ADVERTISEMENT

ಐಎಸ್‌ಗೆ ಮಾಸ್ಕೊ ಮೇಲೆ ದಾಳಿ ನಡೆಸುವಷ್ಟು ಸಾಮರ್ಥ್ಯವಿದೆ ಎನಿಸುತ್ತಿಲ್ಲ: ರಷ್ಯಾ

ರಾಯಿಟರ್ಸ್
Published 28 ಮಾರ್ಚ್ 2024, 5:09 IST
Last Updated 28 ಮಾರ್ಚ್ 2024, 5:09 IST
ಮಾಸ್ಕೊ ಸಭಾಂಗಣದ ಅವಶೇಷಗಳನ್ನು ತೆರವುಗೊಳಿಸುತ್ತಿರುವ ರಕ್ಷಣಾ ಸಿಬ್ಬಂದಿ
ಮಾಸ್ಕೊ ಸಭಾಂಗಣದ ಅವಶೇಷಗಳನ್ನು ತೆರವುಗೊಳಿಸುತ್ತಿರುವ ರಕ್ಷಣಾ ಸಿಬ್ಬಂದಿ    ರಾಯಿಟರ್ಸ್ ಚಿತ್ರ

ಮಾಸ್ಕೊ: ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರ ಸಂಘಟನೆಯು ಮಾಸ್ಕೊದ ಸಭಾಂಗಣದ ಮೇಲೆ ದಾಳಿ ನಡೆಸುವಷ್ಟು ಸಾಮರ್ಥ್ಯ ಹೊಂದಿರಬಹುದು ಎಂಬುದನ್ನು ನಂಬಲಾಗುತ್ತಿಲ್ಲ ಎಂದು ರಷ್ಯಾ ವಿದೇಶಾಂಗ ಇಲಾಖೆ ವಕ್ತಾರೆ ಮರಿಯಾ ಝಖರೋವಾ ಹೇಳಿದ್ದಾರೆ.

ರಷ್ಯಾದಲ್ಲಿ ಕಳೆದ ಎರಡು ದಶಕಗಳ ಅವಧಿಯಲ್ಲಿ ನಡೆದ ಅತ್ಯಂತ ಭೀಕರವಾದ ಈ ದಾಳಿಯ ಹಿಂದೆ ಉಕ್ರೇನ್‌ ಕೈವಾಡವಿದೆ ಎಂಬ ವಾದವನ್ನು ಅವರು ಪುನರುಚ್ಛರಿಸಿದ್ದಾರೆ.

ರಷ್ಯಾ ರಾಜಧಾನಿಯ ಅತೀ ದೊಡ್ಡ ಒಳಾಂಗಣ ಸಭಾಂಗಣವಾದ ಕ್ರಾಕಸ್ ಸಿಟಿ ಹಾಲ್‌ನಲ್ಲಿ ಶುಕ್ರವಾರ ರಾತ್ರಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ನುಗ್ಗಿದ್ದ ಶಸ್ತ್ರಸಜ್ಜಿತ ಉಗ್ರರು ಮನಬಂದಂತೆ ಗುಂಡು ಹಾರಿಸಿದ್ದರು. ಈ ಭೀಕರ ದಾಳಿಯಲ್ಲಿ 143 ಜನರು ಮೃತಪಟ್ಟಿದ್ದಾರೆ. ತುರ್ತು ಕಾರ್ಯಾಚರಣೆ ಸಚಿವಾಲಯವು ಮೃತಪಟ್ಟವರ ಹೆಸರುಗಳನ್ನು ಪ್ರಕಟಿಸಿದೆ.

ADVERTISEMENT

ಐಎಸ್‌ ಸಂಘಟನೆಯು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಸಂಘಟನೆಯ ಅಫ್ಗಾನಿಸ್ತಾನ ಘಟಕ 'ಐಎಸ್‌ ಖೊರಾಸನ್‌' ಈ ಕೃತ್ಯವೆಸಗಿದೆ ಎಂದು ಗುಪ್ತಚರ ಮಾಹಿತಿ ಆಧರಿಸಿ ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ. ದಾಳಿ ಸಾಧ್ಯತೆಯ ಬಗ್ಗೆ ಕೆಲವು ವಾರಗಳ ಹಿಂದೆಯೇ ಎಚ್ಚರಿಕೆ ನೀಡಿದ್ದಾಗಿಯೂ ಅವರು ತಿಳಿಸಿದ್ದಾರೆ.

ಮಾಸ್ಕೊ ಮೇಲಿನ ದಾಳಿಗೂ ತನಗೂ ಸಂಬಂಧವಿಲ್ಲ ಎಂದು ಉಕ್ರೇನ್‌ ಮತ್ತೆ ಮತ್ತೆ ಪ್ರತಿಪಾದಿಸುತ್ತಿದೆ. ಆದರೆ, ಮರಿಯಾ ಅವರು, ಈ ದಾಳಿಯ ಹೊಣೆಯನ್ನು ಐಎಸ್‌ ಮೇಲೆ ಹಾಕಲು ಉಕ್ರೇನ್‌ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ದಾಳಿಯ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಉಕ್ರೇನ್‌, ಆರೋಪಗಳಿಂದ ಹೊರಬರಲು ಪ್ರಯತ್ನಿಸಿತು. ಅದರಂತೆ, ದಾಳಿಯ ಹೊಣೆಯನ್ನು ಐಎಸ್‌ ತಲೆಗೆ ಕಟ್ಟಿತು. ಅದಕ್ಕೆ ತಕ್ಕಂತೆ ಆಂಗ್ಲೋ–ಸ್ಯಾಕ್ಸೊನ್ ಬೆಂಬಲಿತ ಮಾಧ್ಯಮಗಳು ವರದಿಗಳನ್ನು ಪ್ರಕಟಿಸಿದವು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.