ADVERTISEMENT

ಬೇಹುಗಾರಿಕೆ ಆರೋಪ: ಬ್ರಿಟನ್ ರಾಜತಾಂತ್ರಿಕರನ್ನು ಹೊರಹಾಕಲಿರುವ ರಷ್ಯಾ

ಎಪಿ
Published 13 ಸೆಪ್ಟೆಂಬರ್ 2024, 12:54 IST
Last Updated 13 ಸೆಪ್ಟೆಂಬರ್ 2024, 12:54 IST
ಬ್ರಿಟನ್ ರಾಷ್ಟ್ರಧ್ವಜ
ಬ್ರಿಟನ್ ರಾಷ್ಟ್ರಧ್ವಜ   

ಮಾಸ್ಕೊ: ಬ್ರಿಟನ್ನಿನ ಆರು ಮಂದಿ ರಾಜತಾಂತ್ರಿಕರು ಬೇಹುಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿರುವ ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್‌ (ಎಫ್‌ಎಸ್‌ಬಿ), ಇವರಿಗೆ ನೀಡಿರುವ ಮಾನ್ಯತೆಯನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದೆ.

ಈ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಲಾಗುತ್ತದೆ ಎಂದು ಎಫ್‌ಎಸ್‌ಬಿ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ರಷ್ಯಾದ ಸರ್ಕಾರಿ ಸ್ವಾಮ್ಯದ ಟಿ.ವಿ. ವಾಹಿನಿ ಹೇಳಿದೆ. ಬ್ರಿಟನ್ ಪ್ರಧಾನಿ ಕಿಯರ್ ಸ್ಟಾ‌ರ್ಮರ್ ಅವರು ವಾಷಿಂಗ್ಟನ್‌ಗೆ ಭೇಟಿ ನೀಡುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.

ಪಾಶ್ಚಿಮಾತ್ಯ ರಾಷ್ಟ್ರಗಳು ಪೂರೈಸಿರುವ ಶಸ್ತ್ರಾಸ್ತ್ರಗಳನ್ನು ರಷ್ಯಾದ ಗಡಿಯೊಳಕ್ಕೆ ಬಳಕೆ ಮಾಡಲು ಉಕ್ರೇನ್ ಅನುಮತಿ ಕೋರಿರುವುದು ಸೇರಿದಂತೆ ಹಲವು ವಿಷಯಗಳನ್ನು ಸ್ಟಾರ್ಮರ್ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಚರ್ಚಿಸಲಿದ್ದಾರೆ.

ADVERTISEMENT

ವಾಷಿಂಗ್ಟನ್‌ಗೆ ತೆರಳುವ ಸಂದರ್ಭದಲ್ಲಿ ಸ್ಟಾರ್ಮರ್ ಅವರು, ‘ರಷ್ಯಾದ ಜೊತೆ ಬ್ರಿಟನ್ ಸಂಘರ್ಷ ಬಯಸುವುದಿಲ್ಲ’ ಎಂದು ಹೇಳಿದ್ದಾರೆ. ‘ಈ ಸಂಘರ್ಷವನ್ನು ಶುರುಮಾಡಿದ್ದು ರಷ್ಯಾ. ಅದು ಉಕ್ರೇನ್ ಮೇಲೆ ಅಕ್ರಮವಾಗಿ ಆಕ್ರಮಣ ನಡೆಸಿತು. ಈಗ ರಷ್ಯಾ ಈ ಸಂಘರ್ಷವನ್ನು ನೇರವಾಗಿ ಕೊನೆಗೊಳಿಸಬಹುದು’ ಎಂದು ಕೂಡ ಸ್ಟಾರ್ಮರ್ ಹೇಳಿದ್ದಾರೆ.

ಬ್ರಿಟನ್ನಿನ ವಿದೇಶಾಂಗ ಕಚೇರಿಯ ವಿಭಾಗವೊಂದು ಈ ರಾಜತಾಂತ್ರಿಕರನ್ನು ರಷ್ಯಾಕ್ಕೆ ಕಳುಹಿಸಿದೆ. ಇವರ ಮುಖ್ಯ ಗುರಿ ರಷ್ಯಾಕ್ಕೆ ಮಹತ್ವದ ಸೋಲು ಎದುರಾಗುವಂತೆ ಮಾಡುವುದು. ರಾಜತಾಂತ್ರಿಕರು ಗುಪ್ತಚರ ಮಾಹಿತಿ ಸಂಗ್ರಹ ಹಾಗೂ ವ್ಯವಸ್ಥೆಯನ್ನು ಅಡಿಮೇಲು ಮಾಡುವ ಕೃತ್ಯಗಳಲ್ಲಿ ತೊಡಗಿದ್ದರು ಎಂಬುದನ್ನು ಹೇಳುವ ದಾಖಲೆಗಳು ದೊರೆತಿವೆ ಎಂದು ಎಫ್‌ಎಸ್‌ಬಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.