಂದಿಸಲು ರಷ್ಯಾ ಹಲವು ಬಾರಿ ಸ್ಫೋಟಿಸುವ ಡ್ರೋನ್‌ಗಳ ದಾಳಿ ನಡೆಸಿದೆ ಎಂದು ಉಕ್ರೇನ್‌ ಅಧಿಕಾರಿಗಳು ಹೇಳಿದ್ದಾರೆ.

ಕೀವ್‌ ನಗರ ಗುರಿಯಾಗಿಸಿ ತೂರಿಬಂದ 40 ಕ್ಷಿಪಣಿಗಳನ್ನು ವಾಯುಪಡೆ ನಾಶಪಡಿಸಿದೆ. 3 ಡ್ರೋನ್‌ಗಳು ಕೀವ್‌ ನಗರದ ಹೊರ ವಲಯ ಮತ್ತು ನೆರೆಯ ಪ್ರಾಂತ್ಯಗಳ ಮೇಲೆ ಬಿದ್ದಿವೆ. ನಗರ ಜಿಲ್ಲೆಯಲ್ಲಿ ಇಂಧನ ಮೂಲಸೌಕರ್ಯ ಹಾನಿಗೀಡಾಗಿವೆ ಎಂದು ಮೇಯರ್ ವಿಟಾಲಿ ಕ್ಲಿಟ್‌ಸ್ಕೊ ಹೇಳಿದ್ದಾರೆ.

39 ಶಾಹಿದ್‌ ಡ್ರೋನ್‌ಗಳು, ಎರಡು ಓರ್ಲಾನ್ ಡ್ರೋನ್‌ಗಳು ಹಾಗೂ ಎಕ್ಸ್ -59 ಕ್ಷಿಪಣಿಗಳನ್ನು ವಾಯು ರಕ್ಷಣಾ ವ್ಯವಸ್ಥೆಯಿಂದ ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ವಾಯುಪಡೆಯ ಕಮಾಂಡ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.