ಮಾಸ್ಕೊ: ರಷ್ಯಾದ ಗಡಿ ಪ್ರದೇಶಗಳ ಮೇಲೆ ಆಕ್ರಮಣ ನಡೆಸಲು ಯತ್ನಿಸಿದ 234 ದಾಳಿಕೋರರನ್ನು ಸೇನೆ ಮತ್ತು ಭದ್ರತಾ ಪಡೆಗಳು ಮಂಗಳವಾರ ರಾತ್ರಿ ಹತ್ಯೆ ಮಾಡಿವೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.
ಉಕ್ರೇನ್ ಸರ್ಕಾರ ಮತ್ತು ಉಕ್ರೇನ್ ಭಯೋತ್ಪಾದಕ ಗುಂಪುಗಳು ಈ ಆಕ್ರಮಣಕ್ಕೆ ಯತ್ನಿಸಿದ್ದವು. ರಷ್ಯಾದ ಮಿಲಿಟರಿ ಮತ್ತು ಗಡಿ ಭದ್ರತಾ ಪಡೆಗಳು ದಾಳಿಕೋರರನ್ನು ಹತ್ತಿಕ್ಕಲು ಮತ್ತು ಗಡಿಯಾಚೆಗಿನ ದಾಳಿ ತಡೆಯಲು ಸಮರ್ಥವಾಗಿವೆ. ದಾಳಿಕೋರರ ಏಳು ಟ್ಯಾಂಕ್‌ಗಳು ಮತ್ತು ಐದು ಶಸ್ತ್ರಸಜ್ಜಿತ ವಾಹನಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಆದರೆ, ಈ ಸಶಸ್ತ್ರ ಆಕ್ರಮಣವು ರಷ್ಯಾದ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ದಿನಗಳ ಮೊದಲು ಗಡಿ ಪ್ರದೇಶವನ್ನು ಆತಂಕಕ್ಕೀಡು ಮಾಡಿದೆ.
ಉಕ್ರೇನ್‌ಗಾಗಿ ಹೋರಾಡುತ್ತಿರುವ ರಷ್ಯಾದ ಸ್ವಯಂಸೇವಕರು ಗಡಿಯನ್ನು ದಾಟಿದ್ದಾರೆ ಎಂದು ಉಕ್ರೇನ್‌ನ ಅಧಿಕಾರಿಗಳು ಹೇಳಿದ್ದಾರೆ.
ದಿ ಫ್ರೀಡಂ ಆಫ್ ರಷ್ಯಾ ಲೀಜನ್, ದಿ ರಷ್ಯನ್ ವಾಲಂಟೀರ್ ಕಾರ್ಪ್ಸ್ ಮತ್ತು ದಿ ಸೈಬೀರಿಯನ್ ಬೆಟಾಲಿಯನ್, ರಷ್ಯಾದ ಗಡಿ ಪ್ರದೇಶಗಳ ದೃಶ್ಯವಿರುವ ಕೆಲವು ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದು, ‘ಪುಟಿನ್ ಸರ್ವಾಧಿಕಾರದಿಂದ ವಿಮೋಚಿತ ರಷ್ಯಾ ಬೇಕು’ ಎಂದು ಅದರಲ್ಲಿ ಹೇಳಿವೆ. ಆದರೆ, ಈ ವಿಡಿಯೊಗಳ ನೈಜತೆಯನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.